ನಟ ವಿಜಯ್ ಮುಂದಿನ ನಡೆ ಏನು? ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರೆ ತಮಿಳುನಾಡಲ್ಲಿ ಮುಂದೆ ಏನಾಗಬಹುದು?

Published : May 04, 2026, 03:18 PM IST
Vijay political party TVK

ಸಾರಾಂಶ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಸುಮಾರು 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿದೆ. ಸ್ಪಷ್ಟ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಕೆಲವೇ ಸ್ಥಾನಗಳ ಕೊರತೆಯಿಂದಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮೈತ್ರಿ ರಾಜಕೀಯ ಮತ್ತು ಸರ್ಕಾರ ರಚನೆಯ ಕಸರತ್ತುಗಳು ತೀವ್ರಗೊಂಡಿವೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಯಾರೂ ಊಹಿಸದ ಬೆಳವಣಿಗೆ ಆಗಿದೆ. ಪಕ್ಷ ಕಟ್ಟಿ ಮೊದಲ ಬಾರಿಗೆ ಗೆದ್ದು ಸೆಂಚುರಿ ಬಾರಿಸಿದೆ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ. ಈ ಅಚ್ಚರಿಯ ಮುನ್ನಡೆ ಸಾಧಿಸಿ ರಾಜ್ಯ ರಾಜಕೀಯದಲ್ಲಿ ಹೊಸ ಶರಾ ಬರೆಯಲು ಮುಂದಾಗಿದೆ. ಮೊದಲ ಬಾರಿಗೆ ಚುನಾವಣೆಗೆ ಕಣಕ್ಕಿಳಿದಿರುವ ಟಿವಿಕೆ ಸುಮಾರು 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದು ಗಮನಾರ್ಹ. ಆದರೆ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ಸಂಖ್ಯೆ 118 ಆಗಿರುವುದರಿಂದ, ಇನ್ನೂ ಕೆಲವು ಸ್ಥಾನಗಳು ವಿಜಯ್ ಗೆ ಸ್ಪಷ್ಟ ಬಹುಮತಕ್ಕೆ ಬೇಕು. ಹೀಗಾಗಿ ಸಣ್ಣಪುಟ್ಟ ಪಕ್ಷಗಳತ್ತ ವಿಜಯ್ ದೃಷ್ಠಿ ನೆಟ್ಟಿದೆ.

ಅತಂತ್ರ ವಿಧಾನಸಭೆ ಸಾಧ್ಯತೆ

ಒಟ್ಟು 234 ಸದಸ್ಯರ ವಿಧಾನಸಭೆಯಲ್ಲಿ, ಯಾವುದೇ ಪಕ್ಷವು 118 ಸ್ಥಾನಗಳನ್ನು ಗೆದ್ದರೆ ಮಾತ್ರ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಬಹುದು. ಆದರೆ ಒಂದು ಪಕ್ಷಕ್ಕೂ ಈ ಗಡಿ ತಲುಪದಿದ್ದರೆ, ಅದನ್ನು ‘ಅತಂತ್ರ ವಿಧಾನಸಭೆ’ (Hung Assembly) ಎಂದು ಕರೆಯಲಾಗುತ್ತದೆ. ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, ಟಿವಿಕೆ ಬಹುಮತದ ಅಂಚಿನಲ್ಲಿ ಇದ್ದು, ಅಂತಿಮ ಫಲಿತಾಂಶದ ಮೇಲೆ ಅತಂತ್ರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.

ರಾಜ್ಯಪಾಲರ ಪಾತ್ರ ಮಹತ್ವದದ್ದು

ಇಂತಹ ಪರಿಸ್ಥಿತಿಯಲ್ಲಿ ರಾಜ್ಯಪಾಲರ ಪಾತ್ರ ಅತ್ಯಂತ ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಅತಿದೊಡ್ಡ ಪಕ್ಷದ ನಾಯಕನನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸುತ್ತಾರೆ. ಸರ್ಕಾರ ರಚಿಸಲು ಅಗತ್ಯವಾದ ಬೆಂಬಲವಿದೆ ಎಂದು ತೋರಿಸಲು, ಪಕ್ಷದ ನಾಯಕನು ಕನಿಷ್ಠ 118 ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ಪತ್ರದ ಮೂಲಕ ತಿಳಿಸಬೇಕು. ಟಿವಿಕೆ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದರಿಂದ, ಸರ್ಕಾರ ರಚಿಸಲು ಇನ್ನೂ ಕನಿಷ್ಠ 8 ಶಾಸಕರ ಬೆಂಬಲ ಅಗತ್ಯವಾಗುತ್ತದೆ. ಈ ಬೆಂಬಲವನ್ನು ಸ್ವತಂತ್ರ ಅಭ್ಯರ್ಥಿಗಳು ಅಥವಾ ಇತರ ಪಕ್ಷಗಳಿಂದ ಪಡೆಯಬೇಕಾಗುತ್ತದೆ.

ಮೈತ್ರಿ ರಾಜಕೀಯಕ್ಕೆ ವೇದಿಕೆ ಸಿದ್ಧ

ಟಿವಿಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರಸ್ತುತ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪ್ರಮುಖ ಪಾತ್ರವಹಿಸಬಹುದು. ಟಿವಿಕೆ–ಎಐಎಡಿಎಂಕೆ ಮೈತ್ರಿ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಎಐಎಡಿಎಂಕೆ ಬೆಂಬಲ ನೀಡುತ್ತದೆಯೇ ಅಥವಾ ಮೈತ್ರಿಕೂಟಕ್ಕೆ ಸೇರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೇ ವೇಳೆ, ಡಿಎಂಕೆ ಕೂಡ ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಇತರ ಮಿತ್ರಪಕ್ಷಗಳೊಂದಿಗೆ ಪರ್ಯಾಯ ಮೈತ್ರಿ ರೂಪಿಸಲು ಪ್ರಯತ್ನಿಸಬಹುದು. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಶಾಸಕರ ಬೆಂಬಲವೂ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಬಹುದು.

ಸಮ್ಮಿಶ್ರ ಸರ್ಕಾರದ ಸಾಧ್ಯತೆ

ಯಾವುದೇ ಒಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿದ್ದರೆ, ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ಹಂಚಿಕೆ, ಅಧಿಕಾರ ಹಂಚಿಕೆ ಮುಂತಾದ ರಾಜಕೀಯ ಮಾತುಕತೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ. ಅಥವಾ ಡಿಎಂಕೆ ಮತ್ತು ಎಐಡಿಎಂಕೆಗೆ ಬೆಂಬಲ ಸೂಚಿಸಿರುವ ಪ್ರಾದೇಶಿಕ ಪಕ್ಷಗಳಲ್ಲಿ ಗೆದ್ದ ಅಭ್ಯರ್ಥಿಗಳನ್ನು ವಿಜಯ್ ಸೆಳೆಯುವ ಪ್ರಯತ್ನ ಮಾಡಬಹುದು. ಮೈತ್ರಿಕೂಟದ ಅಭ್ಯರ್ಥಿಗಳು ಸಹಾಯಕ್ಕೆ ಬಂದರೆ ವಿಜಯ್ ಗೆ ಸ್ಪಷ್ಟ ಸರ್ಕಾರ ರಚನೆ ಮಾಡಬಹುದು.

ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ?

ಯಾವುದೇ ಪಕ್ಷ ಅಥವಾ ಮೈತ್ರಿಕೂಟವೂ ಬಹುಮತವನ್ನು ಸಾಬೀತುಪಡಿಸಲು ವಿಫಲವಾದರೆ, ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ಆರು ತಿಂಗಳೊಳಗೆ ಹೊಸ ಚುನಾವಣೆಯನ್ನು ನಡೆಸುವ ಸಾಧ್ಯತೆಯೂ ಇರುತ್ತದೆ.

ಪ್ರಸ್ತುತ ಟ್ರೆಂಡ್‌ಗಳು ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸೂಚನೆ ನೀಡುತ್ತಿದ್ದು, ಟಿವಿಕೆ ಪಕ್ಷ ಬಹುಮತದ ಅಂಚಿನಲ್ಲಿ ನಿಂತಿದೆ. ಅಂತಿಮ ಫಲಿತಾಂಶಗಳು ಹೊರಬಂದ ನಂತರ ಮಾತ್ರ ಸರ್ಕಾರ ರಚನೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಇತ್ತ ರಾಜಕೀಯ ಕಸರತ್ತುಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಎಲ್ಲರ ಗಮನ ಇದೀಗ ಅಂತಿಮ ಸಂಖ್ಯೆಗಳತ್ತ ಕೇಂದ್ರೀಕೃತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mamata Banerjee: ಕಾಳಿ ಮಾತೆ ಮುಂದೆ ನಿಂತಿದ್ರೂ, ನಿಮ್ಮನ್ನು ಕೋಳಿ ತರ ಸೋಲಿಸಿದ್ರು: ಒಳ್ಳೆ ಹುಡುಗ ಪ್ರಥಮ್
ದಾವಣಗೆರೆಯಲ್ಲಿ ಸಮರ್ಥ ಶಾಮನೂರು ಬಹುತೇಕ ಗೆಲುವು: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ, ಬಿಜೆಪಿ ಪಾಳಯದಲ್ಲಿ ಕಣ್ಣೀರು!