25 ಎಕರೆ ದಾನ ಮಾಡಲು ಡಿಕೆಶಿ ಮಹಾರಾಜರ ವಂಶಸ್ಥರಾ?: ಕುಮಾರಸ್ವಾಮಿ ವಾಗ್ದಾಳಿ

By Kannadaprabha News  |  First Published Nov 10, 2024, 10:34 AM IST

ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೇ ಕಿತ್ತೊಗೆಯುತ್ತೇವೆ ಎಂದಿದ್ದೇವೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಆಸೆ. ಜನರ ಭಾವನೆಯನ್ನಷ್ಟೇ ದೇವೇಗೌಡರು ಹೇಳಿದ್ದಾರೆ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ 
 


ಚನ್ನಪಟ್ಟಣ(ನ.10): ಶಾಲೆಗೆ 25 ಎಕರೆ ಜಮೀನು ದಾನ ಕೊಡಲು ಅವರೇನು ಮಹಾರಾಜರ ವಂಶಸ್ಥರಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ನಡುವೆ ಮಂಕುಂದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಎಲ್ಲಿ ಜಮೀನು ಕೊಟ್ಟಿದ್ದಾರೆ. 25 ಎಕರೆ ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ, ನಾನೂ ಸಂತೋಷ ಪಡುತ್ತೇನೆ. ಸುಳ್ಳು ಹೇಳಲು ಇತಿಮಿತಿ ಇರಬೇಕು. ನಾನು ಇವರ ರೀತಿ ಅದು ಮಾಡಿದ್ದೇನೆ, ಇದು ಮಾಡಿದ್ದೇನೆ ಎಂದು ಬೋರ್ಡ್ ಹಾಕಿಕೊಂಡಿಲ್ಲ. ಆದರೆ, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೆಲ್ಲ ಅಭಿವೃದ್ಧಿಮಾಡಿದ್ದೇನೆ ಎಂಬುದು ಜನತೆಗೆ ಗೊತ್ತಿದೆ ಎಂದು ಹೇಳಿದರು.

Tap to resize

Latest Videos

undefined

ಗೌಡರೇ 5 ವರ್ಷ ಆಡಳಿತ ಮಾಡ್ಲಿಲ್ಲ, ಬೇರೆಯವರಿಗೆ ಬಿಡ್ತಾರಾ?: ಚಲುವರಾಯಸ್ವಾಮಿ

ನಾನು ಸಿಎಂ ಆಗುವ ಮೊದಲು ರಾಜ್ಯದಲ್ಲಿ ಎಷ್ಟು ಕಾಲೇಜು, ಹೈಸ್ಕೂಲ್ ಇದ್ದವು. ನನ್ನ 20 ತಿಂಗಳ ಆಡಳಿತದಲ್ಲಿ ಎಷ್ಟಾದವು ಎಂಬುದಕ್ಕೆ ದಾಖಲೆಗಳೇ ಮಾಹಿತಿ ಕೊಡುತ್ತವೆ. ಯಾರಾದರೂ ತೆಗೆದು ನೋಡಬಹುದು. ಶಿಕ್ಷಣ ಕ್ಷೇತ್ರಕ್ಕೆ ಈ ವ್ಯಕ್ತಿಯ ಕೊಡುಗೆ ಏನು? ಸಾತನೂರು, ಕನಕಪುರ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಏನು ಮಾಡಿದ್ದಾರೆ. ಪಟ್ಟಿ ಮಾಡಲಿ. ಇಷ್ಟು ವರ್ಷ ಆಡಳಿತ ಮಾಡಿರುವವರಿಗೆ ಅವರ ತವರೂರು ದೊಡ್ಡಾಲಹಳ್ಳಿಯಲ್ಲಿ ಮತಗಳ ಲೀಡ್ ಬರುತ್ತಿಲ್ಲ ಏಕೆ? ಇವರು 25 ಎಕರೆ ಕೊಟ್ಟಿದ್ದಾರೋ ಅಥವಾ 25 ಗುಂಟೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಕಡಲೆಕಾಯಿ ಅಲ್ಲ ಸರ್ಕಾರ ಕಿತ್ತೆಸೆಯುತ್ತೇವೆ :

ಸರ್ಕಾರ ಕಿತ್ತೊಗೆಯುವುದು ಎಂದರೆ ಕಡಲೆಕಾಯಿ ಕಿತ್ತ ಹಾಗಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೇ ಕಿತ್ತೊಗೆಯುತ್ತೇವೆ ಎಂದಿದ್ದೇವೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಆಸೆ. ಜನರ ಭಾವನೆಯನ್ನಷ್ಟೇ ದೇವೇಗೌಡರು ಹೇಳಿದ್ದಾರೆ ಎಂದರು.

ಮೇಕೆದಾಟಿಗೆ ಪರ್ಮಿಷನ್ ಕೊಟ್ಟರೆ ಮೂರೇ ವರ್ಷದಲ್ಲಿ ಅಣೆಕಟ್ಟು ನಿರ್ಮಾಣ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆಗೆ ಮೊದಲು ಅವರ ಮಿತ್ರಪಕ್ಷ ಡಿಎಂಕೆಯನ್ನು ಒಪ್ಪಿಸಲಿ. ಕೇಂದ್ರ ಸರ್ಕಾರವನ್ನು ಒಪ್ಪಿಸುವ ಭಾರ ನಮ್ಮದು. ಅವರ ಮಿತ್ರಪಕ್ಷ ಕ್ಯಾತೆ ತೆಗೆದುಕೊಂಡು ಕೂತಿದೆಯಲ್ಲ, ಅದರ ಬಗ್ಗೆ ಅವರು ಮೊದಲು ಬಾಯಿ ತೆರೆಯಲಿ ಎಂದು ಟಾಂಗ್ ನೀಡಿದರು.

ನಿಖಿಲ್ ಗೆಲುವು ಖಚಿತ :

ಚನ್ನಪಟ್ಟಣ ಕ್ಷೇತ್ರದಲ್ಲಿ ಜನರ ಒಲವು ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿಭಿನ್ನ ಪಕ್ಷಗಳಿಂದ ಐದು ಬಾರಿ ಶಾಸಕರಾಗಿ ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಈಗ ಒಬ್ಬ ಯುವಕ ಸ್ಪರ್ಧೆ ಮಾಡಿದ್ದಾನೆ, ಆತನನ್ನು ಒಮ್ಮೆ ನೋಡೋಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಕೂಡ ಈ ಬಾರಿ 122 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ. ನಿಖಿಲ್ 190 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ದೇವೇಗೌಡರು, ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ದಾಳಿ ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಿಖಿಲ್ ಗೆಲ್ಲುವುದು ಖಚಿತ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನನ್ನಣ್ಣ 23ನೇ ವಯಸ್ಸಲ್ಲೇ ದೇವೇಗೌಡರ ವಿರುದ್ಧ ತೊಡೆ ತಟ್ಟಿದ್ದರು: ಡಿ.ಕೆ.ಸುರೇಶ್

ಮೈಸೂರಿನಲ್ಲಿ ಸಚಿವರು ಇನ್ನಿತರರು ಹೊಡೆದಾಡಿಕೊಂಡಿರುವುದು ವರ್ಗಾವಣೆ ವ್ಯವಹಾರ ದಂಧೆ ವಿಚಾರಕ್ಕೆ ಎನ್ನುವ ಮಾಹಿತಿ ಇದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಹಂಚಿಕೆ ವಿಚಾರಕ್ಕೆ ಹೊಡೆದಾಡಿಕೊಂಡಿದ್ದಾರೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆಯುತ್ತಾರೆಂದರೆ ಈ ರಾಜ್ಯದ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಗಮನಿಸಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ. 

ಬಿಎಸ್‌ವೈ, ರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು ರಾಜಕೀಯ ದುರುದ್ದೇಶ: ಎಚ್‌ಡಿಕೆ

ಚನ್ನಪಟ್ಟಣ: ಕೋವಿಡ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು ಮಾಡಿರುವುದು ರಾಜಕೀಯ ‌ದುರುದ್ದೇಶ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಧೀನ ಸಂಸ್ಥೆಗಳನ್ನು, ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಪ್ರತಿಪಕ್ಷ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ಇಂಥ ಕೆಟ್ಟ ರಾಜಕೀಯಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

click me!