ಹಿಂದು ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ, ಅಮಾನವೀಯ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಯಾವುದೇ ಆರೋಪಿಗಳನ್ನು ಮನಸೋಇಚ್ಛೆ ಹೊಡೆಯುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಪೊಲೀಸರ ವರ್ತನೆಗೆ ಕಿಡಿಕಾರಿದರು.
ಮಂಗಳೂರು (ಮೇ.19) : ಹಿಂದು ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ, ಅಮಾನವೀಯ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಯಾವುದೇ ಆರೋಪಿಗಳನ್ನು ಮನಸೋಇಚ್ಛೆ ಹೊಡೆಯುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಪೊಲೀಸರ ವರ್ತನೆಗೆ ಕಿಡಿಕಾರಿದರು.
ಇವರೇನು ತಾಲಿಬಾನಿಗಳಲ್ಲ, ದೇಶದ್ರೋಹದ ಕೆಲಸ ಮಾಡಿಲ್ಲ:
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಕೃತ್ಯದ ಹಿಂದಿನ ಕೈಗಳು ಯಾರದ್ದಿದೆ ಎಂಬುದು ಈ ಭಾಗದ ಜನರಿಗೆ ಗೊತ್ತಿದೆ, ಆ ಆಳಕ್ಕೆ ನಾವು ಹೋಗಲ್ಲ. ಹಿಂದು ಕಾರ್ಯಕರ್ತರನ್ನು ಡಿವೈಎಸ್ಪಿ ಕೋಣೆಯಲ್ಲಿ ಕೂಡಿಹಾಕಿ ಹೊಡೆಯಲಾಗಿದೆ. ಇದು ಪೊಲೀಸ್ ಇಲಾಖೆಗೆ ಗೌರವ ತರೋ ಕೆಲಸ ಅಲ್ಲ. ಹಿಂದು ಕಾರ್ಯಕರ್ತರು ತಾಲಿಬಾನಿಗಳಲ್ಲ, ದೇಶದ್ರೋಹಿ ಕೆಲಸ ಮಾಡಿದವರಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ದೂರು ಬಂದಾಗ ತನಿಖೆ ಮಾಡಬೇಕು, ಎಚ್ಚರಿಕೆ ಕೊಡಬೇಕೇ ಹೊರತು ಚರ್ಮ ಸುಲಿಯುವಂತೆ ಹೊಡೆಯುವುದಲ್ಲ. ಹಾಗೆ ಹೊಡೆಯುವ ಅಧಿಕಾರ ಪೊಲೀಸರಿಗೆ ಇಲ್ಲ. ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು: ಪುತ್ತಿಲ
ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕು. ಈ ಕೃತ್ಯದ ಹಿಂದೆ ಯಾರ ಒತ್ತಡ ಇದೆ ಎಂಬುದು ತಿಳಿಯಬೇಕು. ಕೆಳಹಂತದ ಸಿಬ್ಬಂದಿ ಜೊತೆ ಡಿವೈಎಸ್‌ಪಿ ಮೇಲೂ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ನಾಳೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದೆ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಹಿಂದು ಕಾರ್ಯಕರ್ತರಿಗೆ ತುಂಬಾ ಸವಾಲಿನದ್ದಾಗಿದೆ. ಏಕೆಂದರೆ ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಮಾರಣಹೋಮ ಆಗಿತ್ತು. ಇದೀಗ ಮತ್ತೆ ಅದೇ ನಾಯಕತ್ವದಲ್ಲಿ ಸರ್ಕಾರ ಬಂದಿದೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಭಯ ಮತ್ತು ಅನಾಥ ಪ್ರಜ್ಞೆ ಮೂಡ್ತಾ ಇದೆ. ತಾಲಿಬಾನ್ ಸರ್ಕಾರ ಬರ್ತಾ ಇದೆ ಅಂತ ಹಿಂದೂ ಕಾರ್ಯಕರ್ತರು ಭಯಭೀತರಾಗಿದ್ದಾರೆ. ಹೀಗಾಗಿ ನಮ್ಮ ಕಡೆಯಿಂದ ತಪ್ಪಾಗದಂತೆ ನಾವು ನೋಡಿಕೊಳ್ಳಬೇಕು. ನಾವು ಹಿಂದೂಗಳು ಯಾರಿಗೂ ತೊಂದರೆ ಕೊಡುವವರಲ್ಲ, ಯಾವುದೇ ಧರ್ಮದ ವಿರುದ್ದ ಅಲ್ಲ, ನಮ್ಮ ಹೋರಾಟ ಹಿಂದುತ್ವಕ್ಕೆ. ಆದರೆ ಕೆಲವೊಂದು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬಂತು ಅಂತ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದ್ರೆ, ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಹಿಂದುಗಳ ರಕ್ಷಣೆ ಮಾಡೋದು ಬಿಜೆಪಿ ಕೆಲಸ:
ಬಿಜೆಪಿ ಮತ್ತು ಹಿಂದು ಸಂಘಟನೆಗಳು ಬೇರೆ ಬೇರೆ ಎಂದು ಬಿಂಬಿಸಲಾಗಿದೆ. ಆದರೆ ಅವೆರಡೂ ಒಂದೇ ಬೇರೆ ಬೇರೆಯಲ್ಲ. ದೇಶದಲ್ಲಿ ಹಿಂದುಗಳ ರಕ್ಷಣೆ ಮಾಡುವುದು ಬಿಜೆಪಿ ಕೆಲಸ. ಈಗ ನಡೆದಿರುವ ಘಟನೆ ಮತ್ತು ಇಲ್ಲಿನ ಕಾರ್ಯಕರ್ತರ ಭಾವನೆಯನ್ನು ಕೇಂದ್ರದ ನಾಯಕರಿಗೆ ಹೇಳ್ತೇನೆ. ಹೊಡೆತಕ್ಕೆ ಒಳಗಾದ ಕಾರ್ಯಕರ್ತರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ಕಾರ್ಯಕರ್ತರಿಗೆ ಚಿಕಿತ್ಸೆ ವೈದ್ಯಕೀಯ ವೆಚ್ಚಕ್ಕೆ ನಾನು ವೈಯಕ್ತಿಕವಾಗಿ ಒಂದು ಲಕ್ಷರೂ. ನೀಡುತ್ತಿದ್ದೇನೆ ಎಂದರು.
ಈ ಘಟನೆ ಮುಂದುವರಿಸೋದು ಬೇಡ:
ನಾನು ನಿಮ್ಮಲ್ಲಿ ವಿನಂತಿ ಮಾಡುತ್ತೇನೆ. ಈ ಘಟನೆಯನ್ನು ಮುಂದುವರಿಸೋದು ಬೇಡ. ನಮಗೂ ನೋವಾಗಿದೆ, ಒಳಗಿನ ಸತ್ಯ ನಮಗೂ ಗೊತ್ತಾಗಿದೆ. ಆ ಸತ್ಯವನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿ ಮುಟ್ಟಿಸ್ತೇನೆ. ನಾನು ಯಾವಾಗಲೂ ನಿಮ್ಮ ಜೊತೆಗೆ ಇರ್ತೇನೆ. ನಾನು ಬಂದ ಕ್ಷೇತ್ರವೂ ಮುಸ್ಲಿಂ ಬಾಹುಳ್ಯದ ಪ್ರದೇಶ. ಈ ಘಟನೆಯಲ್ಲಿ ಹಿಂದೂ ವರ್ಸಸ್ ಬಿಜೆಪಿ ಕಾರ್ಯಕರ್ತರು ಅನ್ನೋ ಭಾವನೆ ಬೇಡ. ನಾವೆಲ್ಲರೂ ಒಂದೇ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಇರೋದಕ್ಕೆ ತಕ್ಕ ನಿರ್ಣಯ ಪಕ್ಷ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.
ಯಾರಿಗೂ ಹೆದರೋ ಅಗತ್ಯ ಇಲ್ಲ:
ಯಾರಿಗೆ ಭಯ ಪಡುವ ಅಗತ್ಯವಿಲ್ಲ, ಯಾರೂ ನೋವು ಪಡಬೇಡಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ ಯತ್ನಾಳ್, ಆಗಿರುವ ತಪ್ಪನ್ನು ಹೈಕಮಾಂಡ್ ಸೂಕ್ತ ಕ್ರಮ ಜರುಗಿಸಿ ಸರಿ ಮಾಡಲಿದೆ. ರಾಜ್ಯಾಧ್ಯಕ್ಷರ ಹತ್ರ ನಿನ್ನೆ ಮಾತನಾಡಿದೆ, ಹಂಗಾಮಿ ಸಿಎಂ ಬೊಮ್ಮಾಯಿ ಕೂಡ ಡಿಜಿಪಿ ಜೊತೆ ಮಾತನಾಡಿದ್ದಾರೆ. ಅವರು ಪ್ರಯತ್ನ ಮಾಡ್ತಾ ಇದ್ದಾರೆ. ಆದರೆ ಈ ಘಟನೆ ನಡೆದಿರುವುದು ನಮಗೆ ನೋವುಂಟು ಮಾಡಿದೆ ಅಲ್ಲದೇ ಇದು ತಲೆತಗ್ಗಿಸೋ ಕೆಲಸ ಎಂದರು.
ಚುನಾವಣೆ ಟಿಕೆಟ್ ವಿಚಾರದಲ್ಲಿ ಅಸಮಾಧಾನ:
ಈ ಘಟನೆ ಚುನಾವಣಾ ಟಿಕೆಟ್ ವಿಚಾರ ಮತ್ತು ಕೆಲವು ಕಾರಣಗಳಿಂದ ಕಾರ್ಯಕರ್ತರಲ್ಲಿ ಅಸಮಾಧಾನದಿಂದ ಹೀಗಾಗಿದೆ. ಇದು ಹಿಂದು ಕಾರ್ಯಕರ್ತರಿಗೆ ಚರ್ಮ ಸುಲಿಯುವಷ್ಟು ದೊಡ್ಡ ವಿಷಯವಾಗಿರಲಿಲ್ಲ. ಬಿಜೆಪಿ, ಹಿಂದು ಕಾರ್ಯಕರ್ತರು ಬೇರೆಯಲ್ಲ. ನಾವೆಲ್ಲರೂ ಒಂದೇ ಚುನಾವಣೆಯಲ್ಲಿ ಅರುಣ್ ಕುಮಾರ್ ಅವರಿಗೂ ಹೆಚ್ಚು ಮತ ಬಂದಿದೆ. ಅವರ ಮೇಲೆಯೂ ಗೌರವ ಇದೆ, ಇದು ಪೂರ್ತಿ ಕೇಂದ್ರದ ಗಮನಕ್ಕೆ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಪಕ್ಷ ಒಳ್ಳೆಯ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಒಳಜಗಳದಿಂದ ಪುತ್ತೂರಿನಲ್ಲಿ ಸೋಲು:
ಪುತ್ತೂರಿನಲ್ಲಿ ನಾವು ಸೋತಿರುವುದು ವಿರೋಧಿಗಳಿಂದಲ್ಲ, ನಮ್ಮ ಒಳಜಗಳ, ವೈಯಕ್ತಿಕ ಪ್ರತಿಷ್ಟೆ ಕಾರಣಕ್ಕೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು. ಮುಂದಿನ ದಿನಗಳು ನಮಗೆ ಕಠಿಣ ಇದೆ, ಅದಕ್ಕೆ ನಾವು ತಯಾರಾಗಬೇಕು ಇನ್ನೊಂದಿಷ್ಟು ಕಾರ್ಯಕರ್ತರ ಮೇಲೆ ಹಲ್ಲೆ ಆಗಬಹುದು. ಎಲ್ಲರೂ ಆತ್ಮಾವಲೋಕನ ಮಾಡಿ ತಪ್ಪಿದ್ರೆ ಕ್ಷಮೆ ಕೇಳಬೇಕು. ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದಾರೆ, ಯಾರೇ ಹೇಳಿದ್ರೂ ಇಂಥ ಕೆಲಸ ಮಾಡಬಾರದು. ಯಾರದ್ದೇ ಸರ್ಕಾರ, ಮುಖ್ಯಮಂತ್ರಿ ಇದ್ದರೂ ಕಾನೂನಿನ ಒಳಗೆ ಇರಬೇಕು ಎಂದರು.
ಪುತ್ತೂರು ಘಟನೆ: ಹಲ್ಲೆ ಮಾಡುವ ಅಧಿಕಾರ ಪೊಲೀಸರಿಗಿಲ್ಲ, ಕೋಟ ಶ್ರೀನಿವಾಸ ಪೂಜಾರಿ
ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿಯಾದ್ರೆ ನಾವು ಬಿಡಲ್ಲ:
ಈ ಸರ್ಕಾರ ಹಿಂದೂ ವಿರೋಧಿಯಾದ್ರೆ ನಾವು ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡಿದ ಯತ್ನಾಳರು. ನಾನು ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನದ ಅಪೇಕ್ಷೆ ಮಾಡಿಲ್ಲ ಪಕ್ಷ ಒಂದಾಗಬೇಕು, ಪಕ್ಷದಿಂದ ದೂರವಾದ ಒಳ್ಳೆಯ ಕಾರ್ಯಕರ್ತರು ಒಟ್ಟಾಗಬೇಕು ಇವರನ್ನೆಲ್ಲ ಮತ್ತೆ ಪ್ರೀತಿಯಿಂದ ಕರೆದುಕೊಂಡು ಪಕ್ಷ ಕಟ್ಟಬೇಕಿದೆ. ನಾನು ಬಿರುಕು ಉಂಟು ಮಾಡಲು ಬಂದಿಲ್ಲ, ಕಾರ್ಯಕರ್ತರ ಸೇರಿಸಲು ಬಂದಿದ್ದೇನೆ. ಈ ಘಟನೆಯಿಂದಾಗಿ ಅನ್ಯಾಯ ಆಗಿದೆ, ನಿರ್ಣಯದಿಂದ ಮನಸ್ಸಿಗೆ ನೋವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದಾರೆ ಈಗದು ಮುಗಿದುಹೋದ ಕತೆ. ಇದರ ಪರಿಣಾಮ ಏನಾಗಿದೆ ಎಂಬುದು ತಿಳಿದುಕೊಂಡು. ಸ್ವಪ್ರತಿಷ್ಠೆ ಬಿಟ್ಟು ನೋಡಬೇಕು. ಎಲ್ಲರೂ ಒಂದಾಗಿ ಹೋಗೋ ಹೊಸ ಸೂತ್ರ ಕಂಡು ಹಿಡಿಯಬೇಕು. ನಾನು ಪಕ್ಷದ ಪರ ಇರೋನು, ಆದರೆ ನನಗೆ ಮುಲಾಜಿಲ್ಲ. ಕಾರ್ಯಕರ್ತರು ಮತ್ತು ಹಿಂದುತ್ವದ ಪರ ನಾನು ಇರೋನು ನನಗೆ ಅವಕಾಶ ಕೊಟ್ಟರೆ ಪಕ್ಷವನ್ನ ಮತ್ತೆ ಪುನಶ್ಚೇತನ ಮಾಡ್ತೇನೆ ಎನ್ನುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದು ಸೂಚ್ಯವಾಗಿ ತಿಳಿಸಿದರು.