Mysuru: ಕೆಲಸ ಕಾರ್ಯಕ್ಕೆ ಶಾಸಕರ ಕಚೇರಿಗೆ ಅಲೆಯಬೇಕಿಲ್ಲ: ಶಾಸಕ ಟಿ.ಎಸ್‌. ಶ್ರೀವತ್ಸ

Published : May 20, 2023, 10:03 PM IST
Mysuru: ಕೆಲಸ ಕಾರ್ಯಕ್ಕೆ ಶಾಸಕರ ಕಚೇರಿಗೆ ಅಲೆಯಬೇಕಿಲ್ಲ: ಶಾಸಕ ಟಿ.ಎಸ್‌. ಶ್ರೀವತ್ಸ

ಸಾರಾಂಶ

ಕೆ.ಆರ್‌. ಕ್ಷೇತ್ರದ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಬೂತ್‌ ಅಧ್ಯಕ್ಷರ ಮನೆಯಲ್ಲಿಯೇ ಸಲಹಾ ಪೆಟ್ಟಿಗೆ ಸ್ಥಾಪಿಸಲಾಗುವುದು ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಹೇಳಿದರು. 

ಮೈಸೂರು (ಮೇ.20): ಕೆ.ಆರ್‌. ಕ್ಷೇತ್ರದ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಬೂತ್‌ ಅಧ್ಯಕ್ಷರ ಮನೆಯಲ್ಲಿಯೇ ಸಲಹಾ ಪೆಟ್ಟಿಗೆ ಸ್ಥಾಪಿಸಲಾಗುವುದು ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಹೇಳಿದರು. ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಹಿತೈಷಿಗಳ ಕೃತಜ್ಞತಾ ಸಮಾವೇಶದಲ್ಲಿ ಅವರು ಕಾರ್ಯಕರ್ತರಿಗೆ ಪುಷ್ಪವೃಷ್ಟಿಗರೆದು ಮಾತನಾಡಿದರು. ಕ್ಷೇತ್ರದ 19 ವಾರ್ಡ್‌ನ 265 ಬೂತ್‌ ಅಧ್ಯಕ್ಷರ ಮನೆಯಲ್ಲಿ ಈ ಸಲಹಾ ಪೆಟ್ಟಿಗೆಯನ್ನು ಕೆಲವೇ ದಿನಗಳಲ್ಲಿ ಅಳವಡಿಸಲಾಗುವುದು. ಇಲ್ಲಿಗೆ ಸಾರ್ವಜನಿಕರು ದೂರು ನೀಡಿದರೆ ಅಥವಾ ಸಲಹೆ ನೀಡಿದರೆ ಅದನ್ನು ಪರಿಶೀಲಿಸಿ ಕೂಡಲೇ ಕಾರ್ಯಗತಗೊಳಿಸಲಾಗುವುದು. ಆ ಮೂಲಕ ಬೂತ್‌ ಮಟ್ಟದ ಕಾರ್ಯಕರ್ತರು ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯ ವೃದ್ಧಿಯೂ ಆಗುತ್ತದೆ ಎಂದರು.

19 ವಾರ್ಡ್‌ ಅಧ್ಯಕ್ಷರು ಇದನ್ನು ನಿರ್ವಹಿಸಲಿದ್ದು, ನೇರವಾಗಿ ನನ್ನ ಸಂಪರ್ಕಕ್ಕೆ ಬಂದು ಕೆಲಸ ಮಾಡಿಸಿಕೊಳ್ಳಬಹುದು. ಸದ್ಯದಲ್ಲಿಯೇ ಆಪ್ತ ಸಹಾಯಕರು, ಆಪ್ತ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುತ್ತಿದ್ದು, ಕಚೇರಿಯಲ್ಲಿಯೂ ಸಾರ್ವಜನಿಕರು ಸಂಪರ್ಕಿಸಬಹುದು. ಒಂದು ವೇಳೆ ಅವರು ತಮ್ಮೊಡನೆ ಸರಿಯಾಗಿ ವರ್ತಿಸದಿದ್ದರೆ ನನಗೆ ನೇರವಾಗಿ ದೂರು ನೀಡಿ ಎಂದು ಅವರು ಹೇಳಿದರು. ನಾಲ್ಕೈದು ತಿಂಗಳಲ್ಲಿ ಜೆ.ಪಿ. ನಗರವನ್ನು ಕಸಮುಕ್ತ ನಗರನ್ನಾಗಿ ಮಾಡಲಾಗುವುದು. ಕಸ ತೆರವುಗೊಳಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರ ಟೆಂಡರ್‌ ಕರೆದು ಹಲವು ವರ್ಷಗಳಿಂದ ನಾಗರಿಕರು ಅನುಭವಿಸುತ್ತಿರುವ ನರಕಯಾತನೆಯನ್ನು ನಿವಾರಿಸುತ್ತೇನೆ ಎಂದು ಅವರು ತಿಳಿಸಿದರು.

ಚುನಾವಣೆಯಲ್ಲಿ ಸೋಲು ಮತ್ತು ಗೆಲುವುಗಳು ಸಹಜ: ಮಾಜಿ ಸಚಿವ ನಾರಾಯಣಗೌಡ

ರಸ್ತೆ ಡಾಂಬರೀಕರಣ ಸಂಬಂಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ವಿವೇಕಾನಂದನಗರದಿಂದ ಭ್ರಮಾರಂಬ ಛತ್ರದವರೆಗೆ ತ್ವರಿತಗತಿಯಲ್ಲಿ ಡಾಂಬರೀಕರಣ ಮಾಡುವಂತೆ ಸೂಚಿಸಿದ್ದೇನೆ. ಶಾಂತಿಸಾಗರ ಬಳಿಯಿಂದ ಕುವೆಂಪುನಗರ ಬಸ್‌ ಡಿಪೋವರೆಗೆ ರಸ್ತೆ ಸರಿಪಡಿಸಬೇಕಿದೆ. ಎಲ್ಲ ಸಾರ್ವಜನಿಕ ಕೆಲಸಗಳು ವೇಗ ಪಡೆದುಕೊಳ್ಳಲಿವೆ ಎಂದು ಅವರು ಭರವಸೆ ನೀಡಿದರು. ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿರಲಿಲ್ಲ. ಕ್ಷೇತ್ರದ ಕಾರ್ಯಕರ್ತರು ನನ್ನ ಹೆಸರು ಸೂಚಿಸಿದ್ದರಿಂದ ಟಿಕೆಟ್‌ ದೊರೆಯಿತು. ಹಗಲು ರಾತ್ರಿ ನನ್ನ ಪರವಾಗಿ ಕೆಲಸ ಮಾಡಿದರು. ಕಾಂಗ್ರೆಸ್‌ ಪರವಾದ ಅಲೆಯಲ್ಲೂ ನನ್ನ ಗೆಲ್ಲಿಸಿದರು. ಇದರ ಸಂಪೂರ್ಣ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಅವರು ಹೇಳಿದರು.

ಷಡ್ಯಂತ್ರ ನಡೆಸಿದರು: ಆದರೂ ಚುನಾವಣೆ ವೇಳೆ ನನ್ನ ವಿರುದ್ಧ ಕುತಂತ್ರ ನಡೆಯಿತು. ವಿಡಿಯೋ ಹರಿಯಬಿಡಲಾಯಿತು. 40 ಸಾವಿರ ಮನೆಗಳಿಗೆ ಪತ್ರ ಕಳುಹಿಸಲಾಯಿತು. ಅದರಲ್ಲಿ ಯಾವ ಬಂಡವಾಳವೂ ಇರಲಿಲ್ಲ. ಆ ಪತ್ರವನ್ನು ನಮ್ಮ ಜನ ಹರಿದು ಎಸೆದರು. ನನ್ನನ್ನು ಗೆಲ್ಲಿಸಿದರು ಎಂದರು. ಪಾದಯಾತ್ರೆ ಮಾಡಬೇಕಾದರೆ ಕೃಷ್ಣಮೂರ್ತಿಪುರಂನಲ್ಲಿ ವಯೋವೃದ್ಧರೊಬ್ಬರು ವೀಳ್ಯದಲೆ ಜತೆ . 500 ಕೊಟ್ಟು ಆರ್ಶಿವಾದ ಮಾಡಿದರು. ಜಯನಗರದಲ್ಲಿ ವ್ಯಕ್ತಿಯೊಬ್ಬರು . 1500 ನೀಡಿದರು. ಸಿದ್ಧಾರ್ಥ ಬಡಾವಣೆಯಲ್ಲಿ ಪ್ರಿಂಟಿಂಗ್‌ ಪ್ರೆಸ್‌ ಕೂಲಿ ಕಾರ್ಮಿಕ . 500 ಕೊಟ್ಟರು. ಹೀಗೆ ನೂರಾರು ಕಾರ್ಯಕರ್ತರು ಧನ ಸಹಾಯ ಮಾಡಿದರು. ನನ್ನ ಗೆಲುವಿಗೆ ಸಿಮೆಂಟ್‌ ಸುರೇಶ್‌ ನಂಜನಗೂಡಿಗೆ ಮುಡಿ ಕೊಟ್ಟರು. ನನಗೆ ದೊರಕಿದ್ದ 4ನೇ ಸಂಖ್ಯೆ ಸರಿ ಇಲ್ಲ ಎಂದು 78 ವರ್ಷದ ವೃದ್ಧರು ಒಂದು ವಾರ ಸುಂದರಕಾಂಡ ಪಠಿಸಿ, ಉಪವಾಸವಿದ್ದು ನನ್ನನ್ನು ಕರೆದು ಪ್ರಸಾದ ನೀಡಿದ್ದಾರೆ ಎಂದು ಎಲ್ಲರನ್ನೂ ಸ್ಮರಿಸಿದರು.

ಕೆ.ಆರ್‌.ಕ್ಷೇತ್ರದ ಪ್ರಭಾರಿ ವೀರೇಂದ್ರ ಶಾ ಮಾತನಾಡಿ, ಕೆ.ಆರ್‌.ಕ್ಷೇತ್ರದ ಮತದಾರರು ಉಚಿತ ಘೋಷಣೆಗಳಿಗೆ ಮರುಳಾಗದೇ ರಾಷ್ಟ್ರೀಯ ಉದ್ದೇಶಕ್ಕೆ ಮತ ನೀಡಿರುವುದಕ್ಕೆ ಕೃತಜ್ಞರಾಗಿದ್ದೇವೆ ಎಂದರು. ವಿಧಾನ ಪರಿಷತ್‌ ಸದಸ್ಯ ಕೇಶವಪ್ರಸಾದ್‌, ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಕೆ.ಆರ್‌. ಮಂಡಲದ ಅಧ್ಯಕ್ಷ ವಡಿವೇಲು, ವಿಧಾನ ಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪಾ, ನಿಗಮ ಮಂಡಲಿ ಮಾಜಿ ಅಧ್ಯಕ್ಷರಾದ ರಘು ಕೌಟಿಲ್ಯ, ಯಶಸ್ವಿ ಸೋಮಶೇಖರ್‌, ಶಿವಕುಮಾರ್‌, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್‌, ಮೈಸೂರು ನಗರ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್‌, ಬಿ. ನಿರಂಜನ್‌ ಇದ್ದರು.

ಮೌಢ್ಯ ತೊರೆದು ಚಾಮರಾಜನಗರ ಜಿಲ್ಲೆ ಉದ್ಘಾಟಿಸಿದ್ದ ಸಿದ್ದರಾಮಯ್ಯ

ಜವಾಬ್ದಾರಿಯಿಂದ ಕೆಲಸ ಮಾಡೋಣ: ಮಾಜಿ ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಈ ಫಲಿತಾಂಶ ನಮ್ಮೆಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಎಚ್ಚರಿಕೆ ನೀಡಿದೆ. ನಗರ ಪಾಲಿಕೆಯ ಚುನಾವಣೆಯಲ್ಲಿ 19 ವಾರ್ಡ್‌ಗಳಲ್ಲೂ ಜಯ ಸಾಧಿಸುವ ಗುರಿ ಹೊಂದಬೇಕಿದೆ ಎಂದು ಹೇಳಿದರು. ಕೆ.ಆರ್‌.ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ನಾವು ಮಾಡಿದ ಕಾರ್ಯಕ್ರಮಗಳು ಕಾರಣ. ಬೂತ್‌ ಸಶಕ್ತಿಕರಣ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. 70 ಸಾವಿರ ಮನೆಗಳಿಗೆ ರಾಜ್ಯ, ಕೇಂದ್ರ ಸರ್ಕಾರಗಳ ಒಂದಲ್ಲ ಒಂದು ಕಾರ್ಯಕ್ರಮ ತಲುಪಿಸಲಾಯಿತು ಎಂದರು. ಕ್ಷೇತ್ರದ ಪೂರ್ಣ ರಸ್ತೆ ಡಾಂಬರೀಕಣ ಆಗಿದೆ. 8 ಸಾವಿರ ಜನರಿಗೆ ಮನೆ ನೀಡಲಾಯಿತು. . 18 ಕೋಟಿ ವೆಚ್ಚದಲ್ಲಿ ಉದ್ಯಾನಗಳ ಅಭಿವೃದ್ಧಿ, ಅಲ್ಪಸ್ವಲ್ಪ ಕೆಲಸ ಉಳಿದಿದೆ. ಅಧಿಕಾರದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಸವಾಲಿನ ನಡುವೆ ನೂತನ ಶಾಸಕರು ಕೆಲಸ ಮಾಡಬೇಕಿದೆ ಎಂದು ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ