ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆಗೆ ನೀರಾವರಿ ಯೋಜನೆಯೇ ಸವಾಲು !

By Kannadaprabha News  |  First Published May 19, 2023, 3:26 PM IST

ಹಾನಗಲ್ಲ ತಾಲೂಕಿನಲ್ಲಿ ಮೊದಲ ಬಾರಿಗೆ 21 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಿಯಾದ ಶಾಸಕ ಶ್ರೀನಿವಾಸ ಮಾನೆ ಅವರಿಗೆ ವಿರಾಟ ಸ್ವರೂಪದ ಅತ್ಯಧಿಕ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಇದೆ.


ವಿಶೇಷ ವರದಿ

 ಹಾನಗಲ್ಲ (ಮೇ.19) : ಹಾನಗಲ್ಲ ತಾಲೂಕಿನಲ್ಲಿ ಮೊದಲ ಬಾರಿಗೆ 21 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಿಯಾದ ಶಾಸಕ ಶ್ರೀನಿವಾಸ ಮಾನೆ ಅವರಿಗೆ ವಿರಾಟ ಸ್ವರೂಪದ ಅತ್ಯಧಿಕ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಇದೆ.

Tap to resize

Latest Videos

ರಾಜ್ಯದಲ್ಲಿಯೇ ಹಾನಗಲ್ಲ ಅತಿ ದೊಡ್ಡ ತಾಲೂಕುಗಳಲ್ಲಿ ಒಂದು. ಅಷ್ಠೇ ಪ್ರಮಾಣದ ಸಮಸ್ಯೆಗಳು ಇವೆ. ಕೃಷಿಯೇ ಇಲ್ಲಿನ ಜನರ ಜೀವನಾಡಿಯಾಗಿರುವಾಗ ರೈತರ ಸಮಸ್ಯೆಗಳಿಗೆ ಮೊದಲ ಪರಿಹಾರವಾಗಿ ನೀರಾವರಿ ಯೋಜನೆಗಳನ್ನು ರೂಪಿಸುವ ಅನಿವಾರ್ಯತೆ ಇದೆ. ಈ ಮೊದಲೆ ಬಸಾಪುರ ಏತ ನಿರಾವರಿ ಯೋಜನೆ ಕೆಲ ಹಳ್ಳಿಗಳಿಗೆ ನೀರೊದಗಿಸಲು ಸಾಧ್ಯವಾಗಿ, ದಿ. ಸಿ.ಎಂ. ಉದಾಸಿ ಅವರ ಅಧಿಕಾರಾವಧಿಯಲ್ಲಿ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿಗಳು ಕಾಮಗಾರಿ ಆರಂಭವಾಗಿದ್ದರೂ ಕುಂಟುತ್ತ ಸಾಗಿವೆ. ಕಳೆದ ಮಳೆಗಾಲಕ್ಕೆ ರೈತರ ಜಮೀನಿಗೆ ನೀರು ನೀಡುವ ಭರವಸೆ ಹೊಂದಿದ್ದರೂ ಈ ವರಗೂ ಕಾಮಗಾರಿಯೇ ಪೂರ್ಣಗೊಳ್ಳದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಈಗಲಾದರೂ ಕಾಮಗಾರಿ ಪೂರ್ಣಗೊಂಡು ಈ ಮಳೆಗಾಲದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಬೇಕಾಗಿದೆ. ಇದು ರೈತರ ಮಹತ್ವಾಕಾಂಕ್ಷಿ ಯೋಜನೆಯಾಗಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ.

ಹಾನಗಲ್ಲ ನಿರಂತರ ಕುಡಿಯುವ ನೀರು ಯೋಜನೆ ಶೀಘ್ರ ಸಾಕಾರ: ಶಾಸಕ ಶ್ರೀನಿವಾಸ ಮಾನೆ

ತಾಲೂಕಿನಲ್ಲಿ ದಿ. ಸಿ.ಎಂ. ಉದಾಸಿ ಅವರು ಲೋಕೋಪಯೋಗಿ ಮಂತ್ರಿ ಇರುವಾಗ ತಾಲೂಕಿನ ರಸ್ತೆಗಳು ಭಾರಿ ಅಭಿವೃದ್ಧಿಯೊಂದಿಗೆ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಆನಂತರದಲ್ಲಿ ಈ ರಸ್ತೆಗಳ ನಿರ್ವಹಣೆ ಸಮಾಧಾನಕರವಿಲ್ಲ. ಇದರೊಂದಿಗೆ ಬಹು ಮುಖ್ಯವಾಗಿ ನಮ್ಮ ಹೊಲ ನಮ್ಮ ರಸ್ತೆ ಅಭಿವೃದ್ಧಿ ತೀರ ಅವಶ್ಯವಾಗಿದೆ. ಅಲ್ಲದೆ ರೈತರು ಗೋವಿನಜೋಳ, ಭತ್ತ ಮುಂತಾದ ಧಾನ್ಯಗಳನ್ನು ರಸ್ತೆಗಳಲ್ಲೇ ಒಕ್ಕುತ್ತಿರುವುದು ಸಹಜ ನೋಟವಾಗಿದೆ. ಹೀಗಾಗಿ ರೈತರಿಗಾಗಿ ಸಾಮೂಹಿಕ ಒಕ್ಕುವ ಕಣಗಳನ್ನು ನಿರ್ಮಿಸುವುದು ಅಗತ್ಯ.

ತಾಲೂಕಿನಲ್ಲಿ ಬಹುತೇಕ ನೀರಾವರಿಗೆ ಕೊಳವೆಬಾವಿ ಅವಲಂಬಿಸುತ್ತಿದ್ದಾರೆ. ತಾಲೂಕಿನಲ್ಲಿ 21,500 ನೀರಾವರಿ ಕೊಳವೆಬಾವಿಗಳಿದ್ದು, ಇದರೊಂದಿಗೆ ಇದರ ಎರಡರಷ್ಟುಕೊಳವೆಬಾವಿಗಳು ಅನಧಿಕೃತವಾಗಿವೆ. ಇವುಗಳಿಗೆ ವಿದ್ಯುತ್‌ ಹರಿಸಲು ಕೇವಲ 8 ಗ್ರೀಡ್‌ಗಳಿದ್ದು ಈ ಗ್ರೀಡ್‌ಗಳ ಸಂಖ್ಯೆ ದ್ವಿಗುಣವಾದರೆ ಮಾತ್ರ ವಿದ್ಯುತ್‌ ಪೂರೈಕೆ ಸಮ ಪ್ರಮಾಣದಲ್ಲಿ ನೀಡಲು ಸಾಧ್ಯ.

ರೈತರಿಗೆ ಗೋದಾಮು, ಕೆರೆ ಒತ್ತುವರಿ ತೆರವು, ಧರ್ಮಾ ಕಾಲುವೆ ದುರಸ್ತಿ, ಸರ್ವಋುತು ರಸ್ತೆಗಳ ನಿರ್ಮಿಸುವ ಜತೆಗೆ ಇನ್ನೂ ಎರಡ್ಮೂರು ಏತ ನೀರಾವರಿ ಯೋಜನೆಗಳ ಅವಶ್ಯಕತೆ ಇದೆ. ಕೆರೆ ಹೂಳೆತ್ತುವ ಕೆಲಸ ನಡೆಯಬೇಕಾಗಿದೆ. ಎಲ್ಲದಕ್ಕೂ ಮುಖ್ಯವಾಗಿ ಬೇಡ್ತಿ-ಧರ್ಮಾ ನದಿಗಳ ಜೋಡಣೆಗೆ ಸರ್ಕಾರ ಸ್ಪಂದಿಸಿದರೆ ಬೇಸಿಗೆಯಲ್ಲಿಯೂ ನದಿಯಿಂದ ರೈತರ ಜಮೀನಿಗೆ ನೀರು ಕೊಡಬಹುದು. ಮಾವು ಸಂಸ್ಕರಣಾ ಘಟಕದ ಕಾಮಗಾರಿ ಕೂಡಲೇ ಆರಂಭವಾಗಿ ಇಲ್ಲಿನ ಸಾವಿರಾರು ಎಕರೆ ಮಾವು ಫಸಲು ಒಳ್ಳೆಯ ಬೆಲೆಯೊಂದಿಗೆ ಮಾರಾಟವಾಗುವಂತಾಗಬೇಕಾಗಿದೆ.

ಹಾನಗಲ್ಲ ವಾಣಿಜ್ಯ ಪಟ್ಟಣವಾಗಲು ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಕೊರತೆ ಬಹು ಕಾಲದಿಂದ ಕಾಡುತ್ತಿದ್ದು, ಬೇಸಿಗೆಗಾಗಿ ನೀರು ಸಂಗ್ರಹಿಸುವ ಆನಿಕೆರೆ ಅಭಿವೃದ್ಧಿ ಹಾಗೂ ಇಲ್ಲಿಗೆ ಮಳೆಗಾಲದಲ್ಲಿ ನೀರು ತುಂಬಿಸುವುದು ಮುಖ್ಯ ಯೋಜನೆಗಳಾಗಬೇಕಾಗಿದೆ. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣವಾಗದೆ ಸಾರ್ವಜನಿಕರ ಶಾಪಕ್ಕೆ ತುತ್ತಾಗಿದೆ. ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಚರ್ಚೆಯಾಗುತ್ತಿದೆಯೇ ಹೊರೆತು ಕಾರ್ಯ ರೂಪಕ್ಕೆ ಬರುತ್ತಿಲ್ಲ. ಪಟ್ಟಣದಲ್ಲಿ ಒಂದೂ ಉದ್ಯಾನವನ ಇಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ. ಹತ್ತಾರು ವರ್ಷಗಳ ಹಿಂದೆ ಸುಸಜ್ಜಿತವಾಗಿ ನಿರ್ಮಾಣಗೊಂಡ ಈಜುಗೊಳ ಈಜುಗಾರರ ಉಪಯೋಗಕ್ಕೆ ಬರಲೇ ಇಲ್ಲ. ಈಗಲಾದರೂ ಅದರ ಅಭಿವೃದ್ಧಿ ಯುವಕರ ಕನಸಾಗಿದೆ.

ಮತ್ತೆ ಮಹಾರಾಷ್ಟ್ರ ಕಿರಿಕ್: ಎಂಇಎಸ್‌ ಮಹಾಮೇಳಾವ್‌'ಗೆ ಬರುವುದಾಗಿ ಧೈರ್ಯಶೀಲ ಮಾನೆ ಪತ್ರ

ಸಾಲು ಸಾಲು ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅನುದಾನ ಪಡೆದು ಅಭಿವೃದ್ಧಿಪಡಿಸಲು ಹರಸಾಹಸವನ್ನೇ ಪಡಬೇಕಾದದ್ದು ನೂತನ ಶಾಸಕರಿಗೆ ಸವಾಲಾಗಿದೆ. ಇನ್ನು ಶಿಕ್ಷಣ ಸಂಸ್ಥೆಗಳ ಕೊರತೆಗಳನ್ನು ನೀಗಿಸುವುದು ಮತ್ತೊಂದು ಭಾಗ.

click me!