ಪ್ಲಾನ್‌ ನಾವು ಮಾಡ್ತೇವೆ, ನೀವು ಜಾರಿಗೆ ತನ್ನಿ: ಅಮಿತ್‌ ಶಾ

By Kannadaprabha NewsFirst Published Dec 31, 2022, 8:00 AM IST
Highlights

ಎಲ್ಲ ಜಾತಿ ಜೋಡಿಸಿಕೊಂಡು ಹೋಗಿ, ಜೆಡಿಎಸ್‌ಗೂ ನಮಗೂ ಸಂಬಂಧ ಇಲ್ಲ ಎಂಬುದು ಸ್ಪಷ್ಟವಾಗಲಿ. ಇಲ್ಲದಿದ್ದರೆ ಜೆಡಿಎಸ್‌ಗೆ ಹೆಚ್ಚು ಲಾಭ ಸಾಧ್ಯತೆ. ಚಾ.ನಗರದ 4, ರಾಮನಗರದ 2 ಕ್ಷೇತ್ರ ಕೇಂದ್ರೀಕರಿಸಿ: ಕೇಂದ್ರ ಸಚಿವ ಅಮಿತ್‌ ಶಾ. 

ಬೆಂಗಳೂರು(ಡಿ.31):  ‘ಒಕ್ಕಲಿಗ ಸಮುದಾಯದ ಜತೆಗೆ ಇತರ ಸಮುದಾಯವನ್ನು ಸಹ ಜೋಡಿಸಿಕೊಂಡು ಹೋಗಬೇಕು’ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ, ‘ಜೆಡಿಎಸ್‌ಗೂ, ನಮಗೂ ಸಂಬಂಧ ಇಲ್ಲ. ಈ ಬಗ್ಗೆ ಎಲ್ಲರಿಗೂ ಸ್ಪಷ್ಟತೆ ಇರಬೇಕು. ನಮ್ಮ ಜತೆಗೆ ಸಂಬಂಧ ಇದೆ ಎಂದು ಹೇಳಿ ಜೆಡಿಎಸ್‌ ರಾಜಕೀಯ ಲಾಭ ಪಡೆಯುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಗೆಲುವಿಗೆ ಯೋಜನೆಯನ್ನು ನಾವು ಮಾಡುತ್ತೇವೆ. ನೀವು ಅದನ್ನು ಕಾರ್ಯರೂಪಕ್ಕೆ ತನ್ನಿ’ ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿದರು.

ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಪ್ರಾಥಮಿಕ ಡೇರಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಮತ್ತು ರಾಮನಗರ ಜಿಲ್ಲೆಯ ಎರಡು ಕ್ಷೇತ್ರ ಕೇಂದ್ರೀಕರಿಸಬೇಕು. ಬೆಂಗಳೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು ಎಂದು ಮೂಲಗಳು ಹೇಳಿವೆ. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ‘ಹಳೆ ಮೈಸೂರು ಭಾಗದ ನಾಯಕರ ಕುರಿತು ಸಭೆ ನಡೆದಿದೆ. 59 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವಿಲ್ಲದಿರುವುದೇ ಸೋಲಿಗೆ ಕಾರಣವಾಗುತ್ತಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗುತ್ತದೆ. ಪಕ್ಷವನ್ನು ಇನ್ನಷ್ಟುಬಲ ಪಡಿಯುಸವ ಕೆಲಸ ಮಾಡುತ್ತೇವೆ. ಶಕ್ತಿ ಇಲ್ಲದ ಕಡೆ ಗೆಲ್ಲುವ ಅಭ್ಯರ್ಥಿಯನ್ನು ಹುಡುಕುತ್ತೇವೆ. ಗೆಲ್ಲುವ ಅಭ್ಯರ್ಥಿಯನ್ನು ಪಕ್ಷಕ್ಕೆ ಕರೆತಂದು ಗೆಲ್ಲಿಸುತ್ತೇವೆ. ನಮಗೆ ಗೆಲುವು ಒಂದೇ ಮಾನದಂಡ. ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

click me!