
ಸೊರಬ (ಮಾ.20): ಮನವೊಲಿಕೆಗೆ ಯಾರೇ ಬಂದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ, ಸ್ಪರ್ಧೆ ಮಾಡುವುದು ಅಚಲ. ಈ ಬಗ್ಗೆ ಬಿಜೆಪಿ ಮುಖಂಡರು ವಿಫಲ ಪ್ರಯತ್ನ ನಡೆಸುವುದನ್ನು ನಿಲ್ಲಿಸಲಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವ ಕೆ.ಎಸ್.ಈಶ್ವರಪ್ಪ ಹೇಳಿದರು. ತಾಲೂಕಿನ ಜಡೆ ಮಠಕ್ಕೆ ಭೇಟಿ ನೀಡಿ ಡಾ. ಮಹಾಂತ ಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದವರ ಸ್ವತ್ತಲ್ಲ.
ನಾನೂ ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆ ಪಾಠ ಕಲಿಸುತ್ತದೆ. ನನ್ನಂತೆ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ, ಪ್ರತಾಪ್ ಸಿಂಹ, ಡಿ.ವಿ. ಸದಾನಂದಗೌಡ ಅವರಿಗೂ ಯಡಿಯೂರಪ್ಪ ಅವರ ಕುಟುಂಬ ಲೋಕಸಭೆಗೆ ಟಿಕೆಟ್ ನೀಡದೇ ವಂಚಿಸಲಾಗಿದೆ ಎಂದು ಆರೋಪಿದರು. ಆಗ ಯಡಿಯೂರಪ್ಪ, ಈಗ ವಿಜಯೇಂದ್ರಗೆ ಜೈಕಾರ ಹಾಕುತ್ತಾ ಇರಬೇಕೇನು. ವಿಜಯೇಂದ್ರ ಮುಖ್ಯಮಂತ್ರಿ ಆಗುವುದನ್ನು ನಾವು ನೋಡುತ್ತಾ ಕುಳಿತಿರಬೇಕೇನು? ಎಂದು ಈಶ್ವರಪ್ಪ ಪ್ರಶ್ನಿಸಿದರು.
ನಾನು ನನ್ನ ಪುತ್ರನಿಗಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷ ಸರಿಪಡಿಸಲು ಈ ಸ್ಪರ್ಧೆ. ಈಗ ನನ್ನ ಪುತ್ರ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ನೀಡುತ್ತೇನೆ ಎಂದರೂ ಅದು ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಮತ್ತು ನನ್ನ ಕುಟುಂಬ ಕಟ್ಟಾ ಹಿಂದುತ್ವವಾದಿ. ನನ್ನ ಎದೆ ಬಗೆದರೆ ರಾಮ, ಕೃಷ್ಣರೇ ಕಾಣುತ್ತಾರೆ. ಪ್ರಧಾನಿ ಮೋದಿ ತಮಗೆ ಆದರ್ಶ. ಅವರ ಬಗ್ಗೆ ದೈವತ್ವ ಭಾವನೆ ಹೊಂದಿದ್ದು, ತನ್ನಪಾಲಿಗೆ ದೇವರು, ಅವರು ತನ್ನ ಪ್ರಾಣ. ಅವರನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ.
ಲೋಕಸಭೆ ಚುನಾವಣೆ ನಂತ್ರ ದಲಿತ ಸಿಎಂ ಬಗ್ಗೆ ದನಿ: ಸಚಿವ ಸತೀಶ್ ಜಾರಕಿಹೊಳಿ
ನಮ್ಮ ಊರಿಗೆ ಪ್ರಧಾನಿ ಬರುತ್ತಿರುವುದು ಸಂತಸದ ವಿಚಾರ. ಆದರೆ ಅವರನ್ನು ಭೇಟಿ ಆಗದ ಸ್ಥಿತಿಯಲ್ಲಿದ್ದೇನೆ. ನಾನು ಸಮಾವೇಶದಲ್ಲಿ ಭಾಗವಹಿಸುವುದು ಸರಿಯಲ್ಲ. ನರೇಂದ್ರ ಮೋದಿ ಬರುವ ಸುದಿನದಂದು ಜಿಲ್ಲೆಯ ಮಠಾಧೀಶರನ್ನು ಭೇಟಿಯಾಗಿ ಪ್ರವಾಸ ಕೈಗೊಂಡಿದ್ದೇನೆ. ಗೆದ್ದ ಬಳಿಕ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ಈಗ ನನ್ನ ಬೆಂಬಲಿಗರಿಗೆ ಸಭೆಗೆ ಹೋಗಲು ತಿಳಿಸಿದ್ದೇನೆ. ಮೋದಿ ಮಾತು ಕೇಳಿಕೊಂಡು ಬನ್ನಿ ಎಂದಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.