ಬೀದರ್ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿಸುವಲ್ಲಿ ಹರಸಾಹಸಪಡುತ್ತಿರುವ ಬಿಜೆಪಿ ಪಾಳಯ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಸಮಾವೇಶಕ್ಕೆ ಮುಂದಾಗುವ ಮೂಲಕ ಮತದಾರರ ಮನ ಸೆಳೆಯುವತ್ತ ಹೆಜ್ಜೆ ಇಟ್ಟಿದೆ.
ಬೀದರ್/ಹುಮನಾಬಾದ್ (ಏ.29): ಬೀದರ್ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿಸುವಲ್ಲಿ ಹರಸಾಹಸಪಡುತ್ತಿರುವ ಬಿಜೆಪಿ ಪಾಳಯ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಸಮಾವೇಶಕ್ಕೆ ಮುಂದಾಗುವ ಮೂಲಕ ಮತದಾರರ ಮನ ಸೆಳೆಯುವತ್ತ ಹೆಜ್ಜೆ ಇಟ್ಟಿದೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರ ಬಂಡಾಯ, ಪಕ್ಷ ನಾಯಕರಲ್ಲಿನ ಒಡಕು, ಕಾರ್ಯಕರ್ತರಲ್ಲಿ ಸೃಷ್ಟಿಯಾಗಿರುವ ಗೊಂದಲ ಅಭ್ಯರ್ಥಿಗಳನ್ನು ನಿದ್ದೆಗೆಡಿಸಿದ್ದು, ಇದೆಲ್ಲವನ್ನೂ ಮೀರಿ ಜಯದ ಬೆನ್ನೇರಿ ಸಾಗಲು ಮೋದಿ(Narendra Modi) ಪಕ್ಷದ ಪ್ರಮುಖ ಅಸ್ತ್ರವಾಗಿದ್ದಾರೆ.
undefined
ಮೋದಿ ಆಗಮನದಿಂದ ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮ ಬೀರಬಹುದೇನೋ ಆದರೆ ಸ್ಥಳೀಯವಾಗಿ ಹುಮನಾಬಾದ್ ಬಿಜೆಪಿ ಅಭ್ಯರ್ಥಿ ಡಾ. ಸಿದ್ದು ಪಾಟೀಲ್, ಬೀದರ್ ದಕ್ಷಿಣ ಕ್ಷೇತ್ರದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಪರ ಮತದಾರರ ಒಲವು ಹೆಚ್ಚಾಗಿ ಹರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಆಯ್ತು ಇದೀಗ ಪ್ರಧಾನಿಯೇ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸುಮಾರು 3ಲಕ್ಷ ಜನರನ್ನು ಸೇರಿಸುವ ಪ್ರಯತ್ನಕ್ಕೆ ಬಿಜೆಪಿ ಇಳಿದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕಾಗಿ ಬೃಹತ್ ಗಾತ್ರದ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆಯ ಸುತ್ತಲೂ ಪಕ್ಷದ ಬಾವುಟ ಸಿಂಗಾರಗೊಂಡಿದ್ದು, ಇಂದು (ಶನಿವಾರ) 11ಕ್ಕೆ ಆಗಮಿಸಿರುವ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತಿಸಲಾಗಿದೆ.
ಸುಮಾರು 20 ಎಕರೆ ಪ್ರದೇಶದಲ್ಲಿ ಸಮಾವೇಶ ಆಯೋಜಿಸಿದ್ದು, ಮಳೆಯ ಸಂಭವದ ಹಿನ್ನೆಲೆಯಲ್ಲಿ ಯಾವುದೇ ಅಡತಡೆಯಾಗದಂತೆ ವಾಟರ್ ಪ್ರೂಫ್ ಮೇಲ್ಛಾವಣೆ ನಿರ್ಮಿಸಲಾಗಿದ್ದು, ಒಂದು ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಇನ್ನೂ ಎರಡು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ವೇದಿಕೆ ಅಕ್ಕಪಕ್ಕದಲ್ಲಿಯೂ ನಿಂತು ಕಾರ್ಯಕ್ರಮ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೇಂದ್ರ ಹಾಗೂ ರಾಜ್ಯದ ಗಣ್ಯರು ಹಾಗೂ ಅಭ್ಯರ್ಥಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರ ವಾಹನ ನೀಲುಗಡೆಗೆ ವೇದಿಕೆಯಿಂದ ಅರ್ಧ ಕಿ.ಮೀ ಅಂತರದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ, ಗಣ್ಯರ ಭೋಜನಕ್ಕೆ, ಪ್ರಧಾನಿ ಮೋದಿಯ ಅಂಗ ರಕ್ಷಕರಿಗೆ ಸೇರಿದಂತೆ ಪ್ರತ್ಯೇಕ ಟೆಂಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಭದ್ರತಾ ದೃಷ್ಠಿಯಿಂದ ಮಾರ್ಗದ ಎರಡೂ ಬದಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಹುಮನಾಬಾದ್ ಪಟ್ಟಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೇಂದ್ರ ಭದ್ರತಾ ಪಡೆ ಅಧಿಕಾರಿಗಳು ಈಗಾಗಲೇ ವೇದಿಕೆ ಹತ್ತಿರ ಯಾರೂ ಅನ್ಯವ್ಯಕ್ತಿಗಳು ಬಾರದಂತೆ ಠಿಕಾಣಿ ಹೂಡಿದ್ದಾರೆ.
ಬಸ್ ಸಂಚಾರ ಮಾರ್ಗ ಬದಲು :
ಬೀದರ್ ಹಾಗೂ ಭಾಲ್ಕಿ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸಗಳು ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾರ್ಗ ಬದಲಾಯಿಸಿ, ಹುಡಗಿ, ನಂದಗಾಂವ್ ಮಾರ್ಗವಾಗಿ ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yadiyurappa), ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಕೇಂದ್ರ ಸಚಿವ ಮನ್ಸುಕ್ ಮಾಂಡವಿಯ, ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ್, ವಿಧಾನ ಪರಿಷತ್ ಸದಸ್ಯರು, ಬೀದರ್ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ಅನೇಕ ಗಣ್ಯರು ಭಾಗವಹಿಸಿದ್ದಾರೆ.