Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು

By Govindaraj S  |  First Published Nov 28, 2022, 1:30 AM IST

ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ಈಗಿನಿಂದಲೇ ಜೋರಾಗಿದೆ. ಟಿಕೆಟ್‌ಗಾಗಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಭಾರೀ ಪೈಪೋಟಿಯೇ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿದ್ದರೆ, ಮೂರರಲ್ಲಿ ಕಾಂಗ್ರೆಸ್‌ ಗೆದ್ದಿದೆ. 


ರುದ್ರಪ್ಪ ಆಸಂಗಿ

ಬೆಂಗಳೂರು (ನ.28): ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ಈಗಿನಿಂದಲೇ ಜೋರಾಗಿದೆ. ಟಿಕೆಟ್‌ಗಾಗಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಭಾರೀ ಪೈಪೋಟಿಯೇ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿದ್ದರೆ, ಮೂರರಲ್ಲಿ ಕಾಂಗ್ರೆಸ್‌ ಗೆದ್ದಿದೆ. ನಾಗಠಾಣ ಮೀಸಲು ಕ್ಷೇತ್ರ ಜೆಡಿಎಸ್‌ ಕೈಯಲ್ಲಿದೆ. ಒಂದು ಕಾಲದಲ್ಲಿ ವಿಜಯಪುರ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆ. ಆದರೆ, 2008ರಲ್ಲಿ ಬಿಜೆಪಿ ಭಾರೀ ಪೈಪೋಟಿ ನೀಡಿ ಐದು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಈ ಭದ್ರಕೋಟೆ ಭೇದಿಸಿತ್ತು. ತರುವಾಯ ನಡೆದ ಬಹುತೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಸಮಬಲದ ಪ್ರಾಬಲ್ಯ ಉಳಿಸಿಕೊಂಡು ಬಂದಿವೆ.

Tap to resize

Latest Videos

ಜೆಡಿಎಸ್‌ ಒಂದು ಅಥವಾ ಎರಡು ಸ್ಥಾನಗಳನ್ನು ಉಳಿಸಿಕೊಂಡಿದೆ. ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಸಿ.ಎಸ್‌.ನಾಡಗೌಡ (ಅಪ್ಪಾಜಿ), ಎ.ಎಸ್‌.ಪಾಟೀಲ ನಡಹಳ್ಳಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳು. ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದವರು ಬಹುಸಂಖ್ಯಾತರಿದ್ದಾರೆ. ಕುರುಬ, ದಲಿತ, ಅಲ್ಪಸಂಖ್ಯಾತರ ಮತಗಳೂ ಸಾಕಷ್ಟಿವೆ. ಈಚೆಗೆ ಕಾವು ಪಡೆದುಕೊಂಡಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದ್ದು, ಈ ಕುರಿತು ಮೂರೂ ಪಕ್ಷಗಳಿಗೆ ಆತಂಕ ಕಾಡುತ್ತಿದೆ.

Ticket Fight: ಘಟಾನುಘಟಿಗಳ ಪೈಪೋಟಿಗೆ ಸಜ್ಜಾಗುತ್ತಿದೆ ಮೈಸೂರು ಜಿಲ್ಲೆ

1.ವಿಜಯಪುರ ನಗರ: 1 ಸ್ಥಾನಕ್ಕೆ 20 ಕೈ ಆಕಾಂಕ್ಷಿಗಳು
ಒಂದು ಕಾಲದಲ್ಲಿ ಕಾಂಗ್ರೆಸ್‌ ಹಿಡಿತದಲ್ಲಿದ್ದ ವಿಜಯಪುರ ನಗರ ಮತ ಕ್ಷೇತ್ರ ಈಗ ಬಿಜೆಪಿ ತೆಕ್ಕೆಗೆ ಜಾರಿದೆ. ವೈಯಕ್ತಿಕ ವರ್ಚಸ್ಸು ಮತ್ತು ಹಿಂದುತ್ವದ ಅಲೆ ಮೇಲೆ ಗೆದ್ದು ಬಂದಿರುವ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಗುರುತಿಸಿಕೊಂಡಿರುವ ಅವರು ಈ ಬಾರಿಯೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ. ಇನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಅವರ ಹೆಸರೂ ಬಿಜೆಪಿಯಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ. ಕಾಂಗ್ರೆಸ್‌ನಲ್ಲಿ ಈ ಬಾರಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದು, ಅವರ ಪುತ್ರಿ ಸಂಯುಕ್ತಾ ಪಾಟೀಲ, ಕಳೆದ ಬಾರಿ ಯತ್ನಾಳ್‌ ವಿರುದ್ಧ ಅಲ್ಪಮತಗಳ ಅಂತರದಿಂದ ಸೋತಿದ್ದ ಅಬ್ದುಲ್‌ಹಮೀದ್‌ ಮುಶ್ರಿಫ್‌, ಎಸ್‌.ಎಂ.ಪಾಟೀಲ ಗಣಿಹಾರ, ಟಪಾಲ್‌ ಎಂಜಿನಿಯರ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಒಟ್ಟಾರೆ ಪಕ್ಷದಿಂದ 20 ಮಂದಿ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಲ್ಲಿ ಇನ್ನೂ ಯಾರ ಹೆಸರು ಮುಂಚೂಣಿಗೆ ಬಂದಿಲ್ಲ.

2.ಬಬಲೇಶ್ವರ: ಎಂಬಿಪಾ ಭದ್ರಕೋಟೆ ಭೇದಿಸೋದು ಕಷ್ಟ
ಬಬಲೇಶ್ವರ ಮತಕ್ಷೇತ್ರ ಲಾಗಾಯ್ತಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ. ಪಕ್ಷದ ಸಂಘಟನೆಯೂ ಇಲ್ಲಿ ಬಲಿಷ್ಠವಾಗಿದೆ. ಹಾಲಿ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ ಅವರು ಕಳೆದ ಐದು ಚುನಾವಣೆಗಳಲ್ಲಿ ಗೆದ್ದು ಬಂದವರು. ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ನ ಪ್ರಭಾವಿ ಲಿಂಗಾಯತ ಮುಖಂಡರಲ್ಲೊಬ್ಬರಾದ ಅವರು ಕ್ಷೇತ್ರದ ಮೇಲೆ ತಮ್ಮದೇ ಆದ ಹಿಡಿತಹೊಂದಿದ್ದಾರೆ. ಪಕ್ಷದಲ್ಲಿ ಅವರೊಬ್ಬರೇ ಟಿಕೆಟ್‌ ಆಕಾಂಕ್ಷಿ. ಬಿಜೆಪಿಯಲ್ಲಿ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಪ್ರಬಲ ಆಕಾಂಕ್ಷಿ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಅವರು ಈ ಬಾರಿಯೂ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಅವರ ಹೆಸರೂ ಟಿಕೆಟ್‌ಗಾಗಿ ಕೇಳಿ ಬರುತ್ತಿದೆ. ಜೆಡಿಎಸ್‌ನಲ್ಲಿ ಬಸವರಾಜ ಹೊನವಾಡ ಹೆಸರು ಕೇಳಿ ಬರುತ್ತಿದೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಕ್ಷೇತ್ರದಲ್ಲಿ ಕುರುಬರದ್ದೇ ಪ್ರಾಬಲ್ಯ, ನಂತರ ಪಂಚಮಸಾಲಿ, ಗಾಣಿಗರು, ಮುಸ್ಲಿಮರು, ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಭ್ಯರ್ಥಿಗಳ ಗೆಲುವಿಗೆ ಇಲ್ಲಿ ಕುರುಬರ ಮತಗಳೇ ನಿರ್ಣಾಯಕ.

3.ಬಸವನಬಾಗೇವಾಡಿ: ಶಿವಾನಂದ ಸ್ಪರ್ಧಿಸ್ತಾರಾ ಇಲ್ವಾ?
ಬಸವನಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಸಮಬಲದ ಪೈಪೋಟಿ ಇದೆ. ಕಳೆದ ಬಾರಿ ಶಿವಾನಂದ ಪಾಟೀಲ ಗೆದ್ದಿದ್ದು, ಈ ಬಾರಿಯೂ ಕಾಂಗ್ರೆಸ್‌ ಅವರಿಗೇ ಟಿಕೆಟ್‌ ನೀಡುವ ನಿರೀಕ್ಷೆ ಇದೆ. ಆದರೆ ಶಿವಾನಂದ ಪಾಟೀಲ ಅವರು ವಿಜಯಪುರ ನಗರ ಮತ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಲ್ಪಮತಗಳಿಂದ ಸೋತು ಈ ಬಾರಿ ಬಿಜೆಪಿ ಸೇರಿರುವ ಸೋಮನಗೌಡ ಪಾಟೀಲ ಮನಗೂಳಿ ಅವರ ಹೆಸರುಗಳು ಕೇಳಿಬರುತ್ತಿವೆ. ಎಸ್‌.ಕೆ.ಬೆಳ್ಳುಬ್ಬಿ ಎರಡು ಬಾರಿ ಗೆದ್ದು ಶಾಸಕರಾಗಿದ್ದವರು. ಜೆಡಿಎಸ್‌ ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸ್ಪಷ್ಟಚಿತ್ರಣ ಇನ್ನೂ ಸಿಕ್ಕಿಲ್ಲ.

4.ಮುದ್ದೇಬಿಹಾಳ: ಕಾಂಗ್ರೆಸ್‌-ಬಿಜೆಪಿ ಮಧ್ಯೆ ತೀವ್ರ ಪೈಪೋಟಿ
ಈ ಬಾರಿ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಕ್ಷೇತ್ರ ಇದು. ಈ ಹಿಂದೆ ದೇವರಹಿಪ್ಪರಗಿ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಬಳಿಕ ಬಿಜೆಪಿ ಸೇರಿದ್ದ ಎ.ಎಸ್‌.ಪಾಟೀಲ ನಡಹಳ್ಳಿ ಕ್ಷೇತ್ರದ ಹಾಲಿ ಶಾಸಕ. ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರನ್ನು ಪರಾಭವಗೊಳಿಸಿದ್ದ ನಡಹಳ್ಳಿ, ಈ ಬಾರಿಯೂ ಟಿಕೆಟ್‌ ಆಕಾಂಕ್ಷಿ. ಇವರ ಜತೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಅವರ ಹೆಸರೂ ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಮಧ್ಯೆ ಸಮಬಲದ ಸ್ಪರ್ಧೆ ಇದೆ. ಕಾಂಗ್ರೆಸ್‌ ಪಕ್ಷದಲ್ಲಿ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರು ಮತ್ತೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರೆ, ಮಲ್ಲಿಕಾರ್ಜುನ ಮದರಿ, ನಿವೃತ್ತ ಡಿಎಸ್ಪಿ ಎಸ್‌.ಎಸ್‌.ಹುಲ್ಲೂರ ಹೆಸರೂ ಮಂಚೂಣಿಯಲ್ಲಿದೆ. ಜೆಡಿಎಸ್‌ ಪಕ್ಷದಲ್ಲಿ ಸಿ.ಎಸ್‌.ಸೊಲ್ಲಾಪುರ, ಮಂಗಳಾದೇವಿ ಬಿರಾದಾರ, ಶಾಂತಗೌಡ ಪಾಟೀಲ, ಸಿ.ಬಿ.ಅಸ್ಕಿ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ.

5.ದೇವರಹಿಪ್ಪರಗಿ: ಪಂಚಮಸಾಲಿಗರೇ ಇಲ್ಲಿ ನಿರ್ಣಾಯಕರು
ಕಾಂಗ್ರೆಸ್‌ ಗಟ್ಟಿನೆಲೆ ಹೊಂದಿದ್ದ ಈ ಕ್ಷೇತ್ರದಲ್ಲಿ ಕಳೆದ ಬಾರಿ ಸೋಮನಗೌಡ ಪಾಟೀಲ ಸಾಸನೂರ ಕಮಲ ಅರಳಿಸಿದ್ದರು. ಆ ಬಳಿಕ ಕ್ಷೇತ್ರದಲ್ಲೀಗ ಬಿಜೆಪಿಯ ಸಂಘಟನೆಯೂ ಬಲಿಷ್ಠವಾಗಿದೆ. ಮುಂಬರುವ ಚುನಾವಣೆಯಲ್ಲಿ ಹಾಲಿ ಶಾಸಕ ಸೋಮನಗೌಡರ ಅವರೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಬಿ.ಎಸ್‌.ಪಾಟೀಲ ಯಾಳಗಿ, ಡಾ.ಪ್ರಭುಗೌಡ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ನ್ಯಾಯವಾದಿ ಸುಭಾಸ್‌ ಛಾಯಾಗೋಳ, ಆನಂದಗೌಡ ದೊಡಮನಿ ಮುಂತಾದವರು ಹೆಸರು ಕೇಳಿಬರುತ್ತಿವೆ. ಜೆಡಿಎಸ್‌ನಲ್ಲಿ ರಾಜುಗೌಡ ಪಾಟೀಲ ಅವರ ಏಕೈಕ ಹೆಸರು ಚಾಲ್ತಿಯಲ್ಲಿದೆ. ರಡ್ಡಿ, ಪಂಚಮಸಾಲಿ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕುರುಬರು, ಪರಿಶಿಷ್ಟರು ಹಾಗೂ ಮುಸ್ಲಿಂ ಸಮುದಾಯದವರೂ ಹೆಚ್ಚಿನ ಸಂಖ್ಯೆಲ್ಲಿದ್ದಾರೆ. ಬಹುತೇಕ ರಡ್ಡಿ ಮತ್ತು ಪಂಚಮಸಾಲಿಗರು ಯಾರನ್ನು ಕೈಹಿಡಿಯುತ್ತಾರೆಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ.

6.ಸಿಂದಗಿ: ಮತ್ತೆ ಭೂಸನೂರ-ಮನಗೂಳಿ ಜಿದ್ದಾಜಿದ್ದಿ
ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಂ.ಸಿ.ಮನಗೂಳಿ ಆಯ್ಕೆಯಾಗಿದ್ದರು. ಆದರೆ ಅವರ ಅಕಾಲಿಕ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್‌ ಸೇರಿ ಕಣಕ್ಕಿಳಿದಿದ್ದರು. ಆದರೆ, ಬಿಜೆಪಿಯ ರಮೇಶ ಭೂಸನೂರ ವಿರುದ್ಧ ಸೋತಿದ್ದರು. ಬಿಜೆಪಿಯಲ್ಲೀಗ ಹಾಲಿ ಶಾಸಕ ರಮೇಶ ಭೂಸನೂರ, ಶಂಭುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ ಸೇರಿ 6 ಹೆಸರುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಲ್ಲಿ ಅಶೋಕ ಮನಗೂಳಿ ಅವರ ಹೆಸರು ಪ್ರಬಲವಾಗಿದೆ. ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಅಶೋಕ ಶಾಬಾದಿ ಸೇರಿ ಮತ್ತೆ ನಾಲ್ಕು ಹೆಸರೂ ಕೇಳಿಬರುತ್ತಿವೆ. ಜೆಡಿಎಸ್‌ನಲ್ಲಿ ಶಿವಾನಂದ ಪಾಟೀಲ ಸೋಮಜಾಳ ಅವರು ಆಕಾಂಕ್ಷಿ.

7.ಇಂಡಿ: ಯಶವಂತರಾಯ-ಹಂಜಗಿ ನಡುವೆ ಸ್ಪರ್ಧೆ?
ಕಳೆದ ಬಾರಿ ಜೆಡಿಎಸ್‌ನ ಬಿ.ಡಿ.ಪಾಟೀಲರನ್ನು ಮಣಿಸಿ ಗೆದ್ದಿದ್ದ ಯಶವಂತರಾಯಗೌಡ ಪಾಟೀಲ ಅವರೇ ಕಾಂಗ್ರೆಸ್‌ನಿಂದ ಮತ್ತೆ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ. ಬೇರಿನ್ಯಾವ ಆಕಾಂಕ್ಷಿಗಳೂ ಪಕ್ಷದಲ್ಲಿ ಸ್ಪರ್ಧೆಗೆ ಆಸಕ್ತಿ ತೋರಿಸಿಲ್ಲ. ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಪ್ರಾಬಲ್ಯವಿದೆ. ಜೆಡಿಎಸ್‌ ಕೂಡ ಬಲಿಷ್ಠವಾಗಿದ್ದರೂ ಇತ್ತೀಚೆಗೆ ಬಿಜೆಪಿ ತನ್ನ ಸಂಘಟನೆ ಬಲಪಡಿಸಿಕೊಂಡಿದೆ. ಬಿಜೆಪಿಯಲ್ಲಿ ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ರವಿಕಾಂತ ಪಾಟೀಲ ಸೇರಿ 6 ಮಂದಿ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್‌ನಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದ ಬಿ.ಡಿ.ಪಾಟೀಲ ಹಂಜಗಿ ಮತ್ತೆ ಕಣಕ್ಕಿಳಿಯಬಹುದು. ಈ ಕ್ಷೇತ್ರದಲ್ಲೂ ಕುರುಬರ ಪ್ರಾಬಲ್ಯವಿದೆ. ನಂತರದ ಸ್ಥಾನದಲ್ಲಿ ಲಿಂಗಾಯತರಿದ್ದಾರೆ.

Ticket Fight: ಖರ್ಗೆ ತವರು ಕಲಬುರಗಿಯಲ್ಲಿ ಈ ಬಾರಿ ಕೈ- ಕಮಲ ಜಂಗಿ ಕುಸ್ತಿ

8.ನಾಗಠಾಣ: ತ್ರಿಕೋಣ ಸ್ಪರ್ಧೆಯ ಕ್ಷೇತ್ರ
ನಾಗಠಾಣ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯದ ನಡುವೆಯೂ ಕಳೆದ ಬಾರಿ ಜೆಡಿಎಸ್‌ನ ದೇವಾನಂದ ಚವ್ಹಾಣ ಗೆದ್ದು ಬೀಗಿದ್ದರು. ಈ ಬಾರಿಯೂ ಜೆಡಿಎಸ್‌ನಿಂದ ಅವರೇ ಕಣಕ್ಕಿಳಿಯುವ ನಿರೀಕ್ಷೆ ಇದೆ. ವರಿಷ್ಠರು ಕೂಡ ದೇವಾನಂದರತ್ತಲೇ ಒಲವು ತೋರಿದ್ದಾರೆ. ಬಿಜೆಪಿಯಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಡಾ.ಗೋಪಾಲ ಕಾರಜೋಳ ಕಳೆದ ಬಾರಿ ಸೋಲುಂಡಿದ್ದರಿಂದ ಅವರ ಹೆಸರು ಮುಂಚೂಣಿಯಲ್ಲಿದೆ. ಹೆಚ್ಚು ಕಡಿಮೆ ಅವರಿಗೇ ಟಿಕೆಟ್‌ ಫೈನಲ್‌ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಡಾ.ಗೋಪಾಲ ಅವರಿಗೆ ಟಿಕೆಟ್‌ ಸಿಗದಿದ್ದರೆ ಅವರ ಸಹೋದರ ಉಮೇಶ್‌ ಕಾರಜೋಳ ಅವರ ಹೆಸರೂ ಪರಿಶೀಲನೆಯಲ್ಲಿದೆ. ಹಾಗಾಗಿ ಬಿಜೆಪಿಯಲ್ಲಿ ಬೇರೆ ಟಿಕೆಟ್‌ ಆಕಾಂಕ್ಷಿಗಳು ಇಲ್ಲ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕರಾದ ರಾಜು ಆಲಗೂರ, ವಿಠಲ ಕಟಕದೊಂಡ ಸ್ಪರ್ಧೆಯಲ್ಲಿದ್ದಾರೆ. ನಾಗಠಾಣ ಮತಕ್ಷೇತ್ರದಲ್ಲಿ ಗಾಣಿಗ, ಪಂಚಮಸಾಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

click me!