
ಜಮಖಂಡಿ (ಫೆ.27): ರಾಜ್ಯದಲ್ಲಿ ಬಿಜೆಪಿ ಶುದ್ಧಿಕರಣಕಾಲ ಸನ್ನಿಹಿತವಾಗಿದೆ. ಪಕ್ಷ ಶುದ್ಧಗೊಳಿಸಲಾಗುತ್ತದೆ. ಎಲ್ಲರಿಗೂ ಬುದ್ಧಿ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು. ನಿರೀಕ್ಷಣಾ ಮಂದಿರ ರಮಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಸಮಸ್ಯೆ ಏನು ಎಂಬುದನ್ನು ಹೈಕಮಾಂಡ್ ಚೆನ್ನಾಗಿ ಅರ್ಥ ಮಾಡಿಕೊಂಡಿದೆ, ಇನ್ನು ಕೆಲವೇ ದಿನಗಳಲ್ಲಿ ಪಕ್ಷದ ವರಿಷ್ಟರು ದಿಟ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯ ಬಣ ಬಡಿದಾಟದಿಂದ ಪಕ್ಷಕಟ್ಟಿದ ಎಲ್ಲ ಹಿರಿಯರಿಗೆ ನೋವಾಗಿದೆ.
ಇದರಿಂದಲೇ ನಾನು ಪಕ್ಷ ಬಿಟ್ಟು ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ, ವಂಶಪರಂಪರೆ ಆಡಳಿತ ಇರಬಾರದು. ಆದರೆ, ಅದನ್ನೇ ಮುಂದುವರಿಸಲಾಗುತ್ತಿದೆ. ಇದರಿಂದ ಅನೇಕರಿಗೆ ನೋವಾಗಿದೆ. ಪಕ್ಷ ಹಿಂದುತ್ವ ಉಳಿಯಬೇಕು ಎಂದು ಹೋರಾಟ ಮಾಡುತ್ತ ಬಂದಿದೆ. ಆದರೆ, ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದ್ದು, ಅದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಹೇಳಿದರು. ಪಕ್ಷಕ್ಕಾಗಿ ದುಡಿದ ಹಲವು ಹಿರಿಯ ಮುಖಂಡರು ರಾಜ್ಯದಲ್ಲಿನ ಬಿಜೆಪಿ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಬಣಗಳ ಗೊಂದಲ ಸೇರಿದಂತೆ ಎಲ್ಲದಕ್ಕೂ ಹೈಕಮಾಂಡ್ ತಾರ್ಕಿಕ ಅಂತ್ಯ ಹಾಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ವಿವಿ ರದ್ದು ಕೈಬಿಡಿ: ರಾಜ್ಯದ 9 ವಿಶ್ವವಿದ್ಯಾಲಯ ರದ್ದುಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ವಿವಿಗಳಿಗೆ ಬೇಕಾದ ಅನುದಾನ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಅವೈಜ್ಞಾನಿಕ ಕ್ರಮ ಕೈಗೊಳ್ಳಬಾರದು. ಬದಲಿಗೆ ತಜ್ಞರಿಂದ ತನಿಖೆ ನಡೆಸಿ ವರದಿ ತರಿಸಿಕೊಂಡು ಕ್ರಮ ಜರುಗಿಸಬೇಕು, ಬಡ ಮಕ್ಕಳ ಶಿಕ್ಷಣದ ಹಕ್ಕು ಕಸಿಯುವ ಕೆಲಸ ಮಾಡಬಾರದು ಎಂದರು. ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಸುಳ್ಳು ಭರವಸೆ ನೀಡುವುದನ್ನು ಕೈಬಿಡಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಈಶ್ವರಪ್ಪ, ಗ್ಯಾರಂಟಿ ಯೋಜನೆಗಳು ಶಕ್ತಿ ಕಳೆದುಕೊಂಡಿವೆ. ಕೊಟ್ಟ ಮಾತಿನಂತೆ ನಡೆದುಕೊಂಡು, ಮಹಿಳೆಯರ ಸ್ತ್ರೀಶಕ್ತಿ ಯೋಜನೆಯ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಸ್ ದಾಳಿ ತಡೆಗೆ ಕ್ರಮ ಕೈಗೊಳ್ಳಿ: ಹಿರಿಯ ಅಧಿಕಾರಿಗಳಿಗೆ ಸಿಎಂ ಸಿದ್ದು ಸೂಚನೆ
ಕಾಂಗ್ರೆಸ್ ಸರ್ಕಾರ ಜನರ ವಿಶ್ವಸ ಕಳೆದುಕೊಂಡಿದೆ. ಅವರಲ್ಲಿಯೂ ಆಂತರಿಕ ಹಲಹ ನಡೆದಿದ್ದು, ಬೂದಿಮುಚ್ಚಿದ ಕೆಂಡದಂತಿದೆ. ಸಚಿವರು ಶಾಸಕರು ಮನಬಂದಂತೆ ಹೇಳಿಕೆ ನೀಡುತ್ತ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ದೂರಿದರು. ಕ್ರಾಂತಿವೀರ ಬ್ರಿಗೇಡ್‌ನ ಮುಖಂಡರ ಸಭೆ ಮಾ.1ರಂದು ಹುಬ್ಬಳ್ಳಿಯ ಕಾಮತ್ ಯಾತ್ರಿ ನಿವಾಸದಲ್ಲಿ ನಡೆಯಲಿದೆ. ಸಭೆಗೆ ಆಯ್ದ ಮಠಾಧಿಪತಿಗಳು, ಬ್ರಿಗೇಡ್‌ನ ಮುಖಂಡರು ಭಾಗವಹಿಸಲಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳ ಲಾಗುತ್ತದೆ ಎಂದು ಹೇಳಿದರು. ಮಾದುಲಿಂಗ ಮಹಾರಾಜರು, ಮುಖಂಡರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.