ಕಾಫಿಯ ನಾಡಿನಲ್ಲಿ ನಾಲ್ಕು ದಿನ ಜೆಡಿಎಸ್ ಆಯೋಜನೆ ಮಾಡಿರುವ ಪಂಚರತ್ನ ರಥಯಾತ್ರೆಗೆ ಶ್ರೀ ಶಾರದಾಂಬೆಯ ಪುಣ್ಯಭೂಮಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಶೃಂಗೇರಿ (ಫೆ.26): ಕಾಫಿಯ ನಾಡಿನಲ್ಲಿ ನಾಲ್ಕು ದಿನ ಜೆಡಿಎಸ್ ಆಯೋಜನೆ ಮಾಡಿರುವ ಪಂಚರತ್ನ ರಥಯಾತ್ರೆಗೆ ಶ್ರೀ ಶಾರದಾಂಬೆಯ ಪುಣ್ಯಭೂಮಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ನಾಲ್ಕು ದಿನ 3 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಈ ಯಾತ್ರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ ಇಲ್ಲಿನ ಸಂತೆ ಮಾರುಕಟ್ಟೆ ಮುಂಭಾಗದಿಂದ ತನ್ನ ಪ್ರಯಾಣ ಬೆಳೆಸಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ರೈತರ, ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದ್ದರಿಂದ ರಾಜ್ಯದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದೆಲ್ಲೆಡೆ ಜೆಡಿಎಸ್ ಅಲೆಯಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 73 ಸಭೆಗಳನ್ನು ನಡೆಸಿದ್ದೇನೆ. ಎಲ್ಲಾ ಸಭೆಗಳಲ್ಲಿ ಉತ್ತಮ ಜನ ಬೆಂಬಲ ಕಂಡು ಬಂದಿತು. ಸಭೆ, ಸಮಾವೇಶ, ಪಂಚರತ್ನ ರಥಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿ ಅಲ್ಪಾವಧಿ ಅಧಿಕಾರದಲ್ಲಿದ್ದರೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಆದರೆ, ಅದನ್ನು ಅನುಷ್ಠಾನಕ್ಕೆ ತರಲು ನನಗೆ ಅಧಿಕಾರ ಸಿಗಲಿಲ್ಲ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ಅಧಿಕಾರ ಹಿಡಿದಲ್ಲಿ ಎಲ್ಲಾ ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತೇನೆ ಎಂದು ಹೇಳಿದರು. ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪರ ಉತ್ತಮ ಅಲೆಯಿದೆ.
Chikkamagaluru: ಜೆ.ಪಿ.ನಡ್ಡಾ ಬೆನ್ನಲ್ಲೇ ಶೃಂಗೇರಿ ಮಠಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ
ಜನರು ರಾಜ್ಯದಲ್ಲಿ ಜೆಡಿಎಸ್, ಶೃಂಗೇರಿ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಯನ್ನು ಆಶೀರ್ವಾದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಸಂಪೂರ್ಣ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಪ್ರಮುಖವಾಗಿ 5 ಯೋಜನೆಗಳಿವೆ. ಜೆಡಿಎಸ್ ರೈತರು, ಕಾರ್ಮಿಕರು, ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವ ಗುರಿ ಶಕ್ತಿ ಹೊಂದಿದೆ. ಶೃಂಗೇರಿ ಶಾರದಾಂಬೆಯ ಆಶೀರ್ವಾದ ಪಡೆದಿದ್ದೇನೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ, ಎಚ್.ಜಿ. ವೆಂಕಟೇಶ್, ಡಾ.ಅಣ್ಣಾದೊರೆ, ಟಿ.ಟಿ. ಕಳಸಪ್ಪ ಇದ್ದರು. ಸಂತೇ ಮಾರುಕಟ್ಟೆಯಿಂದ ಹೊರಟ ಪಂಚರತ್ನ ರಥಯಾತ್ರೆ ವೆಲ್‌ಕಂ ಗೇಟ್ ಮೂಲಕ ನೆಮ್ಮಾರು, ಕಿಗ್ಗಾದತ್ತ ಸಾಗಿತು. ಭಾನುವಾರ ಕೊಪ್ಪ ತಾಲೂಕಿನಲ್ಲಿ ಸಂಚರಿಸಲಿದೆ
ಅಮಿತ್ ಶಾ ವಸ್ತುಸ್ಥಿತಿ ಅರಿಯದೆ ಚರ್ಚೆ ಮಾಡುತ್ತಿದ್ದಾರೆ: ಅಮಿತ್ ಶಾ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ, ಇಲ್ಲಿಯ ವಸ್ತುಸ್ಥಿತಿ ಅರಿಯದೆ ಚರ್ಚೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಹೇಳಲು ಒಂದು ಇತಿ ಮಿತಿ ಬೇಕು. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇನೆ ಎನ್ನುತ್ತಾರೆ, ಹಾಗಾದರೆ ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರದಲ್ಲಿದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟಸರ್ಕಾರವೆಂದು ಅವರೆ ಒಪ್ಪಿಕೊಂಡಿದ್ದಾರೆ ಎಂದರು.
ಉಪ ಚುನಾವಣೆ, 17 ಶಾಸಕರ ಖರೀದಿ, ಆಪರೇಷನ್ ಕಮಲ ಇವೆಲ್ಲ ಏನು ಸೂಚಿಸುತ್ತವೆ. ಗುಜರಾತ್ ಮಾದರಿ ಎನ್ನುತ್ತಾರೆ. ಕರ್ನಾಟಕದ ಪರಿಸ್ಥಿತಿಯೇ ಬೇರೆ, ಗುಜರಾತ್, ಉತ್ತರ ಪ್ರದೇಶದ ಮಾದರಿಯೇ ಬೇರೆ ಎಂದು ಹೇಳಿದರು. ರಾಜ್ಯ ಸರ್ಕಾರ, ಕೊನೆಯ ಅವಧಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಬಜೆಟ್ ಘೋಷಿಸಿದೆ. ಇದು ಜನ ಮೆಚ್ಚುಗೆಯ ಬಜೆಟ್ ಅಲ್ಲ, ಕೇವಲ ಚುನಾವಣಾ ಸಮಯದ ಬಜೆಟ್ ಎಂದು ಆರೋಪಿಸಿದರು. ಸದ್ಯದಲ್ಲಿ ಸರ್ಕಾರದ ಅವಧಿ ಮುಗಿಯಲಿದೆ, ಬಿಜೆಪಿಗೆ ಹಿನ್ನೆಡೆಯಾದರೆ ಘೋಷಿಸಿರುವ ಯೋಜನೆಗಳೆಲ್ಲ ವ್ಯರ್ಥ. ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿದ್ದು, ಜಾರಿಗೊಳಿಸದ ಯೋಜನೆಗಳು ಅವಧಿ ಮುಗಿಯುವ ಸಂದರ್ಭದಲ್ಲಿ ಘೋಷಿಸಿದ್ದಾರೆ ಎಂದು ಹೇಳಿದರು.
ಈ ದೇಶ 75 ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಮೋದಿ ಬಂದು ಅಭಿವೃದ್ಧಿ ಮಾಡಿದ್ದಲ್ಲ. ನೀರಾವರಿ ಯೋಜನೆಗಳು ನೆಹರು ಕಾಲದಿಂದ ಪಂಚ ವಾರ್ಷಿಕ ಯೋಜನೆಗಳ ಮೂಲಕ ಅಭಿವೃದ್ಧಿಯಾಗುತ್ತಾ ಬಂದಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಬರುವ ಅಗತ್ಯವೇನಿದೆ. ಭೂಮಿ ರೈತರದ್ದು, ಹಣ ಸರ್ಕಾರದ್ದು. ಮೋದಿ ಕೊಡುಗೆ ಏನಿಲ್ಲ. ದೇಶದಲ್ಲಿ ರಾಜ್ಯದಲ್ಲಿ ಹಳ್ಳಿಗಳ, ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಸರ್ಕಾರಗಳು ರೈತರನ್ನು, ಜನಸಾಮಾನ್ಯರನ್ನು ವಂಚಿಸುತ್ತಿವೆ ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ: ಎಚ್.ಡಿ.ಕುಮಾರಸ್ವಾಮಿ ಭವಿಷ್ಯ
ರೈತರ ಸಾಲ ಮನ್ನಾ ಹೇಗೆ ಮಾಡುವುದು ಎಂದು ತೋರಿಸಲು ಮುಖ್ಯಮಂತ್ರಿಯಾದೆ, ಅವರ ಹಿಂಸೆಯಿಂದ ಅಧಿಕಾರ ನಡೆಸಲು ಆಗಲಿಲ್ಲ. ರಾಜ್ಯದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಜೆಡಿಎಸ್ ಪರಿಹಾರ. ಜೆಡಿಎಸ್ ಬಿಜೆಪಿ, ಕಾಂಗ್ರೆಸ್ ಬಿ ಟೀಮ್ ಅಲ್ಲ. ಜನತೆಯ ಬಿ ಟೀಮ್. ಇನ್ನು ಬಿಜೆಪಿ, ಕಾಂಗ್ರೆಸ್ ಆಟ ನಡೆಯೊಲ್ಲ. ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ ಸೇರಿದಂತೆ ರೈತರ, ಜನಸಾಮಾನ್ಯರ ಎಲ್ಲಾ ಸಮಸ್ಯೆಗಳಿಗೆ ಜೆಡಿಎಸ್ ಪರಿಹಾರ ನೀಡಲಿದೆ ಎಂದು ಹೇಳಿದರು.