ಮಾತೃ ಹೃದಯಿಗಳಿಗೆ ಕಣ್ಣೀರು ಬರುವುದು ಸಹಜ. ಭಯ-ಭಕ್ತಿ ಇಲ್ಲದವರ ಕಣ್ಣಲ್ಲಿ ನೀರು ಬರುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಮೈಸೂರು/ಚನ್ನಪಟ್ಟಣ (ನ.04): ಮಾತೃ ಹೃದಯಿಗಳಿಗೆ ಕಣ್ಣೀರು ಬರುವುದು ಸಹಜ. ಭಯ-ಭಕ್ತಿ ಇಲ್ಲದವರ ಕಣ್ಣಲ್ಲಿ ನೀರು ಬರುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಡನೆ ಅವರು ಮಾತನಾಡಿದರು. ಕುಮಾರಸ್ವಾಮಿಗೆ ಕಣ್ಣೀರು ಬರುವುದು ಚುನಾವಣೆ ಬಂದಾಗ ಮಾತ್ರ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಹಲವು ಬಾರಿ ಕಣ್ಣೀರು ಹಾಕಿದ್ದೇನೆ. ಜನರ ಸಮಸ್ಯೆ ನೋಡಿ ಕಣ್ಣೀರು ಹಾಕಿದ್ದೇನೆಯೇ ಹೊರತು ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಲ್ಲ.
ಜನರ ಸಮಸ್ಯೆ ಕಂಡಾಗ ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತದೆ. ರಾಜಕಾರಣದಲ್ಲಿ ಕಟುಕರಿದ್ದಾರೆ. ಅಂತವರ, ಭಯ-ಭಕ್ತಿ ಇಲ್ಲದವರ ಕಣ್ಣಲ್ಲಿ ನೀರು ಬರುವುದಿಲ್ಲ ಎಂದು ತಿರುಗೇಟು ನೀಡಿದರು. ಬಳಿಕ, ಚನ್ನಪಟ್ಟಣದಲ್ಲಿ ಮಾತನಾಡಿ, ಮಂಡ್ಯ ಲೋಕಸಭೆ ಮತ್ತು ರಾಮನಗರದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್‌ನವರ ಕುತಂತ್ರದಿಂದ ಸೋಲುಂಟಾಯಿತು. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇರಲಿಲ್ಲ. ಹೀಗಾಗಿ, ಬಿಜೆಪಿಯಲ್ಲಿದ್ದವರನ್ನು ಕನಕಪುರ ಸಹೋದರರು ಕರೆದೊಯ್ದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರ ಕುತಂತ್ರ ಈ ಬಾರಿ ನಡೆಯುವುದಿಲ್ಲ.
ಚನ್ನಪಟ್ಟಣ ಜನತೆ ನಿಖಿಲ್‌ಗೆ ಆಶೀರ್ವದಿಸಿ ಕೈಹಿಡಿಯಲಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯಾಗಲಿದೆ. ಯೋಗೇಶ್ವರ್ ತಮ್ಮ ಹುಟ್ಟೂರು ಚೆಕ್ಕೆರೆ ಗ್ರಾಮವನ್ನೇ ಅಭಿವೃದ್ಧಿ ಮಾಡಿಲ್ಲ, ಇನ್ನು ಅವರು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರದ ಸ್ಥಿತಿ ದೀಪಕ್ಕೆ ಸಿಕ್ಕ ಪತಂಗದಂತಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ. ಮುಡಾ ಮತ್ತು ವಕ್ಫ್ ಸೇರಿದಂತೆ ಎಲ್ಲರದಲ್ಲೂ ತಪ್ಪಿನ ಮೇಲೆ ತಪ್ಪು ಮಾಡಿದೆ ಎಂದು ಆರೋಪಿಸಿದರು.
ಪೂರ್ವಾನುಮತಿ ಪಡೆಯದೆ ಹೈಕೋರ್ಟ್ ಕಲಾಪ ವಿಡಿಯೋ ತೋರಿಸುವ ಚಾನಲ್‌ಗಳಿಗೆ ಸಂಕಷ್ಟ!
ಜಿಟಿಡಿಗೆ ಕ್ಷೇತ್ರದ ಕೆಲಸವಿದೆ: ಜಿ.ಟಿ.ದೇವೇಗೌಡರು ಪ್ರಚಾರಕ್ಕೆ ಬರದಿರುವ ಕುರಿತು ಪ್ರತಿಕ್ರಿಯಿಸಿ, ಶಾಸಕ ಹಾಗೂ ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಜಿ.ಟಿ.ದೇವೇಗೌಡರಿಗೆ ಅವರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸವಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಆಗಿಲ್ಲ. ಅವರೂ ಕೂಡ ನಿಖಿಲ್ ಗೆಲುವಿಗೆ ಶ್ರಮಿಸುತ್ತಾರೆ. ನಮ್ಮಲ್ಲಿ ಪ್ರಚಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಜಿ.ಟಿ. ದೇವೇಗೌಡರು ಎರಡನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು. ಜಿ.ಟಿ.ದೇವೆಗೌಡರು ಪ್ರಚಾರದಲ್ಲಿ ಪಾಲ್ಗೊಳ್ಳುವ ಕುರಿತು ಮುಂದೆ ಎಲ್ಲಾ ಮಾತನಾಡೋಣ. ಈಗ ಯಾಕೆ ಈ ವಿಚಾರ, ಸದ್ಯಕ್ಕೆ ಇಷ್ಟೆ ಸಾಕು. ಜಿ.ಟಿ. ದೇವೇಗೌಡರ ವಿಚಾರದಲ್ಲಿ ಏನೇನು ಆಗುತ್ತಿದೆ ಎಂಬುದು ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿದೆ. ಅದನ್ನು ಯಾಕೆ ನನ್ನ ಬಳಿ ಮತ್ತೆ, ಮತ್ತೆ ಕೇಳುತ್ತಿದ್ದೀರಿ ಎಂದರು.