* ಪ್ರತಿಭಟನೆಗೆ ಸದನ ಬಳಕೆ ಏಕೆ? ಇದರಿಂದ ಪೀಠಕ್ಕೆ ಅಗೌರವ: ಮಾಧುಸ್ವಾಮಿ
* ರಾಷ್ಟ್ರಧ್ವಜಕ್ಕೆ ಅವಮಾನ ಸದನದಲ್ಲಿ ಚರ್ಚಿಸದೇ ಇನ್ನೆಲ್ಲಿ ಚರ್ಚಿಸಬೇಕು?: ಕಾಂಗ್ರೆಸ್
* ಸಂವಿಧಾನದ ಬಗ್ಗೆ ಗೌರವ ಇದ್ದರೆ ಸದನದ ಸಮಯ ಹಾಳು ಮಾಡಬಾರದು
ಬೆಂಗಳೂರು(ಫೆ.22): ಅಧಿವೇಶನ ನಡೆಸಲು ಅವಕಾಶ ಮಾಡಿಕೊಡದೇ ಕಾಂಗ್ರೆಸ್(Congress) ಸದಸ್ಯರು ಸಭಾಪತಿ ಮತ್ತು ಅವರ ಪೀಠಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಮಾತು ಸದನದಲ್ಲಿ(Session) ಕೆಲಕಾಲ ಕೋಲಾಹಲ ಸೃಷ್ಟಿಸಿತು.
ಭೋಜನ ವಿರಾಮದ ಕಾಂಗ್ರೆಸ್ ಸದಸ್ಯರು ಪೀಠದ ಮುಂದೆ ಬಂದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಈಶ್ವರಪ್ಪ(KS Eshwarappa) ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ(National Flag) ಅಪಮಾನ ಆಗುವಂತಹ ವಿಚಾರಗಳಿಲ್ಲ. ಯಾವುದೇ ಕಾರಣಕ್ಕೂ ಅವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂದು ಸರ್ಕಾರ(Government of Karnataka) ಸ್ಪಷ್ಟಪಡಿಸಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯವ್ಯಾಪಿ ಸ್ಥಳವಿದೆ. ಆರೋಪ ಸಾಬೀತು ಪಡಿಸಿದರೆ ಶಿಕ್ಷೆ ನೀಡಲು ನ್ಯಾಯಾಲಯವಿದೆ. ತಮ್ಮ ಹೋರಾಟಕ್ಕೆ ಸದನವನ್ನು ಬಳಸಿಕೊಳ್ಳುವುದು ಸರಿ ಅಲ್ಲ ಎಂದರು.
Flag Row: ಕಾಂಗ್ರೆಸ್ ನಾಯಕರು ಸುಮ್ಮನೆ ಸಮಯ ವ್ಯರ್ಥ ಮಾಡ್ತಿದ್ದಾರೆ: ಸುಧಾಕರ್
ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿ ಸಾರ್ವಜನಿಕ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡದೇ ಅಧಿವೇಶನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಸಭಾಧ್ಯಕ್ಷರಿಗೆ ಮತ್ತು ಅವರ ಪೀಠಕ್ಕೆ ಮಾಡುತ್ತಿರುವ ಅಪಮಾನ ಎಂದರು, ಇದಕ್ಕೆ ಬಿಜೆಪಿ ಸದಸ್ಯರಾದ ಭಾರತಿ ಶೆಟ್ಟಿ, ಆಯನೂರು ಮಂಜುನಾಥ್ ದನಿಗೂಡಿಸಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರಕಾಶ ರಾಥೋಡ್ ಮತ್ತು ಸಲೀಂ ಅಹಮ್ಮದ್, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಕರಣವನ್ನು ಸದನದಲ್ಲಿ ಚರ್ಚಿಸದೆ ಮತ್ತೆಲ್ಲಿ ಚರ್ಚಿಸಬೇಕು? ನಾವು ಕೇವಲ ಈಶ್ವರಪ್ಪ ವಜಾಕ್ಕೆ ಒತ್ತಾಯಿಸುತ್ತಿದೇವೆ ಹೊರತು ಸಭಾತಿಗಳನ್ನು ವಿರೋಧಿಸುತ್ತಿಲ್ಲ. ಸಚಿವರ ಮಾತನ್ನು ಒಪ್ಪುವುದಿಲ್ಲ. ಪ್ರತಿಭಟನೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದರು.
‘ಸಂವಿಧಾನದ(Constitution) ಬಗ್ಗೆ ಗೌರವ ಇದ್ದರೆ ಸದನದ ಸಮಯ ಹಾಳು ಮಾಡಬಾರದು. ಸಭಾಪತಿಗಳಿಗೆ ಗೌರವ ನೀಡಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲ ಕಾಂಗ್ರೆಸ್ ಸದಸ್ಯರಿಗಿಲ್ಲ’ ಎಂದು ಸಚಿವ ಮಾಧುಸ್ವಾಮಿ ಕಿಡಿಕಾರಿದರು. ಇದಕ್ಕೆ ಪ್ರತಿಪಕ್ಷದಿಂದ ಅಪಮಾನ ಆಗಿದೆಯೇ ಎಂಬುದನ್ನು ಸಭಾಪತಿಗಳೇ ಸ್ಪಷ್ಟಪಡಿಸಲಿ’ ಎಂದು ವಿರೋಧಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಸೇರಿದಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
Karnataka Politics ಹೊರಗಡೆ ಹಿಜಾಬ್ ಕಿಚ್ಚು, ಸದನದೊಳಗೆ ಧ್ವಜ ಕದನ
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti), ‘ನಾನು ಎಲ್ಲಿಯೂ ಅಪಮಾನ ಮಾಡಿದ್ದೀರಿ ಎಂದು ಹೇಳಿಲ್ಲ. ನಿಲುವಳಿ ತಿರಸ್ಕೃತಗೊಂಡ ನಂತರವೂ ತಿಳಿಯಾದ ವಾತಾವರಣ ಇರಲಿ ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಟ್ಟಿದ್ದೆ ಅಷ್ಟೇ’ ಎಂದರು. ನಂತರವೂ ಆಡಳಿತಪಕ್ಷ ಮತ್ತು ಪ್ರತಿಪಕ್ಷದ ನಡುವೆ ವಾಗ್ವಾದಗಳು ಮತ್ತು ಪರಸ್ಪರ ಘೋಷಣೆಗಳು ನಡೆದವು.
ಧರಣಿ ಪದಕ್ಕೆ ಕಾಂಗ್ರೆಸ್ ನಾಯಕರಿಂದ ಹೊಸ ವ್ಯಾಖ್ಯಾನ: ಮುನಿರಾಜುಗೌಡ
ಧರಣಿ ಎಂದರೆ ಏನು ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನು ಕಾಂಗ್ರೆಸ್‌ನ ನಾಯಕರು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ (Muniraju Gowda) ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸುವ ಭರಾಟೆಯಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ತಿಲಾಂಜಲಿಯಿಟ್ಟಿದ್ದಾರೆ.
ಧರಣಿ ಅಂದರೆ ಅಸಲಿಗೆ ಅರ್ಥ ಗೊತ್ತಿಲ್ಲದ ನಾಯಕರು, ಪ್ರಜಾಪ್ರಭುತ್ವವನ್ನು ರಾಜ್ಯದಲ್ಲಿ ಹೇಗೆ ಎತ್ತಿ ಹಿಡಿಯುತ್ತಾರೆ? ಧರಣಿ ಅಂದರೆ, ಒಂದು ಕಡೆ ಕುಳಿತು, ಆಗಿರುವ ಅಥವಾ ಆಗುತ್ತಿರುವ ಕಾರ್ಯವನ್ನು ಖಂಡಿಸುವುದು. ಅದನ್ನು ಒಪ್ಪದಿರುವುದು. ಆದರೆ, ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ದನಿ ಎತ್ತಿ ಧರಣಿ ನಡೆಸುತ್ತಿರುವ ನಾಯಕರು ಬೇಕಾದಾಗಲೆಲ್ಲ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದನದಿಂದ ಹೊರ ಹೋಗುತ್ತಿದ್ದಾರೆ, ಒಳ ಬರುತ್ತಿದ್ದಾರೆ. ಅಭಿನಂದನಾ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಇದನ್ನು ಧರಣಿ ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.