ಆಗ ನಡ್ಡಾ ಅವರು ಬಂದು ಪ್ರಭಾಕರ ಕೋರೆ ಅವರನ್ನು ‘ಕೈಸೇ ಹೈ ಕೋರೆ ಸಾಹಬ್’ ಎಂದು ಮಾತನಾಡಿಸಿದ್ದಾರೆ. ಆಗ ಅಲ್ಲೇ ಇದ್ದ ಯತ್ನಾಳರು ಮಾತನಾಡಿಸಲು ಬಂದಾಗ ನಡ್ಡಾ ಅವರು ನಮಸ್ಕಾರ ಎಂದು ಹೇಳಿ ಅಮಿತ್ ಶಾರತ್ತ ಕಣ್ಣು ತೋರಿಸಿದ್ದಾರೆ.
ಪ್ರಶಾಂತ್ ನಾತು, ಇಂಡಿಯಾ ಗೇಟ್
ರಾಜಕಾರಣದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು, ಉದ್ದೇಶ ಪ್ರಾಪ್ತಿಗೆ ಮಾತು ಸಾಧನವೇ ಹೊರತು ಬರೀ ಮಾತು ಮಾತು ಮಾತಿನಿಂದ ಮಾತ್ರವೇ ಏನೂ ಸಾಧ್ಯ ಆಗುವುದಿಲ್ಲ. ಬಹುತೇಕ ಇದನ್ನು ಅರಿಯದೆಯೋ, ಅರಿತು ಕೂಡ ನಾಲಿಗೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ ಆಗದೆಯೋ ಬಸನಗೌಡ ಪಾಟೀಲ ಯತ್ನಾಳರು ಯಾವ ಮನೆಯನ್ನು ಶುದ್ಧ ಮಾಡಬೇಕು ಎಂದು ಹೊರಟಿದ್ದರೋ ಅದೇ ಮನೆಯಿಂದ ಹೊರಗೆ ಹಾಕಲ್ಪಟ್ಟು ಕವಲು ದಾರಿಯಲ್ಲಿ ನಿಂತಿದ್ದಾರೆ. ಒಂದು ರೀತಿಯಲ್ಲಿ ನಾಯಕರು ಹೋಗು ಅಂತಾರೆ, ಕಾರ್ಯಕರ್ತರು ಅಯ್ಯೋ ಅನ್ನುತ್ತಾರೆ ಅನ್ನುವ ಸ್ಥಿತಿ ಯತ್ನಾಳ ಸಾಹೇಬರದು. ಸೋಮವಾರ ಮಧ್ಯಾಹ್ನ ದಿಲ್ಲಿ ಸಂಸತ್ ಭವನಕ್ಕೆ ಹೋಗಿದ್ದ ಯತ್ನಾಳರು ಊಟ ಮಾಡಬೇಕು ಎಂದು ಅಲ್ಲೇ ಸಿಕ್ಕಿದ್ದ ಪ್ರಭಾಕರ ಕೋರೆ ಮತ್ತು ಮಹಾಂತೇಶ ಕವಟಗಿಮಠ ಅವರನ್ನು ಕರೆದುಕೊಂಡು ಪಾರ್ಲಿಮೆಂಟ್ ಕ್ಯಾಂಟೀನ್‌ಗೆ ಹೋಗಿದ್ದಾರೆ. ಅಲ್ಲಿ ಅಚಾನಕ್ ಆಗಿ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಊಟಕ್ಕೆ ಎಂದು ಬಂದಿದ್ದಾರೆ.
ಆಗ ನಡ್ಡಾ ಅವರು ಬಂದು ಪ್ರಭಾಕರ ಕೋರೆ ಅವರನ್ನು ‘ಕೈಸೇ ಹೈ ಕೋರೆ ಸಾಹಬ್’ ಎಂದು ಮಾತನಾಡಿಸಿದ್ದಾರೆ. ಆಗ ಅಲ್ಲೇ ಇದ್ದ ಯತ್ನಾಳರು ಮಾತನಾಡಿಸಲು ಬಂದಾಗ ನಡ್ಡಾ ಅವರು ನಮಸ್ಕಾರ ಎಂದು ಹೇಳಿ ಅಮಿತ್ ಶಾರತ್ತ ಕಣ್ಣು ತೋರಿಸಿದ್ದಾರೆ. ಆಗ ಯತ್ನಾಳರು ಅಮಿತ್ ಶಾರನ್ನು ಮಾತನಾಡಿಸಲು ಹೋದಾಗ ಯಾವುದೇ ಪ್ರತಿಕ್ರಿಯೆ ಕೊಡದ ಅಮಿತ್ ಶಾ ಉಳಿದವರಿಗೆ ಕೈ ಮುಗಿಯುತ್ತಾ ಅಲ್ಲಿಂದ ತೆರಳಿದರಂತೆ. ಈ ಘಟನೆ ನಡೆದು ಸರಿಯಾಗಿ 24 ಗಂಟೆಗಳಲ್ಲಿ ಯತ್ನಾಳರ ಉಚ್ಚಾಟನೆ ಆದೇಶ ತಯಾರು ಆಗಿದೆ. ಆದರೆ ಮಾಧ್ಯಮಗಳಿಗೆ ಬಿಡುಗಡೆ ಆಗಿದ್ದು ಮಾತ್ರ ಮರುದಿನ ಅಂದರೆ ಬುಧವಾರ ಸಂಜೆ. ಯತ್ನಾಳರ ಇಂದಿನ ಸ್ಥಿತಿ ನೋಡಿ ಡಿವಿಜಿ ಬರೆದ ಕಗ್ಗ ನೆನಪಿಗೆ ಬರುತ್ತದೆ ‘ಏನು ಪ್ರಪಂಚವಿದು ಏನು ಧಾಳಾಧಾಳಿ ಏನದ್ಭುತ ಅಪಾರ ಶಕ್ತಿ ನಿರ್ಘತಮಾನವನ ಗುರಿಯೇನು ಬೆಲೆಯೇನು ಮೊಗವೇನು ಏನರ್ಥವಿದಕೆಲ್ಲಾ ಮಂಕುತಿಮ್ಮ.’ ಹೋದಲ್ಲಿ ಬಂದಲ್ಲಿ ಅನಗತ್ಯವಾಗಿ ಮಾತಾಡಿ ಯತ್ನಾಳರು ಇವತ್ತು ತಮ್ಮ ಪಾರ್ಟಿಗೆ ಬೇಡವಾಗಿದ್ದು ಒಂದು ವಿಪರ್ಯಾಸ ಅಷ್ಟೇ.
ಜನತೆಗೆ ಬೆಲೆ ಏರಿಕೆ ವಿರುದ್ಧ ಏ.2ರಿಂದ ಬಿಜೆಪಿ ಸರಣಿ ಧರಣಿ: ಬಿ.ವೈ.ವಿಜಯೇಂದ್ರ
ಉಚ್ಚಾಟನೆ ತಡವಾಗಿದ್ದು ಯಾಕೆ?: ಫೆಬ್ರವರಿ 10ಕ್ಕೆ ಬಸನಗೌಡ ಯತ್ನಾಳರಿಗೆ ಪುನರಪಿ ಶೋಕಾಸ್ ನೋಟಿಸ್ ಕೊಟ್ಟಾಗಲೇ ಅವರನ್ನು ಉಚ್ಚಾಟನೆ ಮಾಡುವುದೇ ಕರ್ನಾಟಕದ ಬಿಜೆಪಿ ಬಿಕ್ಕಟ್ಟನ್ನು ಬಗೆಹರಿಸುವ ಏಕೈಕ ಮಾರ್ಗ ಅನ್ನುವ ಅಭಿಪ್ರಾಯಕ್ಕೆ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಇಬ್ಬರೂ ಬಂದಿದ್ದರು. ಇದನ್ನು ಕರ್ನಾಟಕದ ಆರ್‌ಎಸ್‌ಎಸ್ ನಾಯಕರ ಜೊತೆಗೂ ಚರ್ಚಿಸಲಾಗಿತ್ತು. ಆದರೆ ಯಾವಾಗ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಗೋವಿಂದ ಕಾರಜೋಳ ಹೋಗಿ ‘ಗಡಿಬಿಡಿ ಮಾಡಬೇಡಿ, ನಾವು ಯತ್ನಾಳರಿಗೆ ತಿಳಿಸಿ ಹೇಳುತ್ತೇವೆ’ ಎಂದು ಹೇಳಿದರೋ ಆಗ ಹೈಕಮಾಂಡ್ ಸ್ವಲ್ಪ ತಣ್ಣಗಾಯಿತು.
ಅಷ್ಟೇ ಅಲ್ಲ, ಯಾವಾಗ ಶ್ರೀರಾಮುಲು ಮತ್ತು ಡಾ। ಸುಧಾಕರ ಬಹಿರಂಗವಾಗಿ ಮಾತನಾಡಲು ಶುರು ಮಾಡಿದರೋ ದಿಲ್ಲಿ ನಾಯಕರು ನಿರ್ಣಯ ಪ್ರಕ್ರಿಯೆಯನ್ನು ತಾವೇ ಮುಂದೂಡತೊಡಗಿದರು. ಕೊನೆಗೆ ಹತ್ತು ದಿನದ ಹಿಂದೆ ಜೆ.ಪಿ. ನಡ್ಡಾ ಸ್ವಯಂಪ್ರಯತ್ನವಾಗಿ ವಿಜಯೇಂದ್ರ ಮತ್ತು ಯತ್ನಾಳರನ್ನು ಪರಸ್ಪರ ಎದುರು ಕುಳಿತು ಮಾತನಾಡಿಸಿ ಜಗಳ ಬಗೆಹರಿಸಲು ನೋಡುವಾ ಅಂದಾಗ ವಿಜಯೇಂದ್ರ ಸಹಜವಾಗಿ ತಯಾರಾದರು. ಆದರೆ ಯತ್ನಾಳ ಮಾತ್ರ ಯಾವುದೇ ಕಾರಣಕ್ಕೂ ವಿಜಯೇಂದ್ರ ಮತ್ತು ಯಡಿಯೂರಪ್ಪ ಜೊತೆಗೆ ರಾಜಿ ಇಲ್ಲವೇ ಇಲ್ಲ ಎಂದು ಹೇಳಿ ನೀವು ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಯಾರನ್ನು ಬೇಕಾದರೂ ಮಾಡಿ. ನನ್ನ ಅಭ್ಯಂತರ ಇಲ್ಲ ಎಂದು ಹೇಳಿದರಂತೆ. ದಿಲ್ಲಿ ಮೂಲಗಳು ಹೇಳುವ ಪ್ರಕಾರ, ಉಚ್ಚಾಟನೆ ಮಾಡುವ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಿರಿಯ ಸಂಸದರನ್ನು ಕರೆದು ನಮ್ಮ ಬಳಿ ಯತ್ನಾಳರನ್ನು ಹೊರಗೆ ಹಾಕದೇ ಬೇರೆ ದಾರಿ ಇಲ್ಲ ಎಂದು ಹೇಳಿದರಂತೆ.
ಯತ್ನಾಳ ಅಂಡ್ ಕಂಪನಿ ಮುಂದೇನು?: ಯಾವಾಗ ಬಸನಗೌಡರಿಗೆ ಬಿಜೆಪಿ ವರಿಷ್ಠರು ಭೇಟಿ ಆಗಲಿಕ್ಕೆ ಸಮಯಾವಕಾಶವನ್ನು ನೀಡಲಿಲ್ಲವೋ ಆಗ ಆರ್‌ಎಸ್ಎಸ್ ನಾಯಕರನ್ನು ಭೇಟಿ ಆಗಿದ್ದ ಗೌಡರು ‘ನೀವು ಹೊರಗೆ ಹಾಕಿದರೆ ಹಾಕಿ, ನಾನು ಹಿಂದುತ್ವದ ಹೊಸ ಪ್ರಾದೇಶಿಕ ಪಾರ್ಟಿ ಹುಟ್ಟು ಹಾಕುತ್ತೇನೆ’ ಎಂದು ಹೇಳಿಕೊಂಡಿದ್ದರು. ಆದರೆ ಉಚ್ಚಾಟನೆ ಆದ ಬಳಿಕ ಮೊನ್ನೆ ನಡೆದ ಸಭೆಯಲ್ಲಿ ರಮೇಶ ಜಾರಕಿಹೊಳಿ, ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ‘ಯಾವುದೇ ಕಾರಣಕ್ಕೂ ಹೊಸ ಪಾರ್ಟಿ ಅನ್ನಬೇಡಿ. ನಾವು ದೇವೇಂದ್ರ ಫಡ್ನವೀಸ, ವಿನೋದ ತಾವಡೆ ಮೂಲಕ ಅಮಿತ್ ಶಾರನ್ನು ಮನವಿ ಮಾಡಿಕೊಳ್ಳುತ್ತೀವಿ. 3 ತಿಂಗಳು ತಾಳ್ಮೆ ಇಂದ ಇರಿ’ ಎಂದು ಹೇಳಿದಾಗ ‘ಸರಿ ನೀವು ಏನು ಹೇಳುತ್ತಿರೋ, ಅದಕ್ಕೆ ನನ್ನ ಒಪ್ಪಿಗೆ ಇದೆ’ ಎಂದು ಯತ್ನಾಳ್ ಹೇಳಿ ಬಂದಿದ್ದಾರೆ.
ಆದರೆ ಯತ್ನಾಳ ಸ್ವಭಾವತಃ ಭಾಳ ದಿನ ಸುಮ್ಮನೆ ಇರುವ ಜಾಯಮಾನದವರು ಅಲ್ಲ. ಯತ್ನಾಳ ಮಾತಾಡಿದರೆ ಒಂದಷ್ಟು ದಿನ ಸುದ್ದಿ ಆಗಬಹುದೊ ಏನೋ. ಆದರೆ ಯತ್ನಾಳ ಜೊತೆ ತಮ್ಮ ಭವಿಷ್ಯದ ಚಿಂತೆಯಲ್ಲಿ ಯತ್ನಾಳರ ಜೊತೆಗಾರರು ಇದ್ದಾರೆ. ಯಾವುದೇ ಪಾರ್ಟಿಯಲ್ಲಿ ನೀವು ಇದ್ದರು ಕೂಡ ರಾಜಕಾರಣದ ಒಂದು ನಿಯಮ ಏನು ಅಂದರೆ ‘ನಿಮಗೇನು ಬೇಕೋ ಅದನ್ನು ಕೇಳಿದಾಗ ಸಿಗದಿದ್ದಲ್ಲಿ ಹಟ ಹಿಡಿಯುವ ಹಕ್ಕು ಎಲ್ಲರಿಗೂ ಇದೆ. ಆದರೆ ನಿಮಗೆ ಬೇಡವಾದವರಿಗೆ ಏನೋ ಸಿಕ್ಕಾಗ ಅದನ್ನು ತೆಗೆಸಿ, ಇಲ್ಲವಾದರೆ ಆಟ ಕೆಡಿಸುತ್ತಾ ಇರುತ್ತೇನೆ’ ಎಂದರೆ ಆ ರಾಜಕಾರಣಕ್ಕೆ ಅರ್ಥವೂ ಇಲ್ಲ ಬಾಳಿಕೆಯೂ ಇಲ್ಲ. ಇಷ್ಟು ಸುದೀರ್ಘ ರಾಜಕಾರಣ ಮಾಡಿದರು ಕೂಡ ಯತ್ನಾಳರಿಗೆ ಇಷ್ಟು ಸಾಮಾನ್ಯ ಸತ್ಯ ಅರ್ಥ ಆಗದೇ ಇದ್ದದ್ದು ಸೋಜಿಗ.
ವಾಚಾಳಿ ಪರಂಪರೆಯ ನಾಯಕರು: ಅದೇನೋ ಗೊತ್ತಿಲ್ಲ, ಅತ್ಯಂತ ವೈಚಾರಿಕ ಹಿನ್ನೆಲೆಯಿಂದ ವಿಚಾರಕ್ಕೆ ಬದ್ಧತೆ ಇರುವ ರಾಜಕಾರಣಿಗಳಿಗೆ ‘ವಾಚಾಳಿ’ ಎನ್ನುವುದು ಒಂದು ಶಾಪ. ಜನ ಸಂಘದಲ್ಲಿದ್ದ ಎ.ಕೆ. ಸುಬ್ಬಯ್ಯ ಅಪ್ರತಿಮ ವಿರೋಧ ಪಕ್ಷದ ನಾಯಕ. ಆದರೆ ಭಾವುರಾವ್ ದೇಶಪಾಂಡೆ ಅಂಥವರನ್ನು ಬೈದು ಪಾರ್ಟಿಯಿಂದ ಹೊರಗಡೆ ಹೋಗಬೇಕಾಯಿತು. ರಾಷ್ಟ್ರಮಟ್ಟದಲ್ಲಿ ಸುಬ್ರಮಣಿಯನ್ ಸ್ವಾಮಿ ಮತ್ತು ಬಲರಾಜ್ ಮುಧೋಕ್ ಕೂಡ ಹೊರಗೆ ಹೋಗಿದ್ದು ಅಟಲ್ ಬಿಹಾರಿ ವಾಜಪೇಯಿ ಮೇಲೆ ನಡೆಸಿದ ನಿರಂತರ ವಾಗ್ದಾಳಿಗಳಿಂದಾಗಿ. ಹಿಂದುತ್ವದ ಐಕಾನ್ ಆಗಿದ್ದ ಅನಂತ ಕುಮಾರ ಹೆಗಡೆಗೆ ಹಿಂದುತ್ವದ ಬದ್ಧತೆ, ಪ್ರಾಮಾಣಿಕತೆ ಇತ್ತು ಹೌದು. ಆದರೆ ಪದೇ ಪದೇ ಸಂವಿಧಾನದ ಬಗ್ಗೆ ಮಾತಾಡಿ ತಮ್ಮದೇ ಪಾರ್ಟಿ ಮತ್ತು ಸಂಘ ಪರಿವಾರಕ್ಕೆ ಬೇಡವಾಗಿ ತೆರೆ ಮರೆಗೆ ಸರಿಯುವಂತಾಯಿತು.
ಇನ್ನು ಮೈಸೂರು ಸಂಸದ ಪ್ರತಾಪ ಸಿಂಹ ಕ್ಷೇತ್ರದ ಕೆಲಸವನ್ನು ಕಾಯಾ ವಾಚಾ ಮನಸಾ ಮಾಡಿದರಾದರೂ ಮಾತಿನ ಶೈಲಿಯಿಂದ ಇಲ್ಲದ ವಿರೋಧಿಗಳನ್ನು ತಾವೇ ಸೃಷ್ಟಿಸಿಕೊಂಡು ಟಿಕೆಟ್ ತಪ್ಪಿಸಿಕೊಂಡರು. ಈಶ್ವರಪ್ಪ ಮತ್ತು ಸಿ.ಟಿ.ರವಿ ಇಬ್ಬರಿಗೂ ಹಿಂದುತ್ವದ ಬದ್ಧತೆ ಏನು ಕಮ್ಮಿ ಇತ್ತಾ? ಆದರೆ ಆಡುವ ಮಾತಿನಲ್ಲಿ ತೂಕ ಇರದೇ ಮಿತ್ರರು ಕಡಿಮೆ ಆಗಿ, ಶತ್ರುಗಳು ಹೆಚ್ಚಾಗಿ ಸಮಸ್ಯೆ ಅನುಭವಿಸಿದರು. ಈಗ ಯತ್ನಾಳರ ಸರದಿ. ರಮೇಶ ಜಾರಕಿಹೊಳಿ ಪದೇ ಪದೇ ಯತ್ನಾಳ ‘ಹಿಂಗ ಮಾತಾಡ ಬೇಡಪಾ, ದಿಲ್ಲಿಯವರಿಗೆ ಇಷ್ಟ ಆಗೋಲ್ಲ. ನಮಗೆಲ್ಲ ಸಮಸ್ಯೆ ಆಗುತ್ತೆ’ ಅಂದರೆ ಯತ್ನಾಳ, ‘ರಮೇಶ, ನಾನು ಪಂಚಮಸಾಲಿ ಲಿಂಗಾಯತ ಅದೇನಿ. ಹಂಗೆಲ್ಲಾ ಏನೂ ಆಗೋದಿಲ್ಲ’ ಅನ್ನುತ್ತಿದ್ದರು ಅಂತೆ. ಬಿಜೆಪಿಯಲ್ಲೇ ಇದ್ದ ಚಾಣಾಕ್ಷ ರಾಜಕಾರಣಿ ಅನಂತ ಕುಮಾರ ಯಾವಾಗಲೂ ಒಂದು ಮಾತು ಹೇಳೋರು- ರಾಜಕಾರಣವನ್ನು ಮೆದುಳಿನಿಂದ ಆಡಬೇಕೆ ಹೊರತು ಹೃದಯದಿಂದ ಅಲ್ಲ. ಆದರೆ ತಮ್ಮ ಬಳಿ ಕೆಲಸಕ್ಕೆ ಬರುವ ಜನರ ಸೇವೆಯನ್ನು ಮಾತ್ರ ಅಂತಃಕರಣದಿಂದ ಮಾಡಬೇಕು.
ಕರ್ನಾಟಕದಲ್ಲಿ ಶೇ.4 ಮುಸ್ಲಿಂ ಮೀಸಲು ಕೋರ್ಟಲ್ಲೇ ರದ್ದಾಗುತ್ತೆ: ಕೇಂದ್ರ ಸಚಿವ ಅಮಿತ್ ಶಾ
ವಿಜಯೇಂದ್ರ ಸ್ಥಾನ ಅಬಾಧಿತ?: ಯತ್ನಾಳ ಮೇಲೆ ಉಚ್ಚಾಟನೆ ಕ್ರಮ ಜರುಗಿಸಿ ವಿಜಯೇಂದ್ರ ಆಪ್ತರಾದ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಶೋಕಾಸ್ ನೋಟಿಸ್ ಕೊಟ್ಟು ಇನ್ನು ಮೇಲೆ ಬಹಿರಂಗ ಜಗಳ, ಕಿತ್ತಾಟ, ಆರೋಪ- ಪ್ರತಿ ಆರೋಪಗಳನ್ನು ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಯತ್ನಾಳ ಜೊತೆ ಜೊತೆಗೆ ವಿಜಯೇಂದ್ರರಿಗೂ ಕೂಡ ಒಂದು ಎಚ್ಚರಿಕೆ ನೀಡುವ ಪ್ರಯತ್ನವಿದು. ಆದರೆ ಬಿಜೆಪಿ ದಿಲ್ಲಿ ನಾಯಕರಿಗೆ ಸದ್ಯಕ್ಕೆ ವಿಜಯೇಂದ್ರರನ್ನು ಬದಲಿಸುವ ಮನಸ್ಸಂತೂ ಇದ್ದಂತಿಲ್ಲ. ಆದರೆ ಈಗಿರುವ ಕುತೂಹಲ ಬಿಜೆಪಿ ದಿಲ್ಲಿ ನಾಯಕರು ವಿಜಯೇಂದ್ರರನ್ನು ಹೊಸದಾಗಿ ಅಧ್ಯಕ್ಷರಾಗಿ ಮರು ಆಯ್ಕೆ ಮಾಡುತ್ತಾರೋ ಅಥವಾ ಹಳೇ ಆದೇಶದಂತೆ ಮುಂದುವರೆಸುತ್ತಾರೋ ಅನ್ನುವುದು. ಏಕೆಂದರೆ ಹೊಸ ಆದೇಶ ಬಂದರೆ ಮುಂದಿನ ಚುನಾವಣೆ 2028ರವರೆಗೆ ಮೂರು ವರ್ಷ ಅಧಿಕಾರ ಸಿಕ್ಕು ವಿಜಯೇಂದ್ರ ಅಧ್ಯಕ್ಷತೆಯಲ್ಲಿಯೇ ಚುನಾವಣೆ ನಡೆಯುತ್ತದೆ. ಹಳೆಯ ಆದೇಶದಂತೆ ವಿಜಯೇಂದ್ರ ಮುಂದುವರೆದರೆ 2026 ರ ಅಂತ್ಯದವರೆಗೆ ಮಾತ್ರ ಕಾಲಾವಧಿ ಸಿಗುತ್ತದೆ.