ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ 140 ಕೋಟಿ ಭಾರತೀಯರನ್ನು ವಂಚಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ನವದೆಹಲಿ: ‘ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಹಿಂಪಡೆಯುತ್ತಿದೆ, ಚುನಾವಣೆ ವೇಳೆ ಆ ಪಕ್ಷ ನೀಡಿದ್ದ ಉಚಿತ ಭರವಸೆಗಳ ಬಣ್ಣ ಈಗ ಬಯಲಾಗಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ನರೇಂದ್ರ ಮೋದಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಪ್ರಧಾನಿ ಹುದ್ದೆಯ ಘನತೆಗೇ ಚ್ಯುತಿ ತಂದಿದ್ದಾರೆ’ ಎಂದು ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ ಪೋಸ್ಟ್ ಮಾಡಿರುವ ಅವರು, ‘100 ದಿನಗಳ ಯೋಜನೆ, 2047ಕ್ಕೆ ನೀಲನಕ್ಷೆ ಸಿದ್ಧಪಡಿಸಲು 20 ಲಕ್ಷ ಜನರ ಅಭಿಪ್ರಾಯ ಸಂಗ್ರಹ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, 100 ಸ್ಮಾರ್ಟ್ ಸಿಟಿಗಳು, ಕಪ್ಪು ಹಣ ವಾಪಸ್, ಹಣದುಬ್ಬರ ಇಳಿಕೆ, ಕೃಷಿಕರ ಆದಾಯ ದುಪ್ಪಟ್ಟು, ಡಾಲರ್‌ಗೆ ಸಮನಾಗಿ ರುಪಾಯಿಯನ್ನು ಬೆಳೆಸುವುದು, ಅಚ್ಛೇ ದಿನ್ ಹೀಗೆ ಒಂದಾದ ಮೇಲೊಂದು ಸುಳ್ಳು ಭರವಸೆಗಳನ್ನು ನೀಡಿ 140 ಕೋಟಿ ಭಾರತೀಯರನ್ನು ಮೋದಿ ವಂಚಿಸಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಮಾಡುವುದು ಬಿಟ್ಟು ಸತ್ಯ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಪ್ರಧಾನಿ ಹುದ್ದೆಯ ಘನತೆಯನ್ನು ಮರುಸ್ಥಾಪನೆ ಮಾಡಬೇಕು’ ಎಂದು ತಿಳಿಸಿದ್ದಾರೆ.
undefined
ಕಾಂಗ್ರೆಸ್ ಪಕ್ಷ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಭರವಸೆಗಳನ್ನು ಈಡೇರಿಸುತ್ತಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಹೀಗೆ ಎಲ್ಲಾ ರಾಜ್ಯಗಳಲ್ಲೂ ಜನರ ಹಣವನ್ನು ಜನರ ಕಿಸೆಗೆ ಪ್ರತಿದಿನ ಗ್ಯಾರಂಟಿ ಯೋಜನೆಗಳ ಮೂಲಕ ಹಾಕುತ್ತಿದೆ ಎಂದೂ ಪ್ರಿಯಾಂಕಾ ಸಮರ್ಥಿಸಿಕೊಂಡಿದ್ದಾರೆ.
‘ತಮ್ಮ ಮಾತನ್ನು ಜನರೀಗ ನಂಬುವುದಿಲ್ಲ ಎಂಬುದು ಮೋದಿಗೆ ಗೊತ್ತಾಗಿದೆ. ಮಹಾತ್ಮ ಗಾಂಧೀಜಿ ‘ಸತ್ಯವೇ ದೇವರು’ ಎನ್ನುತ್ತಿದ್ದರು. ಮುಂಡಕೋಪನಿಷತ್ತಿನಲ್ಲಿ ಬರೆದಿರುವ ‘ಸತ್ಯಮೇವ ಜಯತೇ’ ಎಂಬುದು ನಮ್ಮ ರಾಷ್ಟ್ರೀಯ ಧ್ಯೇಯ. ಇವು ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿಯಾಗಿದ್ದವು. ಪ್ರಧಾನಿ ಮೋದಿ ಮೊದಲು ಸತ್ಯ ಹೇಳುವುದನ್ನು ರೂಢಿಸಿಕೊಳ್ಳಬೇಕು’ ಎಂದು ಪ್ರಿಯಾಂಕಾ ತೀಕ್ಷ್ಣವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಪುಢಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಆಕ್ರೋಶ
ಕಾಂಗ್ರೆಸ್ ಚಂದ್ರನ ಭರವಸೆ ನೀಡುತ್ತೆ, ಈಡೇರಿಸಲ್ಲ: ಪುರಿ
‘ಕಾಂಗ್ರೆಸ್ ಪಕ್ಷ ಚಂದ್ರನನ್ನು ತಂದುಕೊಡುವ ಭರವಸೆ ನೀಡುತ್ತದೆ. ಆದರೆ ಈಡೇರಿಸುವುದಿಲ್ಲ. ಈಡೇರಿಸಲು ಆಗದ ಭರವಸೆಗಳನ್ನು ಏಕೆ ನೀಡುತ್ತೀರಿ’ ಎಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ತೀಕ್ಷ್ಣವಾಗಿ ಹೇಳಿದ್ದಾರೆ.
ಉಚಿತ ಗ್ಯಾರಂಟಿಗಳ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಕ್ಸಮರದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಪುರಿ, ‘ಕಾಂಗ್ರೆಸ್‌ನದು ಉಚಿತಗಳ ಮಾಡೆಲ್. ಬಿಜೆಪಿದು ಲಾಭಾರ್ಥಿ (ಫಲಾನುಭವಿಗಳ) ಮಾಡೆಲ್. ಬಿಜೆಪಿಯ ಮಾದರಿಯಲ್ಲಿ ಅಭಿವೃದ್ಧಿಯಿದೆ. ಕಾಂಗ್ರೆಸ್‌ನ ಮಾದರಿಯಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ. ಸುಳ್ಳು ಭರವಸೆಗಳನ್ನು ವಾಸ್ತವಗೊಳಿಸುವುದು ಅಸಾಧ್ಯ. ನಿಮ್ಮಿಂದ ಈಡೇರಿಸಲು ಆಗದ ಭರವಸೆಗಳನ್ನು ನೀಡಬೇಡಿ’ ಎಂದು ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ, ಶಕ್ತಿ ಯೋಜನೆಯ ಪರಿಷ್ಕರಣೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಡಿರುವ ಮಾತುಗಳನ್ನು ತರಾಟೆ ತೆಗೆದುಕೊಂಡ ಪುರಿ, ‘ನೀವು ಪರಿಷ್ಕರಣೆ ಪದ ಬಳಕೆ ಮಾಡಿದ್ದೀರಿ ಅಂದರೆ ನಿಮ್ಮಿಂದ ಭರವಸೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದರ್ಥ. ಇದೇ ಸತ್ಯ. ಏನೇನೋ ಭರವಸೆ ನೀಡಿ, ಚಂದ್ರನನ್ನು ತಂದುಕೊಡುತ್ತೇವೆ ಎಂದು ಹೇಳಿ, ಆಮೇಲೆ ಕಷ್ಟಕ್ಕೆ ಸಿಲುಕುತ್ತೀರಿ’ ಎಂದು ತಿಳಿಸಿದ್ದಾರೆ.
ಮುಡಾ ಬಗ್ಗೆ ವಾಗ್ದಾಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಕೇಳಿಬಂದ ಮುಡಾ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ ಪುರಿ, ‘40% ಭ್ರಷ್ಟಾಚಾರ ಮಾಡಿದ ಬಿಜೆಪಿಯಿಂದ ನಮಗೆ ಕೆಟ್ಟ ಆರ್ಥಿಕ ಸ್ಥಿತಿಯಲ್ಲಿದ್ದ ಸರ್ಕಾರ ಬಳುವಳಿಯಾಗಿ ಬಂದಿದೆ ಎಂದು ಸಿದ್ದರಾಮಯಯ್ಯ ಹೇಳಿದ್ದರು. ಅವರಿಗೆ ಮುಡಾ ಹಗರಣ ಕೂಡ ಹಿಂದಿನ ಸರ್ಕಾರದಿಂದ ಬಳುವಳಿಯಾಗಿ ಬಂದಿದೆಯೇ? ಅವರ ಹೆಂಡತಿಗೆ 15 ಸೈಟುಗಳು ಸಿಕ್ಕಿವೆ. ಆ ಸೈಟೂ ಸಿದ್ದರಾಮಯ್ಯಗೆ ಬಂದ ಬಳುವಳಿಯೇ?’ ಎಂದು ಪ್ರಶ್ನಿಸಿದ್ದಾರೆ.