Eagleton Resort ಬಗ್ಗೆ ಸಿದ್ದು-ಎಚ್‌ಡಿಕೆ ವಾಗ್ಯುದ್ಧ

By Girish GoudarFirst Published Mar 11, 2022, 7:50 AM IST
Highlights

*  ಬಜೆಟ್‌ ಮೇಲಿನ ಚರ್ಚೆ ವೇಳೆ ರೆಸಾರ್ಟ್‌ನ ಗೋಲ್ಮಾಲ್‌ ಬಗ್ಗೆ ಮಾಜಿ ಸಿಎಂಗಳ ಜಟಾಪಟಿ
*  ಪರ್ಸೆಂಟೇಜ್‌ ತೆಗೆದುಕೊಂಡು ಮಾತಾಡುತ್ತಿದ್ದೀರಿ ಎಂದು ಸಿದ್ದು ಆರೋಪ; ತೀವ್ರ ಗದ್ದಲ
*  ಈಗಲ್ಟನ್‌ ವಿಚಾರ ಚರ್ಚಿಸಿ ತೀರ್ಮಾನ: ಸಿಎಂ
 

ಬೆಂಗಳೂರು(ಮಾ.11): ನಗರದ ಹೊರವಲಯದಲ್ಲಿನ ಈಗಲ್ಟನ್‌ ರೆಸಾರ್ಟ್‌ಗೆ(Eagleton Resort) ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ನಡುವೆ ತೀವ್ರ ವಾಗ್ಯುದ್ಧ ನಡೆಯಿತು. ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಕುಮಾರಸ್ವಾಮಿ ಒತ್ತಾಯಿಸಿದರೆ, ಈಗಲ್ಟನ್‌ ರೆಸಾರ್ಟ್‌ನಿಂದ ಪರ್ಸೆಂಟೇಜ್‌ ತೆಗೆದುಕೊಂಡು ಅವರ ಪರ ಮಾತನಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಗುರುವಾರ ಬಜೆಟ್‌(Karnataka Budget) ಮೇಲಿನ ಚರ್ಚೆ ವೇಳೆ ಈಗಲ್ಟನ್‌ ರೆಸಾರ್ಟ್‌ ಒತ್ತುವರಿ ವಿಚಾರ ಸಂಬಂಧ ನ್ಯಾಯಾಲಯದ(Court) ಆದೇಶ ಹಾಗೂ ಅವ್ಯವಹಾರದ ಬಗ್ಗೆ ಕುಮಾರಸ್ವಾಮಿ ವಿಸ್ತೃತವಾಗಿ ಮಾತನಾಡಿದರು. ಆಗ ಕಾಂಗ್ರೆಸ್‌ನ ಯು.ಟಿ.ಖಾದರ್‌(UT Khader) ಅವರು ನೀವು ಮುಖ್ಯಮಂತ್ರಿಯಾಗಿದ್ದ ವೇಳೆ ಸಮಸ್ಯೆ ಬಗೆಹರಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಕುಮಾರಸ್ವಾಮಿ, ‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಮುಂದೆ ಈ ವಿಚಾರ ಬಂದಿಲ್ಲ. ಬಂದಿದ್ದರೆ ಅಧಿಕಾರ ಕಳೆದುಕೊಂಡರೂ ಇದಕ್ಕೆ ನ್ಯಾಯ ಒದಗಿಸುತ್ತಿದ್ದೆ’ ಎಂದರು.

Latest Videos

Five State Election Result: ಹುಮ್ಮಸ್ಸಿನಲ್ಲಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಪಂಚರಾಜ್ಯ ಶಾಕ್‌..!

ಆಗ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬರಬೇಕಾ? ರಾಮನಗರ ಪ್ರತಿನಿಧಿಸುತ್ತಿದ್ದೀರಾ, ನೀವು ಯಾಕೆ ತೀರ್ಮಾನ ಕೈಗೊಂಡಿಲ್ಲ? ಪ್ರತಿಪಕ್ಷದಲ್ಲಿದ್ದಾಗ ಪ್ರಸ್ತಾಪ ಮಾಡಲಿಲ್ಲ, ಮುಖ್ಯಮಂತ್ರಿಯಾಗಿದ್ದಾಗ ಏನೂ ಮಾಡಲಿಲ್ಲ. ನಾಲ್ಕು ವರ್ಷದ ಬಳಿಕ ಈಗ ಪ್ರಸ್ತಾಪಿಸುತ್ತಿದ್ದೀರಿ. ಚುನಾವಣಾ ವರ್ಷ ಎನ್ನುವ ಕಾರಣಕ್ಕೆ ಪ್ರಸ್ತಾಪಿಸುತ್ತಿದ್ದೀರಾ? ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ರಾಜಕಾರಣಕ್ಕಾಗಿ(Politics) ಏನೋ ಮಾತನಾಡಬೇಕು ಎನ್ನುವ ಕಾರಣಕ್ಕಾಗಿ ಮಾತನಾಡಬಾರದು. ಇದು ಒಳ್ಳೆಯದಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದು ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಮತ್ತೆ ಮಾತು ಮುಂದುವರೆಸಿದ ಕುಮಾರಸ್ವಾಮಿ, ಆಗ ನನಗೆ ಮಾಹಿತಿ ಇರಲಿಲ್ಲ. ಮಾಧ್ಯಮವೊಂದರಲ್ಲಿ ಬಂದ ವರದಿ ಗಮನಿಸಿದ ಬಳಿಕ ವಿಚಾರ ತಿಳಿದುಕೊಂಡು ಪ್ರಸ್ತಾಪಿಸುತ್ತಿದ್ದೇನೆ. ಕೇವಲ ರಾಮನಗರವಲ್ಲ, ರಾಜ್ಯವನ್ನು ಸಹ ಪ್ರತಿನಿಧಿಸುತ್ತಿದ್ದೇನೆ. ಸಮಸ್ಯೆ ಗಮನಕ್ಕೆ ಬಂದ ಬಳಿಕ ಪ್ರಸ್ತಾಪಿಸುವುದು ನನ್ನ ಕರ್ತವ್ಯ ಎಂದು ಹೇಳಿದರು. ಈ ನಡುವೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದರು. ಮುಖ್ಯಮಂತ್ರಿಗಳ ಮಾತಿನ ನಂತರವೂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಮಾತಿನ ಜಟಾಪಟಿ ಮುಂದುವರಿಯಿತು. ಕೊನೆಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಹೇಳಿ ಮಾತು ಮುಗಿಸಿದರು.

ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮಾನ ಮನಸ್ಕರ ವೇದಿಕೆ ಉದಯ

ಎಚ್‌ಡಿಕೆ, ಸಿದ್ದು ಏಟು, ಎದಿರೇಟು

ಎಚ್‌ಡಿಕೆ : ಕರ್ನಾಟಕ ಸರ್ಕಾರದ ಭೂಮಿಯನ್ನು ನಿಷ್ಠೆಯಿಂದ ಉಳಿಸಿದೆ ಎನ್ನುವುದಾದರೆ ಇವರಿಗೆ ಭಾರತ ರತ್ನಕ್ಕೆ ಶಿಫಾರಸು ಮಾಡಿ.
ಸಿದ್ದರಾಮಯ್ಯ: ರಾಜಕೀಯ ಭಾಷಣ ಮಾಡೋಕೆ ನಮಗೂ ಬರುತ್ತದೆ. ಭಾರತ ರತ್ನ ನಿಮಗೆ ಕೊಡೋಣ.
ಎಚ್‌ಡಿಕೆ: ನಾವು ಸಾಧನೆ ಮಾಡಿಲ್ಲ, ನಮಗೇಕೆ.. ನೀವು ತಾನೇ ಹೇಳುತ್ತಿರೋದು.
ಸಿದ್ದರಾಮಯ್ಯ: ಬೇರೆಯವರು ಪರ್ಸೆಂಟೇಜ್‌ ತಗೋತಾರೆ. ನೀವು ಏನು ತೆಗೆದುಕೊಳ್ಳುತ್ತಿರುವುದು. ಈಗಲ್‌ಟನ್‌ ಪರವಾಗಿ ಮಾತನಾಡುತ್ತಿದ್ದೀರಿ.
ಎಚ್‌ಡಿಕೆ : ಮಾನವೀಯತೆಯ ಪರ್ಸೆಂಟೇಜ್‌... ತಾಯಿ ಹೃದಯದ ಪರ್ಸೆಂಟೇಜ್‌.. (ಎದೆ ತಟ್ಟಿಹೇಳಿದರು)
ಸಿದ್ದರಾಮಯ್ಯ: ನಾವು ಎದೆತಟ್ಟಿಹೇಳುತ್ತೇವೆ, ನಾವು ಪ್ರಾಮಾಣಿಕವಾಗಿದ್ದೇವೆ. ಸರ್ಕಾರ ತೀರ್ಮಾನಿಸಲಿ.
ಎಚ್‌ಡಿಕೆ : ನಾನು ನನ್ನ ಸಹಿ ಮಾರಾಟ ಮಾಡಿಲ್ಲ.
ಸಿದ್ದರಾಮಯ್ಯ : ತನಿಖೆ ನಡೆಸಲಿ, ಯಾರು ಪರ್ಸೆಂಟೇಜ್‌ ತೆಗೆದುಕೊಂಡಿದ್ದಾರೆ ಗೊತ್ತಾಗುತ್ತದೆ.
ಎಚ್‌ಡಿಕೆ : ಮಾಡಲಿ.. ಇದು ತೀರ್ಮಾನವೇ.. 980 ಕೋಟಿ ರು.ಗೆ ಚಿತ್ರಹಿಂಸೆ ಕೊಟ್ಟಿದ್ದು.
ಸಿದ್ದರಾಮಯ್ಯ : ಪ್ರತಿ ಸರ್ಕಾರದ ಅವಧಿಯಲ್ಲಿಯೂ ಗುತ್ತಿಗೆ ನೀಡಲಾಗುತ್ತದೆ. ಈಗಲ್‌ಟನ್‌ ಪರ ವಕಾಲತ್ತು ಮಾಡುತ್ತಿದ್ದೀರಿ. ಅಕ್ರಮಗಳಾಗಿದ್ದರೆ ಸರ್ಕಾರ ತನಿಖೆ ಮಾಡಲಿ. ಬಜೆಟ್‌ಗೂ ಇದಕ್ಕೂ ಏನು ಸಂಬಂಧ?
ಎಚ್‌ಡಿಕೆ : ಬಜೆಟ್‌ಗೂ, ಇದಕ್ಕೂ ಸಂಬಂಧ ಇಲ್ವಾ? ವಿಷಯ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಪ್ರಸ್ತಾಪಿಸುತ್ತಿದ್ದೇನೆ.

ಈಗಲ್ಟನ್‌ ವಿಚಾರ ಚರ್ಚಿಸಿ ತೀರ್ಮಾನ : ಸಿಎಂ

ಈಗಲ್ಟನ್‌ ರೆಸಾರ್ಟ್‌ ಭೂ ಕಬಳಿಕೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿರುವ ವೇಳೆ ಸರ್ಕಾರ ಮಧ್ಯಪ್ರವೇಶ ಮಾಡಬೇಕೇ, ಬೇಡವೇ ಎಂಬುದರ ಬಗ್ಗೆ ಕಾನೂನು ಇಲಾಖೆ, ಅಡ್ವೋಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಗುರುವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯುತ್ತಿದ್ದ ವೇಳೆ ಅವರು ಸ್ಪಷ್ಟನೆ ನೀಡಿದರು.
 

click me!