ಕಾಂಗ್ರೆಸ್‌ ಲಿಂಗಾಯತರನ್ನು ಸಿಎಂ ಮಾಡಲಿ: ಸಚಿವ ಸುಧಾಕರ್

By Govindaraj SFirst Published Aug 20, 2022, 5:10 AM IST
Highlights

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕ ಮಾಡಿರುವುದು ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆ, ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. 

ಚಿಕ್ಕಬಳ್ಳಾಪುರ (ಆ.20): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕ ಮಾಡಿರುವುದು ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆ, ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಚಿಕ್ಕಬಳ್ಳಾಪುರದಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ನಾಯಕತ್ವದಲ್ಲಿ ನಂಬಿಕೆ ಇಟ್ಟು ನಾವು ಪಕ್ಷಕ್ಕೆ ಬಂದಿದ್ದು, ಅವರಿಗೆ ಅತ್ಯುನ್ನತ ಹುದ್ದೆ ನೀಡಿರುವುದು ಖುಷಿ ತಂದಿದೆ ಎಂದರು.

ಬಿಜೆಪಿ ವಿಸ್ತರಣೆಗೆ ಅನುಕೂಲ: ಪ್ರಧಾನಿ, ಗೃಹ ಸಚಿವರೊಂದಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ, ಬಿ.ಎಲ್‌. ಸಂತೋಷ್‌ ಅವರಿಗೂ ಸ್ಥಾನ ಲಭ್ಯವಾಗುವ ಮೂಲಕ ರಾಜ್ಯದ ಇಬ್ಬರಿಗೆ ಅವಕಾಶ ಸಿಕ್ಕಿರುವುದು ಅಭಿನಂದನೀಯ. ಪ್ರಧಾನಿ ಮೋದಿಯವರು ಇತ್ತೀಚಿಗೆ ಘೋಷಿಸಿದಂತೆ ಮಿಷನ್‌ ದಕ್ಷಿಣ್‌ ಸಮರ್ಪಕ ಅನುಷ್ಠಾನಕ್ಕೆ ಇದು ಸಾಕ್ಷಿಯಾಗಿದೆ. ತಮಿಳುನಾಡು, ತೆಲಂಗಾಣ ರಾಜ್ಯಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಇತರೆ ರಾಜ್ಯಗಳಲ್ಲಿಯೂ ಬಿಜೆಪಿ ವಿಸ್ತರಣೆಗೆ ಅನುಕೂಲವಾಗಲಿದೆ ಎಂದರು.

Chikkaballapur: ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲಿಸಿದ ಆರೋಗ್ಯ ಸಚಿವ ಸುಧಾಕರ್

ಬಿಎಸ್‌ವೈ ನೇಮಕ ಕುರಿತು ಎಂ.ಬಿ. ಪಾಟೀಲ್‌ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಹುಲ್‌ ಗಾಂಧಿ ಅವರು ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತರಿಗೇಕೆ ನೀಡಬಾರದು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳಿಂದ ಲಿಂಗಾಯಿತ ಸಮುದಾಯದ ಅಭ್ಯರ್ಥಿ ಮುಖ್ಯಮಂತ್ರಿಯಾಗಿಲ್ಲ. ಹಾಗಾಗಿ ಎಂ.ಬಿ. ಪಾಟೀಲ್‌ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

ಸಿಎಂ ಆಯ್ಕೆ ಪಕ್ಷದ ಆಂತರಿಕ ವಿಚಾರ: ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ಬಿಜೆಪಿ ಆಂತರಿಕ ವಿಚಾರ. ಅದೇ ರೀತಿಯಲ್ಲಿ ಕಾಂಗ್ರೆಸ್‌ನಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ಕಾಂಗ್ರೆಸ್‌ನ ಆಂತರಿಕ ವಿಚಾರ. ಹಾಗಾಗಿ ಈ ವಿಚಾರದ ಬಗ್ಗೆ ಯಾರೂ ಮಾತನಾಡಬೇಕಾದ ಅಗತ್ಯವಿಲ್ಲ. ಬಿಎಸ್‌ವೈ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಪಕ್ಷದ ವರಿಷ್ಠರೂ ಸೇರಿದಂತೆ ಪ್ರತಿಯೊಬ್ಬರಿಗೂ ಅರಿವಿದೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲಾಗುವುದು. ಅವರ ಗೌರವಕ್ಕೆ, ಸ್ಥಾನಮಾನಕ್ಕೆ ಕುಂದು ಬಾರದಂತೆ ನಡೆದುಕೊಳ್ಳಲಾಗುವುದು ಎಂದರು.

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸುತ್ತೇನೆ: ಕೊಡಗು ಪ್ರವಾಸ ಮಾಡುವ ವೇಳೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೆಲೆ ಮೊಟ್ಟೆ ಎಸೆದ ಪ್ರಕರಣವನ್ನು  ಸಚಿವ ಡಾ. ಕೆ. ಸುಧಾಕರ್ ಖಂಡಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಕೆಲವು ನಾಯಕರು ಸಾವರ್ಕರ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸಾವರ್ಕರ್ ಒಬ್ಬ ಅಪ್ಪಟ ದೇಶ ಪ್ರೇಮಿ, ಆದರ್ಶದ ಹೋರಾಟ ಮಾಡಿದ್ದಾರೆ. ಇದರ ಬಗ್ಗೆ ಕೆಲವರಿಗೆ ಭಿನ್ನಾಭಿಪ್ರಾಯ ವಿದ್ದರೇ ಅವರಿಗೆ ದೇಶದ ಬಗ್ಗೆ ಅಭಿಮಾನ ಇರೋದಿಲ್ಲ, ಅಥವಾ ಸ್ವಾತಂತ್ಯ್ಯದ ಹೋರಾಟದ ಬಗ್ಗ ಅರಿವೇ ಇರುವುದಿಲ್ಲ. 

ಜನಪರ ಯೋಜನೆ ಮೆಚ್ಚಿ ಬಿಜೆಪಿ ಸೇರಿದ 'ಕೈ' ನಾಯಕಿ: ಕಾಂಗ್ರೆಸ್‌ಗೆ ಮುಖಭಂಗ

ಮಾತನಾಡುವ ಮೊದಲು ಸಾವರ್ಕರ್ ಬಗ್ಗೆ ತಿಳಿದುಕೊಳ್ಳಲಿ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಸ್ವಾತಂತ್ಯ್ಯ ಹೋರಾಟದ ವೇಳೆ ಅವರ ಪಾತ್ರ ಜೈಲುವಾಸ ಇವೆಲ್ಲವನ್ನು ತಿಳಿದುಕೊಂಡು ಮಾತನಾಡಬೇಕು, ಸುಮ್ಮನೇ ಬಾಯಿಗೆ ಬಂದ ಹಾಗೆ  ಮಾತನಾಡಬಾರದು ಎಂದಿದ್ದಾರೆ. ಯಾರೆಲ್ಲ ಸಾವರ್ಕರ್ ಬಗ್ಗೆ ತಿಳಿದುಕೊಳ್ಳುವವರಿಗೆ ನಾನೇ ಪ್ರಾಯೋಜಕತ್ವ ನೀಡಿ ಪುಸ್ತಕಗಳನ್ನು ತಂದು ಕೊಡುವೆ ಬೇಕಾದ್ರೆ ಆ ಪುಸ್ತಕಗಳನ್ನು ಓದಿಕೊಳ್ಳಲಿ, ಸಾಕಷ್ಟು ಒಳ್ಳೆಯ ಪುಸ್ತಕಗಳು ಸಾವರ್ಕರ್ ಬಗ್ಗೆ ಬರೆದಿದ್ದಾರೆ,  ಅವುಗಳನ್ನೆಲ್ಲ ಓದಿದ ಬಳಿಕ ಅಚರ ಬಗ್ಗೆ ಮಾತನಾಡಲಿ ಎಂದು ಕಿವಿಮಾತು ಹೇಳಿದ್ದಾರೆ.

click me!