ಕಾಂಗ್ರೆಸ್‌ನಿಂದ ಜನರಿಗೆ ಯಾವುದೇ ಯೋಜನೆ ಕೊಡುವ ಗ್ಯಾರಂಟಿ ಇಲ್ಲದಿದ್ದರೂ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಗೇಲಿ ಮಾಡಿದರು.
ಚಿತ್ರದುರ್ಗ (ಫೆ.26): ಕಾಂಗ್ರೆಸ್‌ನಿಂದ ಜನರಿಗೆ ಯಾವುದೇ ಯೋಜನೆ ಕೊಡುವ ಗ್ಯಾರಂಟಿ ಇಲ್ಲದಿದ್ದರೂ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಗೇಲಿ ಮಾಡಿದರು. ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಕ್ಕಟೆ ಕಾರ್ಡ್ ಬಿಡುಗಡೆ ಮಾಡುವುದು ದೊಡ್ಡ ವಿಷಯವಲ್ಲ, ಆದರೆ ನುಡಿದಂತೆ ನಡೆಯಬೇಕಲ್ಲವೆ ? ಎಂದು ಪ್ರಶ್ನಿಸಿದರು. ಆಡದೆ ಕೊಡುವವನು ಉತ್ತಮ, ಆಡಿ ಕೊಡುವವ ಮಧ್ಯಮ, ಆಡಿಯೂ ಕೊಡದವ ಅಧಮನೆಂದು ವಚನದ ಮೂಲಕವೇ ಟಾಂಗ್ ನೀಡಿದ ಅವರು, ಕಾಂಗ್ರೆಸ್ ಪಕ್ಷದವರು ಅಧಮರಾಗುವುದು ಗ್ಯಾರಂಟಿ ಎಂದರು. ಇನ್ನು, ಕೆಲ ಮಠಾಧೀಶರು ಕಾಂಗ್ರೆಸ್ ಪರ ಒಲವು ತೋರಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂಥ ಸ್ವಾಮೀಜಿಗಳೇ ಕಾಂಗ್ರೆಸ್‌ನಿಂದ ಚುನಾವಣೆಗೆ ನಿಂತುಕೊಳ್ಳಲಿ. ಕಾಂಗ್ರೆಸ್ ಪರ ಬರೀ ಬ್ಯಾಟಿಂಗ್ ಏಕೆ ? ಬೌಲಿಂಗ್, ಬ್ಯಾಟಿಂಗ್ ಎರಡೂ ಮಾಡಲಿ ಎಂದರು.
ಮಾರ್ಚ್ 4 ರಂದು ಫಲಾನುಭವಿಗಳ ಸಮಾವೇಶ: ಚಿತ್ರದುರ್ಗ ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ಜನ ಮನ ಸೂರೆಗೊಳ್ಳಲು ಬಿಜೆಪಿ ಸಮಾವೇಶ ಆಯೋಜಿಸುವ ಪ್ಲಾನ್‌ಗಳ ರೂಪಿಸಿದ್ದು, ಮಾಚ್‌ರ್ 4 ರಂದು ಚಿತ್ರದುರ್ಗದಲ್ಲಿ ಫಲಾನುಭ ವಿಗಳ ಸಮಾವೇಶ ಆಯೋಜಿಸಿದೆ. ಈ ಸಂಬಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಮಾವೇಶ ನಡೆಸಿ ಫಲಾನುಭವಿಗಳ ಕರೆತರುವ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೆ ಹೊರಿಸಿದರು.
Bagalkote: ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರೋ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಚಿತ್ರದುರ್ಗ ಜಿಲ್ಲೆಯಲ್ಲಿ 5 ಲಕ್ಷ ಕುಟುಂಬಗಳಿವೆ. ಸುಮಾರು 12 ಲಕ್ಷ ಜನರು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಲಾಭ ಪಡೆದಿದ್ದಾರೆ. ಜಿಲ್ಲೆಯ ಪ್ರತಿಯೊಂದು ಕುಟುಂಬದಲ್ಲಿ 2 ರಿಂದ 3 ಜನರು ಸರ್ಕಾರದ ಯಾವುದಾದರು ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಮಾಚ್‌ರ್ 4 ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 75 ಸಾವಿರ ಫಲಾನುಭವಿಗಳ ಕರೆತರಬೇಕೆಂದು ತಾಕೀತು ಮಾಡಿದರು.
ಸರ್ಕಾರದ ಆದೇಶದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಫಲಾನುಭವಿಗಳ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ಜರುಗುವ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾಲ್ಗೊಳ್ಳುವುದು ವಿಶೇಷವಾಗಿದೆ. ಎಲ್ಲಾ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ, ಸಮಾವೇಶಕ್ಕೆ ಕರೆ ತರುವ ಹೊಣೆ ಹೊರಬೇಕು. ಈ ಮೂಲಕ ಜನರಲ್ಲಿ ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ವಂಚಿತರಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಸರ್ಕಾರ ಯೋಜನೆಗಳನ್ನ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಬೇಕು. ಫಲಾನುಭವಿಗಳಿಗೆ ಸೂಕ್ತ ಆಸನ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಲ್ಪಿಸಬೇಕು. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ: ಎಚ್.ಡಿ.ಕುಮಾರಸ್ವಾಮಿ
ಈಗಾಗಲೆ ಇಲಾಖಾವಾರು ಕರೆತರುವ ಫಲಾನುಭವಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದ್ದು, ಕನಿಷ್ಠ 75 ಸಾವಿರ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು. ಫಲಾನುಭವಿಗಳನ್ನು ಗುರುತಿಸಿ ಕರೆತರುವುದರಿಂದ ಆಯಾ ಇಲಾಖಾ ಅಧಿಕಾರಿಗಳ ಗೌರವವೂ ಹೆಚ್ಚಾಗುತ್ತದೆ. ಸಮಾವೇಶಕ್ಕೆ ಕರೆತರುವ ಫಲಾನುಭವಿಗಳ ಮೇಲ್ವಿಚಾರಣೆಗೆ ಪ್ರತಿ ತಾಲೂಕಿಗೆ ಒಬ್ಬರು ಅಧಿಕಾರಿಗಳನ್ನು ನೇಮಿಸಲಾಗುವುದು. ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರುವ ಕಾರ್ಯದಲ್ಲಿ ಅಧಿಕಾರಗಳು ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಎಚ್ಚರಿಸಿದರು.