Karnataka BJP Politics: ಸಿಎಂ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಜೋಶಿ ಹೇಳಿದ್ದಿಷ್ಟು

By Kannadaprabha NewsFirst Published Dec 6, 2021, 9:49 AM IST
Highlights

*  2023ರ ವಿಧಾನಸಭಾ ಚುನಾವಣೆ ವರೆಗೆ ಬೊಮ್ಮಾಯಿಯೇ ಮುಖ್ಯಮಂತ್ರಿ 
*  ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ವಿಷಯ ನನ್ನ ಗಮನಕ್ಕೆ ಇಲ್ಲ
*  ರಾಹುಲ್‌ ಗಾಂಧಿಯನ್ನ ತರಾಟೆಗೆ ತೆಗೆದುಕೊಂಡ ಪ್ರಹ್ಲಾದ್‌ ಜೋಶಿ 
 

ಹುಬ್ಬಳ್ಳಿ(ಡಿ.06): ರಾಜ್ಯದಲ್ಲಿ(Karnataka) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಬದಲಾವಣೆ ಆಗಲಿದೆ ಎಂಬುದು ಆಧಾರರಹಿತ ಗಾಳಿಸುದ್ದಿ. ಮುಂದಿನ ವಿಧಾನಸಭಾ ಚುನಾವಣೆ ವರೆಗೆ ಅವರೆ ಸಿಎಂ ಆಗಿರಲಿದ್ದಾರೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ ನಿರಾಣಿ(Murugesh Nirani) ಮುಖ್ಯಮಂತ್ರಿ(Chief Minister) ಆಗುತ್ತಾರೆ ಎಂಬ ಅರ್ಥದ ಹೇಳಿಕೆ ನೀಡಿದ್ದ ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ(KS Eshwarappa) ಅವರು ಕೂಡ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ರಾಷ್ಟ್ರೀಯ ನಾಯಕರು ಅವರಿಗೆ ಕಿವಿಮಾತು ಹೇಳಿದ್ದಾರೆ. ಆ ರೀತಿ ಹೇಳಿಕೆ ನೀಡುವುದು ಕೂಡ ತಪ್ಪು. ಮುಂದಿನ 2023ರ ವಿಧಾನಸಭಾ ಚುನಾವಣೆ(2023 Assembly Election) ವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದರು.

ರಾಹುಲ್‌ಗೆ ತಿಳಿವಳಿಕೆ ಇಲ್ಲ, ನೀವು ಅವರಂತೆ ಆಡಬೇಡಿ: ಡಿಕೆಶಿ, ಸಿದ್ದುಗೆ ಜೋಶಿ ಸಲಹೆ

ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಜೆಡಿಎಸ್‌(JDS) ಜತೆಗಿನ ಮೈತ್ರಿ ವಿಷಯ ನನ್ನ ಗಮನಕ್ಕೆ ಇಲ್ಲ. ಬಿ.ಎಸ್‌. ಯಡಿಯೂರಪ್ಪ(BS Yediyurappa) ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳನ್ನು ನಾನು ಗಮನಿಸಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ(HD Devegowda) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಭೇಟಿ ಮಾಡಿದಾಗ ಹಾಸನಕ್ಕೆ ಐಐಟಿ(Hassan IIT) ಆಗಬೇಕು ಎಂಬುದು ಸೇರಿ ಇತರ ವಿಷಯದ ಚರ್ಚೆ ಆಗಿದೆ ಎಂದು ತಿಳಿದುಬಂದಿದೆ. ಅವರ ನಡುವೆ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಆಗಿಲ್ಲ. ಈ ಬಗ್ಗೆ ಪಕ್ಷದ ಮುಖಂಡರ ಜತೆ ಚರ್ಚಿಸುವೆ. ಪಕ್ಷದ ಸಭೆಯಲ್ಲಿ ನನ್ನ ಅಭಿಪ್ರಾಯ ತಿಳಿಸುವೆ ಎಂದರು.
ಸಿದ್ದರಾಮಯ್ಯ(Siddaramaiah) 40 ಪರ್ಸೆಂಟ್‌ ಆರೋಪ ಆಧಾರ ರಹಿತವಾಗಿದೆ. ಈ ಬಗ್ಗೆ ದಾಖಲೆಗಳಿದ್ದರೆ ಎಸಿಬಿ ಅಥವಾ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ ಎಂದು ಸವಾಲು ಹಾಕಿದರು. ಮೋದಿ ಅವರು ಈ ಹಿಂದೆ ಕಾಂಗ್ರೆಸ್‌(Congress) ವಿರುದ್ಧ ಆರೋಪ ಮಾಡಿದಾಗ ಆಧಾರವಿದ್ದವು ಎಂದು ಸಮರ್ಥಿಸಿಕೊಂಡರು. ರಾಜ್ಯಾದ್ಯಂತ ವಿಧಾನ ಪರಿಷತ್‌ ಚುನಾವಣೆ ನಡೆಯುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದ್ದು, 15-17 ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ಕಸ್ತೂರಿರಂಗನ್‌ ವರದಿಯಿಂದ ತೊಂದರೆಯಾಗದು: ಜೋಶಿ

ಪಶ್ಚಿಮ ಘಟ್ಟ ಸೂಕ್ಷ್ಮವಲಯದ ಕುರಿತು ಕಸ್ತೂರಿ ರಂಗನ್‌ ವರದಿಯಿಂದ(Kasturi Rangan Report) ಜನತೆಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಮಾಧ್ಯಮಗಳ ರಾಜ್ಯ ಸರ್ಕಾರ ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವರದಿ ಜಾರಿ ಬಗ್ಗೆ ಕೇಂದ್ರ ಪರಿಸರ ಮಂತ್ರಾಲಯ ಸಚಿವ ಭೂಪೇಂದ್ರ ಯಾದವ್‌(Bhupender Yadav) ಜತೆ ವೈಯಕ್ತಿಕವಾಗಿ ನಾನು, ಸಿಎಂ ಬೊಮ್ಮಾಯಿ ಮಾತನಾಡಿದ್ದೇವೆ. ಜನತೆಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಅವರ ಜತೆ ಇನ್ನೊಮ್ಮೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದರು.

ಮೋದಿ ಬಗ್ಗೆ ಮಾತನಾಡುವಾಗ ನಾಲಿಗೆ ಹದ್ದುಬಸ್ತಿನಲ್ಲಿರಲಿ: ಸಿದ್ದುಗೆ ಪ್ರಹ್ಲಾದ ಜೋಶಿ ಎಚ್ಚರಿಕೆ

ಇದೇ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕ ರಾಹುಲ್‌ ಗಾಂಧಿಯವರನ್ನು(Rahul Gandhi) ತರಾಟೆಗೆ ತೆಗೆದುಕೊಂಡ ಅವರು, ರಾಹುಲ್‌ ಗಾಂಧಿಯವರು ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಆದರೆ ಪಾರ್ಟ್‌ ಟೈಂ ರಾಜಕಾರಣಿಯಾದ(Part-Time Politician) ರಾಹುಲ್‌ಗೆ ಮೀನುಗಾರಿಗೆ ಇಲಾಖೆ ಇರುವುದೇ ಗೊತ್ತಿರಲಿಲ್ಲ. ಹಿಂದೆ ಈಗಾಗಲೇ ಇದ್ದ ಮೀನುಗಾರಿಕೆ ಇಲಾಖೆಯನ್ನು ಪುನಃ ಸ್ಥಾಪಿಸುವುದಾಗಿ ಹೇಳಿ ನಗೆಪಾಟಲಿಗೆ ಈಡಾಗಿದ್ದರು. ಈಗ ಪುನಃ ಮೀನುಗಾರಿಕೆ ವಿಷಯ ಎತ್ತಿಕೊಂಡು ಬಂದಿದ್ದಾರೆ ಎಂದರು.

ರಾಹುಲ್‌ ಗಾಂಧಿ, ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳುವುದನ್ನು ಬಿಡಬೇಕು. ಅವರ ಕಾಂಗ್ರೆಸ್‌ 60 ವರ್ಷಗಳ ಕಾಲ ದೇಶದ ಆಡಳಿತ ನಡೆಸಿತ್ತು. ಆದರೆ ನಾವು ಮೀನುಗಾರಿಕೆ ಇಲಾಖೆಯನ್ನು ಆರಂಭಿಸಿದ್ದೇವೆ. ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ. ಯಾರೋ ಹೇಳಿಕೊಟ್ಟಿದ್ದನ್ನು ಅವರು ಪುನರುಚ್ಚಾರ ಮಾಡುತ್ತಾರೆ ಎಂದರು.
 

click me!