ಉರಿಗೌಡ ನಂಜೇಗೌಡರ ಬಗ್ಗೆ ಇನ್ನುಮುಂದೆ ಚರ್ಚೆ ಮಾಡದಂತೆ ಸುಮ್ಮನಿರಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಮಂಡ್ಯ (ಮಾ.20): ರಾಜ್ಯ ರಾಜಕಾರಣದಲ್ಲಿ ಬಹುಮುಖ್ಯ ಚರ್ಚೆಯ ವಿಷಯವಾಗಿರುವ ಉರಿಗೌಡ ನಂಜೇಗೌಡರ ಬಗ್ಗೆ ಇನ್ನುಮುಂದೆ ಚರ್ಚೆ ಮಾಡದಂತೆ ಸುಮ್ಮನಿರಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಉರಿಗೌಡ- ನಂಜೇಗೌಡ ವಿಚಾರಕ್ಕೆ ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿಗಳೇ ಮಧ್ಯಸ್ಥಿಕೆವಹಿಸಿ ಎಲ್ಲದಕ್ಕೂ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಈಗಾಗಲೇ ಉರಿಗೌಡ ನಂಜೇಗೌಡ ಸಿನಿಮಾ ಮಾಡಲು ಮುಂದಾಗಿದ್ದ ಸಚಿವ ಮುನಿರತ್ನ ಅವರನ್ನು ಕರೆಸಿಕೊಂಡು ಸಿನಿಮಾ ನಿರ್ಮಾಣ ಕೈಬಿಡುವಂತೆ ಸ್ವಾಮೀಜಿ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಿನಿಮಾ ನಿರ್ಮಾಣ ಕೈಬಿಟ್ಟಿರುವುದಾಗಿ ಮುನಿರತ್ನ ಹೇಳಿದ್ದರು. ಇದರ ನಂತರ, ರಾಜ್ಯ ಒಕ್ಕಲಿಗ ಬಿಜೆಪಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಈ ವಿಚಾರ ಚರ್ಚೆ ಮಾಡದಂತೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಆದಿಚುಂಚನಗಿರಿ ಶ್ರೀಗಳಿಂದ ತರಾಟೆ: ಉರಿಗೌಡ ನಂಜೇಗೌಡ ಸಿನಿಮಾ ಕೈಬಿಟ್ಟ ಮುನಿರತ್ನ
ಚರ್ಚೆ ಮಾಡದಂತೆ ಮೂವರಿಗೆ ಸಲಹೆ: ಮಂಡ್ಯ ಬಳಿಯ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು, ರಾಜ್ಯಕ್ಕೆ ಮಾಡಬೇಕಾದ ಸಾಕಷ್ಟು ವಿಚಾರ, ಕೆಲಸಗಳಿವೆ. ಆದರೆ ಅದನ್ನು ಬಿಟ್ಟು ಉರಿಗೌಡ, ನಂಜೇಗೌಡ ವಿಚಾರ ಮುಂದೆ ಇಟ್ಟು ಗೊಂದಲ ಸೃಷ್ಟಿ ಸರಿಯಲ್ಲ. ಈ ಕುರಿತು ಮಾತನಾಡುತ್ತಿದ್ದವರಿಗೆ ಸಲಹೆ ನೀಡಿದ್ದೇನೆ. ಸಿಟಿ ರವಿ, ಅಶ್ವಥ ನಾರಾಯಣ, ಗೋಪಾಲಯ್ಯ ಸೇರಿದಂತೆ ಹಲವರಿಗೆ ಸಲಹೆ. ಇನ್ಮುಂದೆ ಈ ವಿಚಾರ ಚರ್ಚಿಸದಂತೆ, ಸುಮ್ಮನಾಗುವಂತೆ ಹೇಳಿದ್ದೇನೆ ಎಂದರು.
ಒಂದು ಸಮುದಾಯ ಹಾಳು ಮಾಡಬೇಡಿ: ಉರಿಗೌಡ ನಂಜೇಗೌಡ ವಿಚಾರದಲ್ಲಿ ಸಾಕಷ್ಟು ದಿನಗಳಿಂದ ವಿದ್ಯಮಾನಗಳು ಜರುಗುತ್ತಿವೆ. ಕಲ್ಪನೆ ಮಾಡಿ ಬರೆಯುವುದು ಕಾದಂಬರಿ ಆಗಿದೆ. ಶಾಸನ ಮತ್ತು ಇತಿಹಾಸ ಹಿನ್ನೆಲೆ ಮುಂದಿನ ಪೀಳಿಗೆಗೆ ಶಕ್ತಿ ಆಗುತ್ತದೆ. ಅಂತಹ ಕುರುಹು ಇದುವರೆಗೂ ಕಂಡು ಬಂದಿಲ್ಲ. ಇಂತಹ ಹೇಳಿಕೆ ನೀಡಿದರೆ ಈ ಸಮಯದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಯುವಕರು ಗೊಂದಲಕ್ಕೀಡಾಗುತ್ತಾರೆ ಹಾಗೂ ಸಮುದಾಯದವನ್ನು ಹಾಳು ಮಾಡಬಾರದು.
ಇದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ ಎಂದು ಹೇಳಿದರು.
ಉರಿಗೌಡ, ನಂಜೇಗೌಡ ಸಿನಿಮಾ ವಿವಾದ: ಮುನಿರತ್ನಗೆ ಚುಂಚಶ್ರೀ ಬುಲಾವ್ !
ಸಿನಿಮಾ ಮಾಡುವುದಿಲ್ಲವೆಂದು ಮುನಿರತ್ನ ಒಪ್ಪಿಗೆ: ಉರಿಗೌಡ ನಂಜೇಗೌಡ ಸಿನಿಮಾ ಮಾಡುವುದರ ಕುರಿತಾಗಿ ನಿನ್ನೆ ಸಿನಿಮಾ ಪೋಸ್ಟ್ ಒಂದನ್ನು ನೋಡಿದ್ದೆನು. ಈ ಬಗ್ಗೆ ಸಚಿವ ಹಾಗೂ ನಿರ್ಮಾಪಕರಾಗಿರುವ ಮುನಿರತ್ನ ಈ ಸಿನಿಮಾ ಮಾಡುತ್ತಿದ್ದರೆಂದಯ ಗೊತ್ತಾಯಿತು. ಇಂದು ಅವರನ್ನು ಕರೆಸಿ ಮಾತನಾಡಿದ್ದೇನೆ. ಐತಿಹಾಸಿಕ ಹಿನ್ನೆಲೆ ಸ್ಪಷ್ಟತೆ ಇಲ್ಲದಿರುವುದನ್ನು ಸಿನಿಮಾ ಮಾಡುವುದು ಸೂಕ್ತ ಅಲ್ಲ. ಒಂದು ಸಮುದಾಯದ ಅಸ್ಮಿತೆ ಮತ್ತು ಪ್ರತಿನಿಧಿ ಮಾಡುತ್ತಿರುವ ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸೂಕ್ತ ಅಲ್ಲ ಎಂದು ಸಲಹೆಯನ್ನು ನೀಡಲಾಯಿತು. ಈ ವೇಳೆ ಯಾರಿಗೂ ನೋವು ಮಾಡುವ ಉದ್ದೇಶ ನನ್ನದಲ್ಲ. ಈ ಸಿನಿಮಾವನ್ನು ಇವತ್ತು ಅಲ್ಲ ಎಂದಿಗೂ ನಾನು ಮಾಡಲ್ಲ ಎಂದು ಮುನಿರತ್ನ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.