Karnataka Politics: ರಾಮನಗರ ಮುಖಂಡರು ಬಿಜೆಪಿ ತೆಕ್ಕೆಗೆ, ಮತ್ತೆ ಅಧಿಕಾರ ಪಕ್ಕಾ ಎಂದ ಸಿಎಂ

By Kannadaprabha News  |  First Published Feb 22, 2022, 3:34 AM IST

* ರಾಜ್ಯದಲ್ಲಿ ಮತ್ತೆ ಬಿಜೆಪಿಗೆ  ಅಧಿಕಾರ: ಸಿಎಂ ಬೊಮ್ಮಾಯಿ

* ಬಿಜೆಪಿ ಪರವಾದ ಅಲೆ ದೊಟ್ಟಶಕ್ತಿಯಾಗಿ ಪರಿವರ್ತನೆ

* ರಾಮನಗರ, ಬೆಳಗಾವಿ ಮುಖಂಡರು ಬಿಜೆಪಿ ಸೇರ್ಪಡೆ


ಬೆಂಗಳೂರು(ಫೆ. 22)  2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬದ್ಧತೆಯ ಕಾರ್ಯಕರ್ತರು ಮತ್ತು ಮುಖಂಡರ ನೆರವಿನಿಂದ ಬಿಜೆಪಿ (BJP) ಮತ್ತೊಮ್ಮೆ ಅಧಿಕಾರ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ರಾಮನಗರ (Ramanagara)ಮತ್ತು ಬೆಳಗಾವಿ (Belagavi) ಜಿಲ್ಲೆಯ ಖಾನಾಪುರದ ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

Tap to resize

Latest Videos

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆ ಕಾರ್ಯ ಪ್ರಾರಂಭಗೊಂಡಿದೆ. ಬಿಜೆಪಿ ಆಳವಾಗಿ ಬೇರೂರಿ ಶಕ್ತಿ ಪಡೆದಿರದ ಪ್ರದೇಶಗಳಲ್ಲಿ ಪಕ್ಷವು ಇನ್ನಷ್ಟುಶಕ್ತಿಶಾಲಿಯಾಗಿ ಬೆಳೆಯಲಿದೆ. ರಾಜಕಾರಣ ನಿಂತ ನೀರಲ್ಲ ಎಂಬ ಮಾತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೆಲೆಯಾಗಿದ್ದ ಜಿಲ್ಲೆಗಳಲ್ಲಿ ಇಂದು ದೊಡ್ಡ ಬದಲಾವಣೆ ಆಗುತ್ತಿದೆ. ಬರುವಂತಹ ದಿನಗಳಲ್ಲಿ ಎಲ್ಲ ಕಡೆ ಬಿಜೆಪಿಯ ಕಮಲ ಅರಳಲಿದೆ ಎಂದು ಹೇಳಿದರು.

ಡಿಕೆಶಿ ನೇರಾ ನೇರ ಸಂದರ್ಶನ

ಬಿಜೆಪಿ ಪರವಾದ ಈ ಅಲೆಯು ದೊಡ್ಡ ಶಕ್ತಿಯಾಗಿ ಪರಿವರ್ತನೆಗೊಳ್ಳಲಿದೆ. ಈಗ ಪಕ್ಷ ಸೇರಿದ ಮಾಜಿ ಶಾಸಕ ಅರವಿಂದ ಪಾಟೀಲ…, ಲಿಂಗೇಶ್‌ ಕುಮಾರ್‌ ಮತ್ತಿತರರು ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿಗಳು. ಹೀಗಾಗಿ ಪಕ್ಷ ಹೆಚ್ಚು ಬಲಯುತವಾಗಿ ಬೆಳೆಯಲಿದೆ. ಬಿಜೆಪಿ ಸಕಾರಾತ್ಮಕ ರಾಜಕೀಯ ಮಾಡುತ್ತದೆ. ಆಡಳಿತಕ್ಕೆ ಬಂದ ಬಳಿಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರಿಗಾಗಿ ಮೈಮುರಿದು ದುಡಿಯುತ್ತಿದ್ದೇವೆ. ನಳಿನ್‌ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ಪಕ್ಷವು ರಾಜ್ಯಾದ್ಯಂತ ದೃಢವಾಗಿ ಬೆಳೆದಿದೆ ಎಂದರು.

ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕರಾದ ಅರವಿಂದ ಪಾಟೀಲ್‌ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು. ರಾಮನಗರ ಜಿಲ್ಲೆಯ ಮುಖಂಡರು ಹಾಗೂ ಬಮುಲ… ಮಾಜಿ ನಿರ್ದೇಶಕರಾದ ಲಿಂಗೇಶ್‌ಕುಮಾರ್‌, ಜಿಪಂ ಮಾಜಿ ಸದಸ್ಯರಾದ ಎಚ್‌.ಎನ್‌.ಅಣ್ಣಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಮರಿಲಿಂಗೇಗೌಡರ ಮಕ್ಕಳಾದ ಗೌತಮ್‌, ಡಾ.ವಿವೇಕಾನಂದ, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಪ್ರಸಾದ್‌ ಗೌಡ(ಮಾಗಡಿ), ನಗರಸಭಾ ಮಾಜಿ ಸದಸ್ಯರಾದ ಕೃಷ್ಣೇಗೌಡ, ಗೋಪಾಲಕೃಷ್ಣ ಸೇರಿದಂತೆ ಹಲವರು ಬಿಜೆಪಿಗೆ ಸೇರಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌, ಶಶಿಲ್‌ ಜಿ.ನಮೋಶಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಸಿದ್ದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.


ಜೆಡಿಎಸ್ ಪ್ರತಿಭಟನೆ: ಆಡಳಿತ ಪಕ್ಷದ ಅಸಮರ್ಥತೆ ಮತ್ತು ಅಧಿಕೃತ ಪ್ರತಿಪಕ್ಷದ ಪ್ರತಿಷ್ಠೆಯಿಂದ ವಿಧಾನಮಂಡಲ ಕಲಾಪ ಸಮರ್ಪಕವಾಗಿ ನಡೆಯದೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಇರುವ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ವಿಧಾನಸಭೆ ಮತ್ತು ಪರಿಷತ್‌ ಸದಸ್ಯರು ಪ್ರತಿಭಟನೆ ನಡೆಸಿ, ಎರಡೂ ರಾಷ್ಟ್ರೀಯ ಪಕ್ಷಗಳು ಸದನದ ಸಮಯವನ್ನು ಹಾಳು ಮಾಡುತ್ತಿದೆ. ಅತ್ಯಂತ ಪ್ರಮುಖ ಚರ್ಚೆಗೆ ವೇದಿಕೆಯಾಗಬೇಕಾದ ಸದನಗಳ ಕಲಾಪಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಧರಣಿ ತಡೆಯದೆ ಬಿಜೆಪಿ ಕಲಾಪವನ್ನು ಹಾಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತುಕತೆ ಮೂಲಕ ಮನವೊಲಿಸಬೇಕು. ಇಲ್ಲವೇ ಸದನದಿಂದ ಹೊರಹಾಕುವ ತೀರ್ಮಾನ ಕೈಗೊಳ್ಳಬೇಕು. ಅತ್ಯಂತ ಮಹತ್ವದ ಚರ್ಚೆಗಳು ಮತ್ತು ಸಮಸ್ಯೆಗಳ ಮೇಲೆ ವಿಚಾರ ವಿನಿಮಯ ಆಗಬೇಕಿದೆ. ಇದಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯನ್ನು ಮುಂದಿಟ್ಟು ಸದನವನ್ನು ಹಾಳು ಮಾಡುತ್ತಿವೆ. ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ರಾಷ್ಟ್ರೀಯ ಪಕ್ಷಗಳಿಗೆ ಆಸಕ್ತಿ ಇಲ್ಲ ಎಂದರು.

click me!