ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತುಘಲಕ್ ರೀತಿಯ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಭಗವಂತ ಖೂಬಾ
ಆಳಂದ(ಅ.10): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ತುಘಲಕ್ ರೀತಿಯ ಆಡಳಿತ ನಡೆಯುತ್ತಿದೆ. ಅಲ್ಲದೇ ಉದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತುಘಲಕ್ ರೀತಿಯ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ದಲಿತರಿಗೆ ಮೀಸಲಿಟ್ಟ ಎಸ್‍ಸಿಪಿ, ಟಿಎಸ್‍ಪಿ ಹಣ ಗ್ಯಾರಂಟಿ ಯೋಜನೆಗಳಿಗೆ ಹೊಂದಿಸುತಿದ್ದಾರೆ ಈ ಮೂಲಕ ದಲಿತರನ್ನು ಅಭಿವೃದ್ಧಿಯ ಪಥದಿಂದ ದೂರ ಮಾಡಲಾಗುತ್ತಿದೆ ಎಂದರು. ಬೀದರ್-ಕಲಬುರಗಿ ರೈಲು ಮಾರ್ಗದ ಸರ್ವೇ ಈಗಾಗಲೇ ಪೂರ್ಣಗೊಂಡಿದೆ ಅಲ್ಲದೇ ಲಾತೂರ- ಕಲಬುರಗಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕುರಿತು ಬಹುತೇಕ ಆಡಳಿತಾತ್ಮಕ ಕಾರ್ಯ ಮುಗಿದಿದೆ ಎಂದರು.
ಪ್ರಿಯಾಂಕ್ ಖರ್ಗೆ ರಾಜ್ಯದ ಸೂಪರ್ ಸಿಎಂ; ಸಿದ್ದರಾಮಯ್ಯರ ಮಾತಿಗೆ ಕಿಮ್ಮತ್ತಿಲ್ಲ: ಎನ್ ರವಿಕುಮಾರ್
ಕೇಂದ್ರಿಯ ವಿವಿಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಅಪಮಾನ ಮಾಡಿದ ವಿದ್ಯಾರ್ಥಿಯನ್ನು ಕೆಲವರು ಬೆಂಬಲಿಸುತ್ತಿರುವುದು ಅವರ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಕೇವಲ ಕೀಳು ಅಭಿರುಚಿಯ ಪ್ರಚಾರದ ಹುಚ್ಚಿನಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಾತು ಮಾತಿಗೆ ಒದ್ದು ಒಳಗೆ ಹಾಕ್ತೀನಿ ಎನ್ನುವ ಪ್ರಿಯಾಂಕ್ ಖರ್ಗೆ ಶಿವಮೊಗ್ಗ ಗಲಭೆಯ ವಿಚಾರದಲ್ಲಿ ಇಲ್ಲಿಯವರೆಗೆ ಯಾಕೆ ಬಾಯಿ ತೆರೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರೀಯ ವಿವಿ ಉಪಕುಲಪತಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಅಲ್ಲದೇ ಕೇಂದ್ರಿಯ ವಿವಿಯನ್ನು ಯಾವುದೇ ಕಾರಣಕ್ಕೂ ಮತ್ತೊಂದು ಜೆಎನ್‍ಯು ಆಗಲು ಬಿಡುವುದಿಲ್ಲ ಎಂದು ಗುಡುಗಿದರು.
ಮೋದಿಯವರ ಸಮರ್ಥ ನಾಯಕತ್ವ ಹಾಗೂ ಸೂಕ್ತ ನಿರ್ಣಯದಿಂದಾಗಿ ಕಳೆದ 9 ವರ್ಷಗಳಲ್ಲಿ ವಿಶ್ವದ ಅರ್ಥ ವ್ಯವಸ್ಥೆಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೆ ತಲುಪಿದೆ. ಅಲ್ಲದೆ, ಮುಂದಿನ ಕೆಲವೇ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಮುಟ್ಟುವಲ್ಲಿ ಯಾವುದೇ ಅನುಮಾನವಿಲ್ಲ. ಕೋವಿಡ್ ನಂತರ ವಿಶ್ವದಲ್ಲೇ ಅತಿ ಹೆಚ್ಚು ಶೇ.7.2 ಜಿಡಿಪಿ ಹೊಂದಿರುವ ಏಕೈಕ ರಾಷ್ಟ್ರ ನಮ್ಮದು. ಉಳಿದೆಲ್ಲಾ ರಾಷ್ಟ್ರಗಳು ಶೇ.4ಕ್ಕಿಂತ ಕಡಿಮೆ ಜಿಡಿಪಿ ಹೊಂದಿವೆ ಎಂದು ನುಡಿದರು.