ತನಗೆ ಮತ ಹಾಕದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ: ಇದೆಂಥಾ ಚುನಾವಣೆ!

By Sathish Kumar KH  |  First Published Jul 23, 2023, 11:46 AM IST

ತುಮಕೂರು ಜಿಲ್ಲೆಯ ದಬ್ಬೇಗಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ತನಗೆ ಮತ ಚಲಾವಣೆ ಮಾಡದ ಸದಸ್ಯನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.


ತುಮಕೂರು (ಜು.23): ಯಾವುದೇ ಸ್ಪರ್ಧೆ ಎಂದರೂ ಅದರಲ್ಲಿ ಸೋಲು, ಗೆಲುವು ಸಾಮಾನ್ಯವಾಗಿರುತ್ತದೆ. ಅದು ಆಟವೇ ಆಗಿರಬಹುದು ಇಲ್ಲವೇ ಚುನಾವಣೆ ಆಗಿರಬಹುದು. ಆದರೆ, ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಸೋಲನುಭವಿಸಿದ ಮಹಿಳೆಯೊಬ್ಬಳು, ಮತ್ತೊಬ್ಬ ಸದಸ್ಯನಿಗೆ ಚಪ್ಪಲಿಯಿಂದ ಹೊಡೆದು ವಿಕೃತಿ ಮೆರೆದಿದ್ದಾಳೆ.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತಿದ್ದಕ್ಕೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ. ಇನ್ನು ಚುನಾವಣೆಯಲ್ಲಿ ಸೋತ ಹತಾಶೆಯಲ್ಲಿ ಸದಸ್ಯನಿಗೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ಧಗಳಿಂದ ಬೈದು, ಶರ್ಟ್ ಹರಿದು ಹಾಕಿದ್ದಾಳೆ. ಸುಧಾ ಜಿ.ಎನ್. ಎಂಬ ಸದಸ್ಯೆಯಿಂದ ಹಲ್ಲೆ ತನಗೆ ಮತ ಚಲಾವಣೆ ಮಾಡದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾಳೆ. 

Tap to resize

Latest Videos

Bengaluru: ಐಷಾರಾಮಿ ಜೀವನಕ್ಕೆ ಉದ್ಯೋಗವೇ ಬೇಡ, ಕಳ್ಳತನವೇ ಸಾಕು! ರಫೀಕ್‌ನ ಕಳ್ಳಾಟ ಬಯಲು

ತನಗೆ ಮತ ಹಾಕಿಲ್ಲವೆಂದು ಚಪ್ಪಲಿಯಿಂದ ಹಲ್ಲೆ: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ, ನನಗೆ ಮತ ಹಾಕುವಂತೆ ಹಲವು ಬಾರಿ ಕೇಳಿಕೊಂಡಿದ್ದೇನೆ. ಆದರೂ, ಆಮಿಷಕ್ಕೆ ಒಳಗಾಗಿ ನೀನು ನನಗೆ ಮತ ಹಾಕಿಲ್ಲ. ಹಾಗಾಗಿ ನಾನು ಸೋತಿದ್ದೇನೆ ಎಂದು ಗಲಾಟೆ ಮಾಡಿರುವ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಗ್ರಾಮ ಪಂಚಾಯಿತಿ ಕಚೇರಿ ಒಳಗೆ ನುಗ್ಗಿ ಸದಸ್ಯ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಮಣಿ ಎಂಬುವರು ಅಧ್ಯಕ್ಷೆಯಾಗಿ ಗೆಲುವು ಸಾಧಿಸಿದ್ದಾರೆ. ಇನ್ನು ಚಪ್ಪಲಿಯಿಂದ ಹಲ್ಲೆ ಮಾಡಿದ ಸುಧಾ ತಲೆಮರೆಸಿಕೊಂಡಿದ್ದಾಳೆ. ಈ ಘಟನೆ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ತುಮಕೂರು ಗ್ರಾಮಾಂತರ ಕ್ಷೇತ್ರದ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಪಟ್ಟಿ ಇಲ್ಲಿದೆ:  ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 7 ಗ್ರಾಪಂಗಳಿಗೆ ನಡೆದ 2 ಹಂತದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಐದರಲ್ಲಿ ಅವಿರೋಧ ಆಯ್ಕೆ ನಡೆದಿದ್ದು, 2 ಪಂಚಾಯಿತಿಗಳಲ್ಲಿ ಚುನಾವಣೆ ನಡೆದಿದ್ದು, 7 ಗ್ರಾಮ ಪಂಚಾಯಿತಿಗಳಲ್ಲಿಯೂ ಬಿಜೆಪಿ ಬೆಂಬಲಿತ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಿಡುವಳಲು: ನಿಡುವಳಲು ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೂ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹನುಮಂತರಾಯಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.

ನಾಗವಲ್ಲಿ: ನಾಗವಲ್ಲಿ ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಂಗಳ ಗೌರಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಎನ್‌.ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಮಂಗಳಗೌರಮ್ಮ, ಉಪಾಧ್ಯಕ್ಷರಾಗಿ ಜ್ಯೋತಿ.ಎನ್‌. ಅವರು ಅವಿರೋಧವಾಗಿ ಆಯ್ಕೆಯಾದರು.

ಹೊನ್ನುಡಿಕೆ: ಹೊನ್ನುಡಿಕೆ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಜನರಲ… ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿ ಕಿಟ್ಟಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ರಾಮಕೃಷ್ಣಯ್ಯ (ಅಪ್ಪಿ) ಅವರು ಸ್ಪರ್ಧಿಸಿದ್ದರು. ಎರಡು ಹುದ್ದೆಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ, ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಕಿಟ್ಟಪ್ಪ, ಉಪಾಧ್ಯಕ್ಷರಾಗಿ ರಾಮಕೃಷ್ಣ (ಅಪ್ಪಿ) ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಹೆಬ್ಬೂರು: ಹೆಬ್ಬೂರು ಗ್ರಾಪಂನ ಅಧ್ಯಕ್ಷ ಸ್ಥಾನ ಜನರಲ… ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಕ್ಯಾಟಗೆರಿ(ಎ)ಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಬಾಬು ಎಚ್‌.ಎನ್‌ ಸ್ಪರ್ಧಿಸಿದ್ದು, ಎರಡು ನಾಮಪತ್ರಗಳ ಹೊರತು ಬೇರೆಯವರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಲಕ್ಷ್ಮೇ ದೇವಮ್ಮ, ಉಪಾಧ್ಯಕ್ಷರಾಗಿ ಬಾಬು ಎಚ್‌.ಎನ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಮ್ಮನ ಜೀವ ಉಳಿಸಿಲು ಬಾವಿಗೆ ಹಾರಿದ 8 ವರ್ಷದ ಬಾಲಕಿ: ಬುದ್ಧಿವಂತಿಕೆ ಇಬ್ಬರ ಪ್ರಾಣ ಉಳಿಸಿತು

ಬೆಳ್ಳಾವಿ: ಬೆಳ್ಳಾವಿ ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಆರ್‌.ಎಸ್‌., ಉಪಾಧ್ಯಕ್ಷರಾಗಿ ಲೋಕಮ್ಮ ಅವರು ಸ್ಪರ್ಧಿ ಮಾಡಿದ್ದು, ಇವರ ವಿರುದ್ಧ ಉಮೇದುವಾರಿಕೆ ಬಾರದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲಾಗಿದೆ.

ಮೈದಾಳ: ಮೈದಾಳ ಗ್ರಾಮಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಮಾದಗೊಂಡನ ಹಳ್ಳಿಯ ಬಿ.ಜಿ.ಉಮೇಶ್‌, ಉಪಾಧ್ಯಕ್ಷರಾಗಿ ಮಂಗಳಮ್ಮ ಅವರು ಚುನಾಯಿತರಾಗಿದ್ದಾರೆ. 31 ಸದಸ್ಯರನ್ನು ಒಳಗೊಂಡಿರುವ ಮೈದಾಳ ಗ್ರಾ.ಪಂ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಸದಸ್ಯ ಉಮೇಶ್‌ ಬಿ.ಜಿ 23 ಮತಗಳನ್ನು ಪಡೆದರೆ, ಇವರ ಎದುರಾಳಿ ಮೈದಾಳದ ನರಸಿಂಹಮೂರ್ತಿ 8 ಮತಗಳನ್ನು ಪಡೆದರು.

ಮಲ್ಲಸಂದ್ರ ಮಲ್ಲಸಂದ್ರ: ಗ್ರಾಮಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹಬ್ಬತ್ತನಹಳ್ಳಿ ಮಂಜುಮ್ಮ ಅಧ್ಯಕ್ಷರಾಗಿ, ಕೊತ್ತಿಹಳ್ಳಿ ಗಿರೀಶ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಎಸ್‌.ಸಿ. ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಬ್ಬತ್ತನಹಳ್ಳಿ ಮಂಜುಮ್ಮ ವಿರುದ್ಧ ಹಾಲುನೂರು ದುಶ್ಯಂತಮಣಿ ಸ್ಪರ್ಧಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹಬ್ಬತ್ತನಹಳ್ಳಿಯ ಎಂ.ಆರ್‌.ಮಂಜುನಾಥ್‌ ಸ್ಪರ್ಧೆ ಮಾಡಿದ್ದರು.

click me!