ಜನತೆಗೆ ಬೆಲೆ ಏರಿಕೆ ಬರೆ ಹಾಕಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಏ.2ರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಮೊದಲಿಗೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು (ಮಾ.30): ಜನತೆಗೆ ಬೆಲೆ ಏರಿಕೆ ಬರೆ ಹಾಕಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಏ.2ರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಮೊದಲಿಗೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಏ.2ರಂದು ಫ್ರೀಡಂಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಬೆಳಗ್ಗೆಯಿಂದ ಧರಣಿ ಆರಂಭಿಸಲಾಗುವುದು. ಅಂದು ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು, ರಾಜ್ಯದ ಎಲ್ಲ ಪದಾಧಿಕಾರಿಗಳು ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಏ.4ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಏ.5ರಂದು ಎಲ್ಲ ಮಂಡಲಗಳಲ್ಲಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಿದ್ದೇವೆ. ಪಕ್ಷದ ಎಲ್ಲ ಮುಖಂಡರು ಕುಳಿತು ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ವಿಶೇಷವಾಗಿ ರಾಜ್ಯ ಸರ್ಕಾರವು ಬೆಲೆ ಏರಿಕೆಯ ಗ್ಯಾರಂಟಿ ನೀಡಿದೆ. ನೀರಿನ ದರ, ಪೆಟ್ರೋಲ್ ದರ ಹೆಚ್ಚಳ ಮಾಡಲಾಗಿದೆ. ಹಾಲಿನ ದರವನ್ನು ಮೂರನೇ ಬಾರಿಗೆ ಅಧಿಕ ಮಾಡಲಾಗಿದೆ. ವಿದ್ಯುತ್ ದರ ಸಹ ಹೆಚ್ಚಿಸಲಾಗಿದೆ. ಬೆಲೆ ಏರಿಕೆ ಜನರಿಗೆ ಯುಗಾದಿ ಕೊಡುಗೆಯಂತಿದೆ ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಜನಾಂದೋಲನ ಮಾಡಲಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವು ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿದ್ದು, ಇದು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆಯಂತಿದೆ. ಹಿಂದೂಗಳಿಗೆ ಮಾಡಿದ ಈ ಅವಮಾನದ ವಿರುದ್ಧ ಜನಜಾಗೃತಿ ಮೂಡಿಸುತ್ತೇವೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಪ್ರವಾಸ ಮಾಡುತ್ತೇವೆ ಎಂದು ತಿಳಿಸಿದರು.18 ಶಾಸಕ ಅಮಾನತು
ಅಕ್ರಮ ಗಣಿ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ, ಹೈಕೋರ್ಟ್ ಹೇಳಿದ್ದೇನು?
ಖಂಡಿಸಿ ಏ.2ಕ್ಕೆ ಧರಣಿ: ಇದೇ ವೇಳೆ ಏ.2ರಂದು ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿರುವ ಕ್ರಮ ಖಂಡಿಸಿ ವಿಧಾನಸೌಧದ ಮುಂಭಾಗದಲ್ಲಿನ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗದಲ್ಲಿ ಪಕ್ಷದ ಶಾಸಕರೆಲ್ಲಾ ಸೇರಿ ಪ್ರತಿಭಟನೆ ಮಾಡುತ್ತೇವೆ. ಸಭಾಧ್ಯಕ್ಷರನ್ನು ಭೇಟಿ ಮಾಡಿ ಅಮಾನತು ಮಾಡಿರುವ ಕ್ರಮವನ್ನು ಹಿಂಪಡೆಯುವಂತೆ ಮನವಿ ಮಾಡಲಾಗುವುದು ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು. ಸಭಾಧ್ಯಕ್ಷರ ನಿರ್ಣಯವು ಮತದಾರರಿಗೆ ಮಾಡಿದ ಅವಮಾನವಾಗಿದೆ. 18 ಶಾಸಕರ ಅಮಾನತನ್ನು ಹಿಂಪಡೆಯುವವರೆಗೆ ಬಿಜೆಪಿಯ ಶಾಸಕರು, ವಿಧಾನಪರಿಷತ್ ಸದಸ್ಯರು ಸಮಿತಿ ಸಭೆಗಳಿಗೆ ಹಾಜರಾಗುವುದಿಲ್ಲ ಎಂಬುದಾಗಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.