ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ತಿಮ್ಮಾಪೂರ

By Kannadaprabha NewsFirst Published Oct 29, 2023, 2:00 AM IST
Highlights

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುವ ಪ್ರಸ್ತಾಪವೇ ಇಲ್ಲ. ಅವರು ಶಾಸಕಾಂಗ ಪಕ್ಷದ ನಾಯಕರು. ಸಿಎಂ ಬದಲಾವಣೆಯ ಊಹಾಪೋಹ ನಿಮ್ಮಿಂದ ಕೇಳುತ್ತಿದ್ದೇವೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕರೇ ಅವರಿದ್ದಾಗ ಇಂಥ ಪ್ರಶ್ನೆಗಳಿಗೆ ಆರ್ಥವಿಲ್ಲ ಎಂದರು.

ಬಾಗಲಕೋಟೆ (ಅ.29): ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುವ ಪ್ರಸ್ತಾಪವೇ ಇಲ್ಲ. ಅವರು ಶಾಸಕಾಂಗ ಪಕ್ಷದ ನಾಯಕರು. ಸಿಎಂ ಬದಲಾವಣೆಯ ಊಹಾಪೋಹ ನಿಮ್ಮಿಂದ ಕೇಳುತ್ತಿದ್ದೇವೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕರೇ ಅವರಿದ್ದಾಗ ಇಂಥ ಪ್ರಶ್ನೆಗಳಿಗೆ ಆರ್ಥವಿಲ್ಲ ಎಂದರು.

ಸಚಿವರ ಬದಾಲಾವಣೆಯ ಕುರಿತು ಮಾತನಾಡಿ, ನಮಗೆ ಯಾವುದೇ ಖಾತೆ ಕೊಟ್ಟರೂ ಸಂತೃಪ್ತಿ ಇದೆ. ನಾನು ಅಲ್ಲಿ ಕೆಲಸ ಮಾಡಿ ತೋರಿಸುವೆ. ನಾನು ಯಾವತ್ತೂ ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ. ಕೊಟ್ಟ ಖಾತೆಯನ್ನು ಸರಿಯಾಗಿ ನಿಭಾಯಿಸಿ ಮುಖ್ಯಮಂತ್ರಿಗಳ ವಿಶ್ವಾಸ ಗಳಿಸುವೆ ಎಂದು ಹೇಳಿದರು. ಗೃಹಸಚಿವ ಜಿ.ಪರಮೇಶ್ವರ ಕರೆದ ಡಿನ್ನರ್‌ಗೆ ತಾವು ಹೋಗಿದ್ದಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ ನಾನು ಊರಿಗೆ ಬಂದೆ. ಅಲ್ಲೇನು ಅಂಥ ಮಹತ್ವದ್ದು ಇರಲಿಲ್ಲ. ಭೋಜನಕ್ಕೆ ಕರೆದಿದ್ದರು ಅಷ್ಟೇ, ಅದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ರಾಜಕೀಯ ಬಿಟ್ಟು ಅಭಿವೃದ್ಧಿ ಚಿಂತೆ ಮಾಡೋಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಅಡ್ಡದಾರಿ ಬಿಜೆಪಿಯವ್ರ ಚಾಳಿ: ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ಆಫರ್ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವ್ರ ಚಾಳಿ ಅದೇ ಅಲ್ಲವೇನ್ರಿ. ರಾಜ್ಯದ ಜನತೆ ಯಾವತ್ತೂ ಬಿಜೆಪಿಗೆ ಬಹುಮತ ಕೊಟ್ಟಿಲ್ಲ., ಇವ್ರು ಅಡ್ಡ ದಾರಿ, ಹೀನಕೃತ್ಯ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಅಧಿಕಾರಕ್ಕೆ ಬಂದಿದ್ದು. ಜನತೆಗೆ ಮೋಸ ಮಾಡಿ, ಕುತಂತ್ರದಿಂದ ಆಡಳಿತ ಮಾಡಿದವ್ರು. ಅವ್ರ ಇತಿಹಾಸ ಪುಟಗಳೇ ಅಂಥದ್ದಿವೆ. ಬಿಜೆಪಿಗರ ಕ್ಯಾರೆಕ್ಟರ್ ಬದಲಾವಣೆ ಆಗಲ್ಲ. ಅವ್ರ ಪಕ್ಷನೂ ಲೈಫ್ ಟೈಂ ಹಿಂಗೆ ಇರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿನೂ ನಮ್ಮ ಲೀಡರೇ: ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ತಿಮ್ಮಾಪೂರ, ಇದನ್ನು ನಾನು ನಿಮ್ಮಿಂದಲೇ ಕೇಳುತ್ತಿದ್ದೇನೆ, ನಮ್ಮಲ್ಲೇನು ಇಲ್ಲ. ಸಿಎಂ ಆಯ್ಕೆಯನ್ನು ಶಾಸಕರು ಮಾಡಲ್ಲ. ಅದನ್ನು ಹೈಕಮಾಂಡ್ ಮಾಡುತ್ತೆ. ನಾನೊಬ್ಬನೇ ಹೇಳಿದರೆ ಅದು ಆಗುತ್ತಾ, ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ನಮ್ಮ ಲೀಡರ್ಸ್‌ ಎಂದು ಹೇಳಿದರು. ಸತೀಶ್ ಜಾರಕಿಹೊಳಿ ಟೂರ್ ಹೋದ್ರೆ ಏನು ತಪ್ಪು ಎಂದು ಪ್ರಶ್ನಿಸಿದ ತಿಮ್ಮಾಪೂರ, ಟೂರ್ ಹೋದರೆ, ಊಟಾ ಮಾಡಿದರೆ ಅದನ್ನು ಗುಂಪುಗಾರಿಕೆ ಅನ್ನಲಿಕ್ಕೆ ಆಗುತ್ತಾ. ಟೂರ್ ಹೋಗುವುದು, ಕೂಡಿ ಊಟ ಮಾಡೋದ್ರಲ್ಲಿ ತಪ್ಪೇನಿಲ್ಲ ಎಂದರು

ವಿಜಯಪುರಕ್ಕೆ ಬಸವಣ್ಣನ ಹೆಸರಿಟ್ಟರೆ ಒಳ್ಳೆಯದು: ವಿಜಯಪುರಕ್ಕೆ ಬಸವಣ್ಣನ ಹೆಸರಿಟ್ಟರೆ ಒಳ್ಳೆಯದು. ಇದು ರಾಜ್ಯದ ಜನ ಒಪ್ಪಬೇಕು. ರಾಜ್ಯದ ಜನರನ್ನು ಒಪ್ಪಿಸುವ ಕೆಲಸ ಆಗಬೇಕು. ಬಸವಣ್ಣನ ಬಗ್ಗೆ ನಮಗೆ ಭಕ್ತಿ, ಭಯ ಎಲ್ಲವೂ ಇದೆ, ಬಸವಣ್ಣನವರ ವಿಚಾರಧಾರೆಗಳು ನಾಡಿಗೆ ದಾರಿದೀಪವಾಗಿವೆ ಎಂದು ಸಚಿವರು ಹೇಳಿದರು. ಜಮಖಂಡಿಯ ಶಾಸಕ ಜಗದೀಶ್ ಗುಡಗುಂಟಿ ಮೀಸಲಾತಿ ಕಿತ್ತೊಗೆಯಬೇಕು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯೆ ನೀಡಿದ ಸಚಿವರು, ಪಾಪ, ಅವರು ಯಾವ ಮೀಸಲಾತಿ ಹೇಳಿದ್ದಾರೋ ಗೊತ್ತಿಲ್ಲ. 

ಮೀಸಲಾತಿ ಯಾರು ಕೊಟ್ಟವರು, ಸಂವಿಧಾನ ಅಂದರೇನುನು ಅಂತ ಅವರಿಗೆ ಗೊತ್ತಿದಿಯೋ, ಗೊತ್ತಿಲ್ವೋ. ಪಾಪ ಅವರಿನ್ನು ತಿಳಿದುಕೊಂಡಿಲ್ಲ, ತಿಳಿದುಕೊಳ್ಳಲಿ. ರಾಜಕಾರಣಕ್ಕೆ ಹೊಸದಾಗಿ ಕಾಲಿರಿಸಿದ್ದಾರೆ ಎಂದರು. ಲೋಕಸಭಾ ಟಿಕೆಟ್ ಆಕಾಂಕ್ಷಿಗಳು ತಮ್ಮ ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮಲ್ಲೂ ಪೈಪೋಟಿ ಇದೆ. ಯೋಗ್ಯ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಕಸರತ್ತು ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಇದ್ದಾರೆ. ನಾನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಇದ್ದೇನೆ ಎಂದರು.

ಪುತ್ರ ವಿನಯ ಚಿತ್ರದುರ್ಗದಿಂದ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ: ಇತ್ತೀಚೆಗೆ ಹೆಚ್ಚಾಗಿ ಚಿತ್ರದುರ್ಗ ಜಿಲ್ಲಾ ಪ್ರವಾಸ ಮಾಡ್ತಿದ್ದಿರಿ, ಪುತ್ರ ವಿನಯ ಅವರು ಚಿತ್ರದುರ್ಗದಿಂದ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ನಮ್ಮ ಇಲಾಖೆ ರಿವ್ಯೂವ್ ಮಾಡೋಕೆ ಹೋಗಿದ್ದೆ. ವಿನಯ್ ನಿಲ್ತಿದ್ರೆ ಒಳ್ಳೆದು, ಯಾರ ಬೇಡ ಅಂತಾರೆ. ನಿಲ್ತಿನಿ ಅಂತ ಕೇಳಿದ್ರೆ, ನಿಲ್ಲು ಅಂತ ಹೇಳ್ತಿನಿ. ನಾನು ಏಳು ವರ್ಷ ಪಕ್ಷದಲ್ಲಿ ಕೆಲಸ ಮಾಡಿದ್ದಿನಿ. ನನಗೆ ಅವಕಾಶ ಕೊಟ್ಟರೇ ನಿಲ್ತಿನಿ ಅಂತ ವಿನಯ ಹೇಳಿದ್ದ. ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಇದ್ದಾನೆ. ಎಲ್ಲ ಕಡೆ ಓಡಾಡಿ ಪಕ್ಷ ಕಟ್ಟಲಿ. ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಕೋಲಾರದಲ್ಲಿ ಕೂಡ ಪಕ್ಷ ಕಟ್ಟಲಿ ಎಂದು ಸಚಿವರು ತಿಳಿಸಿದರು.

ಹುಲಿ ಉಗುರು ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದ ಅಬಕಾರಿ ಸಚಿವರು, ಬಿಜೆಪಿಯವರಿಗೆ ಬರಗಾಲದ ಬಗ್ಗೆ ಕಾಳಜಿಯಿಲ್ಲ. ಜನ ತತ್ತರಿಸಿದ್ದಾರೆ. ಅವರಿಗೆ ವಿನಂತಿ ಮಾಡುತ್ತೇನೆ. ಪ್ರಧಾನಿ ಬಳಿ ಹೋಗಿ, ನಮ್ಮ ರಾಜ್ಯದಲ್ಲಿ ಇಷ್ಟು ಅನುದಾನ ಇದೆ ನೀವಿಷ್ಟು ಕೊಡಿ ಅನ್ನೋದು ಬಿಟ್ಟು, ನವಿಲುಗರಿ, ಆನೆ ಉಗುರು, ಹುಲಿ ಉಗುರು, ಆನೆ ದಂತ, ಇದು ಊಟ ಮಾಡಬಾರದು, ಇದು ಕಟ್ ಮಾಡಬಾರದು, ಇದು ಮಾಡಬೇಕು ಇದು ಬಿಚ್ಚಿ ಇಡಬೇಕು. ಇವರು ಅಂಗಡಿ ತೆಗಿಬಾರದು, ಇವರ ಅಂಗಡಿ ಒಳಗೆ ಹೋಗಬಾರದು ಎಂದು ಕಾಲ ಕಳೆಯುತ್ತಿದ್ದಾರೆ. ಯಾವುದಾದ್ರು ಪಕ್ಷ ಇಂಥ ಕೆಲಸ ಮಾಡುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಜಿಟಲ್ ತಂತ್ರಜ್ಞಾನ ಶಿಕ್ಷಣ ವ್ಯವಸ್ಥೆಯ ಭವಿಷ್ಯ: ಸಚಿವ ಎಂ.ಸಿ.ಸುಧಾಕರ್

ಜನರು ಇದಕ್ಕೆನಾ ಇವರಿಗೆ ಅಧಿಕಾರ ಕೊಡೋದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪಂದಿಸುವ ರಾಜಕಾರಣ ಇರಬೇಕೆ ವಿನಾ ಕೋಮುವಾದ, ಜಾತಿವಾದ, ಸೇಡಿನ ರಾಜಕಾರಣ, ಐಟಿಯವರನ್ನ ಕಳಿಸುವ ರಾಜಕಾರಣ ಮಾಡುತ್ತಿದ್ದಾರೆ. ಈ ರಾಜಕಾರಣದಲ್ಲಿ ಅನಿಯಂತ್ರಿತ ಎಮರ್ಜೆನ್ಸಿ ಇದೆ. ಇಂಥ ಭಯ ಯಾರಿಗೂ ಹುಟ್ಟಿಸಿದ್ದಿಲ್ಲ. ಯಾರಾದರೂ ಬಾಯಿ ಎತ್ತಿದರೆ, ನಿಮ್ಮ ಮನೆಗೆ ಐಟಿ, ಇಡಿಯವರು ದಾಳಿ ಇಡುತ್ತಾರೆ ಎಂದು ಬೆದರಿಕೆ ಒಡ್ಡುತ್ತಾರೆ. ಇದು ಈ ದೇಶದಲ್ಲಿ ನಡೆಯುತ್ತಿರುವ ನಾಚಿಕೆಗೇಡಿನ ಕೆಲಸ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ದುರ್ದೈವದ ಸಂಗತಿ ಎಂದರು.

click me!