ಮತೀಯವಾದದ ಮಾತಿಗೆ ಸಂವಿಧಾನವೇ ಉತ್ತರ: ಸಚಿವ ಮಹದೇವಪ್ಪ

Published : May 18, 2025, 10:50 PM IST
ಮತೀಯವಾದದ ಮಾತಿಗೆ ಸಂವಿಧಾನವೇ ಉತ್ತರ: ಸಚಿವ ಮಹದೇವಪ್ಪ

ಸಾರಾಂಶ

ದೇಶದಲ್ಲಿ ಇಂದು ಹಿಂದುತ್ವ, ಮತೀಯವಾದ ಧರ್ಮ ಸಂಸತ್ತು ಇತರೆ ಮಾತುಗಳು ಕೇಳಿ ಬರುತ್ತಿದ್ದು ಇಂತಹ ಮನಸ್ಥಿತಿ ಇರುವವರಿಗೆ ಅಂಬೇಡ್ಕರ್ ವಿರಚಿತ ಸಂವಿಧಾನವೇ ಪ್ರಬಲ ಉತ್ತರವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. 

ಯಳಂದೂರು (ಮೇ.18): ದೇಶದಲ್ಲಿ ಇಂದು ಹಿಂದುತ್ವ, ಮತೀಯವಾದ ಧರ್ಮ ಸಂಸತ್ತು ಇತರೆ ಮಾತುಗಳು ಕೇಳಿ ಬರುತ್ತಿದ್ದು ಇಂತಹ ಮನಸ್ಥಿತಿ ಇರುವವರಿಗೆ ಅಂಬೇಡ್ಕರ್ ವಿರಚಿತ ಸಂವಿಧಾನವೇ ಪ್ರಬಲ ಉತ್ತರವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ತಾಲೂಕಿನ ಎಲ್ಲ ಗ್ರಾಮಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನದಲ್ಲಿ ಎಲ್ಲವೂ ಇದೆ, ಅಂಬೇಡ್ಕರ್ ಸಂವಿಧಾನದ ಮೂಲಕ ಪೀಠಿಕೆಯಲ್ಲೇ ಭಾರತೀಯರಾದ ನಾವು ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಇಲ್ಲಿ ಎಲ್ಲರನ್ನೂ ಒಳಗೊಂಡಂತೆ ಎಂಬ ವಿಶಾಲ ಅರ್ಥವಿದೆ. ಧರ್ಮದ ಆಧಾರದ ಮೇಲೆ ರಾಷ್ಟ್ರ ನಡೆಸುವ ಅಗತ್ಯತೆ ನಮ್ಮ ದೇಶಕ್ಕಿಲ್ಲ. ಭಾರತೀಯರೆಲ್ಲರೂ ಒಂದೇ ಸಂವಿಧಾನವೇ ನಮ್ಮ ಧರ್ಮ ಎಂಬ ಅಚಲ ನಿರ್ಧಾರವನ್ನು ಎಲ್ಲರೂ ತಾಳಬೇಕು ಎಂದು ಸಲಹೆ ನೀಡಿದರು.

ನಾನು ದಲಿತ ಸಂಘಟನೆಗಳ ಪೋಷಕ: ನಾನು ದಲಿತ ಸಂಘಟನೆಗಳಲ್ಲಿ ನೇರವಾಗಿ ಭಾಗಿಯಾಗಿಲ್ಲ, ಆದರೆ ರಾಜ್ಯದಲ್ಲಿ ಕಳೆದ ೪೦ ವರ್ಷಗಳಿಂದಲೂ ದಲಿತ ಸಂಘಟನೆಗಳ ಪೋಷಕನಾಗಿ ಕೆಲಸ ಮಾಡುತ್ತಿದ್ದೇನೆ. ಅಂಬೇಡ್ಕರ್‌ ಅವರ ಸ್ವತಂತ್ರ, ಸಮಾನತೆ ಮತ್ತು ಭಾತೃತ್ವವನ್ನು ಕಾಣಲು ಇಂದೂ ಕೂಡ ನಾವು ಹೆಣಗಾಡುವ ಸ್ಥಿತಿ ಇದೆ. ಸ್ವತಂತ್ರ ಇದ್ದರೂ ಸಮಾನತೆ ಸಿಕ್ಕಿಲ್ಲ ಇವೆರೆಡು ಇಲ್ಲದಿದ್ದರೆ ಭಾತೃತ್ವಕ್ಕೆ ಅರ್ಥವೇ ಇಲ್ಲ ಹಾಗಾಗಿ ಇದನ್ನು ಸಂಘಟಿಸುವ ಕೆಲಸವಾಗಬೇಕಿದೆ ಎಂದರು. ಚಾಮರಾಜನಗರ ಜಿಲ್ಲೆಯಲ್ಲಿ ಐತಿಹಾಸಿಕ ಕ್ಯಾಬಿನೆಟ್ ಸಭೆ ನಡೆದಿದೆ. ೩,೬೦೦ ಕೋಟಿ ರು. ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಚಾಮರಾಜನಗರ ಜಿಲ್ಲೆ ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಜಿಲ್ಲೆಯಾಗಿದೆ. ಇಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರೇ ಹೆಚ್ಚಾಗಿದ್ದಾರೆ. ಹಾಗಾಗಿ ಈ ಜಿಲ್ಲೆ ಮೇಲೆ ನನಗೆ ವಿಶೇಷ ಕಾಳಜಿ ಇದೆ. ನಾನು ಎಷ್ಟು ಅನುದಾನ ಕೇಳಿದರೂ ಕೊಡುತ್ತೇನೆ. ಕಬಿನಿ ಕಾಲುವೆ ಅಭಿವೃದ್ಧಿಗೆ 130 ಕೋಟ ರು. ಅನುದಾನ ಮೀಸಲಿಡಲಾಗಿದೆ. 

ರೇಷ್ಮೆ ನಾಡು ಖ್ಯಾತಿಯ ಜಿಲ್ಲೆಯಲ್ಲಿ ರೇಷ್ಮೆ ರೀಲರ್‌ಗಳನ್ನು ಉತ್ತೇಜಿಸಲು ಈಗಾಗಲೇ 15 ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ. ಅಂಬೇಡ್ಕರ್ ಭವನದಲ್ಲಿ ಪರಿಕರಗಳನ್ನು ಕೊಳ್ಳಲು ಇತರೆ ಅಭಿವೃದ್ಧಿಗೆ ೭೫ ಲಕ್ಷ ರು. ಹಣವನ್ನು ನೀಡಿದ್ದು ಇನ್ನಷ್ಟು ಹಣ ನೀಡಲಾಗುವುದು ಎಂದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈಗ ಜಾತಿ ಸಮೀಕ್ಷೆ ನಡೆಯುತ್ತಿದೆ. ನಾವು ಒಗ್ಗಟ್ಟಾಗುವ ಸಮಯ ಇದಾಗಿದೆ. ಹಾಗಾಗಿ ಆದಿ ಕರ್ನಾಟಕ, ಬಲಗೈ ಸಮುದಾಯದವರು ಉಪಜಾತಿಯಲ್ಲಿ ಹೊಲೆಯ ಎಂಬ ಪದವನ್ನೇ ನಮೂದಿಸಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡಬೇಕು. ಮರು ಜಾತಿ ಸಮೀಕ್ಷೆಯಲ್ಲಿ ಇರುವ ಗೊಂದಲಗಳು ನಿವಾರಣೆಯಾಗಬೇಕು. ಇದನ್ನು ಮಾಡಲು ಸಹಕರಿಸಿದ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ನಾನು ಋಣಿಯಾಗಿದ್ದೇನೆ ಎಂದರು.

ಹಾಲಿನ ದರ ಹೆಚ್ಚಳವೇ ರೈತರಿಗೆ ಆರ್ಥಿಕತೆಯ ಬಲ: ಸಚಿವ ಕೆ. ವೆಂಕಟೇಶ್

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಜಿ, ಸಂಸದ ಸುನೀಲ್ ಬೋಸ್, ಟಿ.ನರಸೀಪುರ ನಳಂದ ಬುದ್ಧವಿಹಾರದ ಬೋಧಿರತ್ನ ಬಂತೇಜಿ, ಮಾಜಿ ಶಾಸಕ ಎನ್. ಮಹೇಶ್, ಜಿ.ಎನ್.ನಂಜುಂಡಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಸಾವಿರಾರು ಜನರು ವಿವಿಧ ಕಲಾತಂಡಗಳು ಅಲಂಕೃತ ಎತ್ತಿನಗಾಡಿ, ಆಟೋಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಸದಸ್ಯರಾದ ಸುಶೀಲಾಪ್ರಕಾಶ್, ಸವಿತಾಬಸವರಾಜು, ಲಿಂಗರಾಜಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ವಡಗೆರೆದಾಸ್, ಕಮಲ್ ನಾಗರಾಜು ಬಿಳಿಗಿರಿರಂಗನಬೆಟ್ಟ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಕಿನಕಹಳ್ಳಿ ರಾಚಯ್ಯ, ಸಾಹಿತಿ ಶಂಕನಪುರ ಮಹದೇವ್ ತಾಪಂ ಮಾಜಿ ಅಧ್ಯಕ್ ನಿರಂಜನ್, ಸೇವಾಸ ಸಮಿತಿ ಸಂಚಾಲಕ ಕೆಸ್ತೂರು ಸಿದ್ದರಾಜು, ಸಿ. ರಾಜಣ್ಣ, ಉಮಾಶಂಕರ್, ಯರಿಯೂರು ಎನ್. ನಾಗೇಂದ್ರ, ಡಾ. ಶ್ರೀಧರ್, ಮುಡಿಗುಂಡ ಶಾಂತರಾಜು, ಹೊನ್ನೂರು ರೇವಣ್ಣ ಸೇರಿದಂತೆ ಅನೇಕರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ