ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಜಾತಿನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡ (ಫೆ.17): ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಜಾತಿನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಲವು ಬಾರಿ ಮೋದಿ ಅವರ ಬಗ್ಗೆ ಜಾತಿನಿಂದನೆ ಮಾಡಿದ್ದಾರೆ. ದುರ್ದೈವ ಅವರಿಗೆ ತಿಳಿವಳಿಕೆಯೇ ಬರೋದಿಲ್ಲ. ಈಗಾಗಲೇ ಈ ರೀತಿ ಮಾತನಾಡಿ ಎರಡು ವರ್ಷ ಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ ಅದಕ್ಕೆ ತಡೆ ಆಗಿದೆ.
ಸುಪ್ರೀಂಕೋರ್ಟ್ ತಡೆ ನೀಡುವಾಗ, ಯಾರು ತಮ್ಮನ್ನು ತಾವು ನಾಯಕರೆಂದು ಕರೆದುಕೊಳ್ಳುತ್ತಾರೋ ಅಂತವರು ಮಾತನಾಡುವಾಗ ಭಾಷೆ ಮೇಲೆ ಮತ್ತು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡಿರಬೇಕು ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಆದರೂ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಜನ ಅವರಿಗೆ ಬುದ್ದಿ ಕಲಿಸಿದ್ದಾರೆ. ಮಮತಾ ಬ್ಯಾನರ್ಜಿ ಹೇಳಿದಂತೆ ಅವರು ಇದೇ ರೀತಿ ಮಾತನಾಡುತ್ತ ಹೋಗಲಿ. ಅವರು ಸಂಸದರ ಸಂಖ್ಯೆ 40 ಕ್ಕಿಂತ ಕಡಿಮೆಯಾಗಲಿ ಎಂದರು. ಲೋಕಸಭೆಗೆ ಹೊಸಬರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
ಸಿದ್ದರಾಮಯ್ಯರಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯ ಮಾಡುವ ಪ್ರಯತ್ನ: ಸಚಿವ ಈಶ್ವರ ಖಂಡ್ರೆ
ಒಂದೇ ನಿಯಮ ಎಲ್ಲ ಕಡೆ ಅನ್ವಯ ಆಗುವುದಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ನಮ್ಮ ನಾಯಕರು ಬದಲಾವಣೆ ಮಾಡುತ್ತಾರೆ. ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೋ ಅವರಿಗೆ ಖಂಡಿತ ಟಿಕೆಟ್ ಕೊಡುತ್ತಾರೆ ಎಂದರು. ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರು ಗೂಂಡಾಗಳಿದ್ದಂತೆ ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಯಾವ ಪಕ್ಷದಲ್ಲಿ ಎಷ್ಟು ಗೂಂಡಾಗಳಿದ್ದಾರೆ ಎಂಬುದು ಗೊತ್ತಿದೆ. ಅವರ ಭಾಷೆ ಮತ್ತು ನಾಲಿಗೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದರು.
ಬಜೆಟ್ ಅಲ್ಲ, ರಾಜಕೀಯ ಭಾಷಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ರಾಜಕೀಯ ಭಾಷಣದಂತಿದ್ದು, ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಡದ ಬಜೆಟ್ ಆಗಿದೆ. ಸರ್ಕಾರ ಘೋಷಿಸಿದ 5 ಗ್ಯಾರೆಂಟಿಗಳಿಗೆ ವರ್ಷವಿಡೀ ಹಣ ಹೇಗೆ ಕ್ರೋಡೀಕರಿಸಬೇಕೆಂಬ ಅಂಶ ಬಿಟ್ಟರೆ ಬಜೆಟ್‌ನಲ್ಲಿ ಬೇರೇನೂ ಇಲ್ಲ. ರಾಜ್ಯವನ್ನು ಮುಂಬರುವ ವರ್ಷದಲ್ಲಿ ಹೇಗೆ ಆರ್ಥಿಕ ಶಕ್ತಿ ಕೇಂದ್ರವನ್ನಾಗಿಸಬೇಕೆಂಬ ಬಗ್ಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಯುವಕರು ಬಸವಣ್ಣನ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಎಚ್.ಆಂಜನೇಯ
ರೈತ ಮುಖಂಡರು ಮಾತುಕತೆಗೆ ಬರಲಿ: ಕೇಂದ್ರ ಸರ್ಕಾರ ರೈತರಿಗೆ ಸಾಕಷ್ಟು ಯೋಜನೆ, ನೆರವನ್ನು ನೀಡಿದೆ. ಮುಂದೆಯೂ ರೈತ ಪರ ನಿಲ್ಲಲಿದೆ. ಹಾಗಾಗಿ ದೆಹಲಿಯತ್ತ ಪ್ರತಿಭಟನೆಗೆ ಹೊರಟಿರುವ ರೈತ ಮುಖಂಡರು ಸರ್ಕಾರದೊಂದಿಗೆ ಮಾತುಕತೆಗೆ ಬರಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಸಹಾನುಭೂತಿ ಹೊಂದಿದೆ. ರೈತರ ಹೊಸ ಬೇಡಿಕೆಯನ್ನು ನಮ್ಮ ಸರ್ಕಾರ ಪರಿಶೀಲನೆ ಮಾಡುತ್ತದೆ. ಇದು ಒಂದೆರೆಡು ದಿನಗಳಲ್ಲಿ ತೀರ್ಮಾನ ಮಾಡಲು ಆಗಲ್ಲ. ಈಗಾಗಲೇ ಪಿಯೂಷ್ ಗೋಯಲ್, ರಾಜ್ಯ ಸಚಿವ ವಿದ್ಯಾನಂದ ಸೇರಿದಂತೆ ಪ್ರಮುಖ ಮಂತ್ರಿಗಳು ರೈತ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.