ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿರುವುದು ತಪ್ಪು: ಕೇಂದ್ರ ಸಚಿವ ಜೋಶಿ

By Kannadaprabha News  |  First Published Aug 20, 2022, 6:20 AM IST

ಮೊಟ್ಟೆ ಎಸೆಯುವುದು, ಕಪ್ಪು ಭಾವುಟ ಹಾರಿಸುವವರ ಪರ ನಾನಿಲ್ಲ, ಸಾವರ್ಕರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದೂ ತಪ್ಪು: ಜೋಶಿ


ಹುಬ್ಬಳ್ಳಿ/ಧಾರವಾಡ(ಆ.20):  ಕೊಡಗಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆಎಸೆದಿರುವುದನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿದ್ದರಾಮಯ್ಯ ಆಗಲಿ ಅಥವಾ ಇನ್ನಾರಿಗಾಗಲಿ ಮೊಟ್ಟೆಎಸೆಯುವುದು ತಪ್ಪು. ಜತೆಗೆ ಕಪ್ಪು ಧ್ವಜ ಪ್ರದರ್ಶನ ಮಾಡುವವರ ಪರ ನಾನಿಲ್ಲ ಎಂದಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆಎಸೆದಿರುವುದು ಯಾವ ರೀತಿಯಲ್ಲಿಯೂ ಸಮರ್ಥನೀಯವಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು. ಸಿದ್ದರಾಮಯ್ಯ ಮೇಲೆ ಮೊಟ್ಟೆ ಒಗೆದಿರುವುದು ತಪ್ಪು ಎಂದರು.

ನಾವು ಯಾವತ್ತೂ ಗೋಡ್ಸೆಯನ್ನು ಪೂಜೆ ಮಾಡಿಲ್ಲ. ಸಿದ್ದರಾಮಯ್ಯ ಅವರು ಯಾರದೋ ತುಷ್ಟೀಕರಣಕ್ಕಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಂಸೆಯ ರಾಜಕಾರಣ ಒಪ್ಪುವುದಿಲ್ಲ. ಇದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಎಸ್‌ಡಿಪಿಐ ಅವರ ಮೇಲಿದ್ದ ಪ್ರಕರಣಗಳನ್ನು ವಾಪಸ್‌ ಪಡೆದಿದೆ. ಮತಗಳನ್ನು ಸೆಳೆದುಕೊಳ್ಳುವ ಸಲುವಾಗಿ ತುಷ್ಟೀಕರಣದ ಪರಾಕಾಷ್ಠೆ ಸಿದ್ದರಾಮಯ್ಯ ಅವರ ಕಾಲದಲ್ಲಾಗಿತ್ತು ಎಂದು ಕಿಡಿ ಕಾರಿದರು.

Tap to resize

Latest Videos

ಹಾಸನದಲ್ಲೂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ: ಚಿಕ್ಕಮಗಳೂರಲ್ಲೂ ಗೋ ಬ್ಯಾಕ್‌ ಪೋಸ್ಟ್

ಸಿದ್ದರಾಮಯ್ಯನವರು ಸಾವರ್ಕರ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಸಾವರ್ಕರ ಬಗ್ಗೆ ನಿಮಗೆ ಗೌರವ ಇರದೇ ಇದ್ದರೂ ಬೇರೆಯವರಿಗೆ ವಿಶ್ವಾಸ, ಶ್ರದ್ಧೆ ಇದೆ. ಅವರಿಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದೀರಿ. ಸ್ವತಃ ಇಂದಿರಾ ಗಾಂಧಿ ಅವರೇ ಸಾವರ್ಕರ ಅವರಿಗೆ ಪತ್ರ ಬರೆದು ‘ಭಾರತದ ಸುಪುತ್ರ’ ಎಂದು ಹೊಗಳಿದ್ದರು. ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ದೊಡ್ಡದಿದೆ ಅಂದಿದ್ದರು. ಗಾಂಧೀಜಿ ಸಾವರ್ಕರ ಹೋರಾಟ ನೆನಪಿಸಿದ್ದನ್ನು ಸಿದ್ದರಾಮಯ್ಯ ಅರಿಯಬೇಕು ಎಂದು ಜೋಶಿ ಹೇಳಿದರು.

ಆಗಿನ ಕಾಂಗ್ರೆಸ್‌ ಮುಖಂಡರಿಗೆ ವಿಚಾರ ಭೇದವಿದ್ದರೂ ಸಾವರ್ಕರ ಬಗ್ಗೆ ಗೌರವ ಹೊಂದಿದ್ದರು. ಈಗ ಇರುವವರು ನಕಲಿ ಕಾಂಗ್ರೆಸ್‌ನವರು. ಇವರನ್ನೇ ವಿರೋಧಿಸುತ್ತಾ ಬಂದಿದ್ದ ಸಿದ್ದರಾಮಯ್ಯ ಈ ಹಿಂದೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯನ್ನು ಬೈದಿದ್ದರು. ಈಗ ಅದೇ ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಈಗ ಇರುವುದು ಓರಿಜನಲ್‌ ಕಾಂಗ್ರೆಸ್‌ ಅಲ್ಲ. ಅದರಲ್ಲಿ ಸಿದ್ದರಾಮಯ್ಯ ಸಹ ಓರಿಜನಲ್‌ ಅಲ್ಲ ಎಂದರು.

ನಮಗೂ ಮೊಟ್ಟೆ ಎಸೆಯಲು ಬರಲ್ವಾ?: ಸಿದ್ದರಾಮಯ್ಯ

ಆಕ್ರೋಶದಿಂದ ಮಾತನಾಡುವಾಗ ಸಿದ್ದರಾಮಯ್ಯನವರು ಕಾಂಗ್ರೆಸ್‌ ಕಿತ್ತೊಗೆಯಬೇಕು ಎನ್ನುತ್ತಾರೆ. ಬಳಿಕ ಬಿಜೆಪಿ ಎಂದು ಸಮಾಜಾಯಿಸುತ್ತಾರೆ. ಹೀಗಾಗಿ ಅವರ ಮನಸ್ಸಿನಲ್ಲಿ ಇನ್ನೂ ಕಾಂಗ್ರೆಸ್‌ ಬಂದಿಲ್ಲ. ಮುಸ್ಲಿಂ ತುಷ್ಟೀಕರಣಕ್ಕೆ ಈ ರೀತಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದಿರುವ ಜೋಶಿ, ಮೊಟ್ಟೆಎಸೆದಿರುವ ಪ್ರಕರಣದಲ್ಲಿ ಪೊಲೀಸ್‌ ಭದ್ರತೆ ವೈಫಲ್ಯಆಗಿಲ್ಲ. ಎಲ್ಲ ಸರ್ಕಾರಗಳಲ್ಲೂ ಪೊಲೀಸರು ತಮ್ಮ ಕರ್ತವ್ಯ ನಿಭಾಯಿದ್ದು ಪೊಲೀಸರ ವೈಫಲ್ಯ ಎನ್ನುವದು ತಪ್ಪು ಎಂದರು.

ಸಿಎಂ ಆಗುವುದು ತಿರುಕನ ಕನಸು

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ ಜೋಶಿ, ಮುಂದಿನ ಸರ್ಕಾರ ನಮ್ಮದೇ ಎಂದು ಕಾಂಗ್ರೆಸ್‌ ಮುಖಂಡರು ಹೇಳಿಕೊಳ್ಳುತ್ತಿದ್ದು, ಅವರಿಗೆ ಕನಸು ಕಾಣಲು ಅಧಿ​ಕಾರವಿದೆ. ತಿರುಕನೋರ್ವ ಮನೆಯ ಮುಂದೆ ಕನಸು ಕಂಡ ಎಂದು ಹಾಡು ಇತ್ತು. ಇದು ಕೂಡ ಹಾಗೆಯೇ ಆಗಿದೆ. ಹಾಗಂತ ನಾನು ಅವರನ್ನು ತಿರುಕರು ಎನ್ನುವುದಿಲ್ಲ. ಕನಸು ಕಾಣಲು ತಿರುಕನಿಗೂ ಅಧಿ​ಕಾರವಿದೆ. ಸಿದ್ದರಾಮಯ್ಯ ಬಹಳ ದೊಡ್ಡವರು. ಮುಖ್ಯಮಂತ್ರಿ ಆದವರು. ಹೀಗಾಗಿ ಮುಂದೆ ಸರ್ಕಾರ ಬರುತ್ತದೆ ಎಂಬ ಕನಸು ಕಾಣಲು ಅವರಿಗೆ ಅಧಿ​ಕಾರವಿದೆ. ಆದರೆ ಅದನ್ನು ನನಸು ಮಾಡುವವರು ರಾಜ್ಯದ ಜನತೆ. ಜನರಿಗೆ ಕಾಂಗ್ರೆಸ್‌ ಮೇಲೆ ಭರವಸೆ ಇಲ್ಲ. ಅದು ಭೂತಕಾಲದ ಪಾರ್ಟಿ ಆಗುವುದು ನಿಶ್ಚಿತ ಎಂದರು.
 

click me!