* ಪಾದಯಾತ್ರೆ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ
* ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದ ರಾಜ್ಯ ನಾಯಕರು
* ನಾಯಕತ್ವ ಗೊಂದಲ ಬಗೆಹರಿಸಿಕೊಂಡು ಸಂಘಟಿತ ಯತ್ನ ನಡೆಸದಿದ್ದರೆ ಗೆಲುವು ಕಷ್ಟ
ಎಸ್.ಗಿರೀಶ್‌ಬಾಬು
ಬೆಂಗಳೂರು(ಮಾ.11): ಪಾದಯಾತ್ರೆಯಂತಹ(Padayatra) ಆಂದೋಲನಗಳು ಹಾಗೂ ಬಿಜೆಪಿ ಸರ್ಕಾರದ(BJP Government)ವೈಫಲ್ಯ ಮುಂದಿಟ್ಟುಕೊಂಡು ಸಾರ್ವತ್ರಿಕ ಚುನಾವಣೆಗೆ(General Election) ಭರ್ಜರಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ನ ಹುಮ್ಮಸ್ಸಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ಕೊಂಚ ಶಾಕ್ ನೀಡಿದೆ. ಅತಿ ಆತ್ಮವಿಶ್ವಾಸ ಬೇಡ ಎಂಬ ಕಿವಿ ಮಾತು ಹೇಳಿದೆ. ಮುಖ್ಯವಾಗಿ, ನಾಯಕತ್ವ ಸೇರಿದಂತೆ ಪಕ್ಷವನ್ನು ಕಾಡುತ್ತಿರುವ ಗೊಂದಲಗಳನ್ನು ಬಗೆಹರಿಸಿಕೊಂಡು ಸಂಘಟಿತ ಪ್ರಯತ್ನ ನಡೆಸದಿದ್ದರೆ ಕಷ್ಟಎಂಬ ಸ್ಪಷ್ಟ ಸಂದೇಶವನ್ನು ಈ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ನೀಡಿದೆ.
ಜತೆಗೆ, ಸಂಘಟನೆಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಧಾನ ದ್ರೋಹ, ನಾಯಕತ್ವ ಒಳ ಜಗಳ ವಿಚಾರದಲ್ಲಿ ಮುಗುಂ ಆಗಿ ಉಳಿಯುವ ಧೋರಣೆ, ಪರೀಕ್ಷಿತ ನಾಯಕತ್ವ ಕುರಿತ ಅಸೀಮ ನಿರ್ಲಕ್ಷ್ಯ ಹಾಗೂ ರಾಜ್ಯದ ನಾಯಕರು ತಮ್ಮ ಸಾಮಂತರು ಎಂಬಂತೆ ನಡೆಸಿಕೊಳ್ಳುವ ಕಾಂಗ್ರೆಸ್(Congress) ಹೈಕಮಾಂಡ್‌ನ ಧೋರಣೆ ಬದಲಾಗಬೇಕು ಎಂಬ ಕೂಗು ರಾಜ್ಯ ಕಾಂಗ್ರೆಸ್‌ನಲ್ಲಿ ಜೋರಾಗುವುದಕ್ಕೂ ಈ ಫಲಿತಾಂಶ ಪ್ರೇರಣೆ ನೀಡಿದೆ.
ದೇಶ, ರಾಜ್ಯವನ್ನು ಆರ್ಥಿಕ ದಿವಾಳಿಯಾಗಿಸಿದ ಬಿಜೆಪಿ ಸರ್ಕಾರ, Siddaramaiah ಟೀಕೆ
ಸಾರ್ವತ್ರಿಕ ಚುನಾವಣೆ ದೂರವಿದ್ದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಚುನಾವಣೆ ಸಿದ್ಧತೆಯನ್ನು ಭರ್ಜರಿಯಾಗಿ ಆರಂಭಿಸಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳಿಂದಾಗಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಹುಟ್ಟುತ್ತಿದೆ ಅಥವಾ ನಾವೇ ಹುಟ್ಟು ಹಾಕುತ್ತೇವೆ ಎಂದು ಕಾಂಗ್ರೆಸ್ ರಸ್ತೆಗೆ ಇಳಿದು ಹೋರಾಟ ಆರಂಭಿಸಿದೆ.
ಇದರಿಂದ ಸಂಚಲನ ನಿರ್ಮಾಣವಾಗಿ ಕಾರ್ಯಕರ್ತರದಲ್ಲಿ ಹೊಸ ಹುಮ್ಮಸ್ಸು ಬಂದಿದ್ದು ನಿಜ. ಪರಿಣಾಮವಾಗಿ ಬಿಜೆಪಿ, ಜೆಡಿಎಸ್(JDS) ಸೇರಿದಂತೆ ವಿಭಿನ್ನ ರಾಜಕೀಯ ನೆಲೆಯಲ್ಲಿ ಇದ್ದ ಹಲವು ಪ್ರಮುಖ ನಾಯಕರು ಕಾಂಗ್ರೆಸ್‌ನತ್ತ ಆಕರ್ಷಿತರಾಗತೊಡಗಿದ್ದರು. ಕೆಲವರು ಈಗಲೇ ಪಕ್ಷ ಸೇರಿದ್ದರೆ ಮತ್ತೆ ಕೆಲವರು ಸದ್ಯ ತಾವು ಅನುಭವಿಸುತ್ತಿರುವ ಅಧಿಕಾರ ಸವಿದಾದ ಮೇಲೆ ಕಾಂಗ್ರೆಸ್‌ಗೆ ಬರುವ ವಾಗ್ದಾನ ನೀಡಿದ್ದರು. ಕಾಂಗ್ರೆಸ್ ತೆಕ್ಕೆಯಿಂದ ಬಿಜೆಪಿ ಸೇರಿ ಸರ್ಕಾರ ನಿರ್ಮಾಣವಾಗಲು ಕಾರಣರಾದವರೂ ಸಹ ಕಾಂಗ್ರೆಸ್ ನಾಯಕರೊಂದಿಗೆ ಒಳ್ಳೆ ಸಂಬಂಧ ಕಾಯ್ದುಕೊಳ್ಳತೊಡಗಿದ್ದರು.
ತನ್ಮೂಲಕ ನಾಯಕತ್ವ ಕುರಿತು ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣಗಳ ನಡುವೆ ಆಂತರಿಕವಾಗಿ ತೀವ್ರ ಸೆಣಸಾಟವಿದ್ದರೂ ಸಹ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಸರಿಯಾದ ಹಾದಿಯಲ್ಲೇ ಹೆಜ್ಜೆ ಇಟ್ಟಿತ್ತು. ಇದೇ ವೇಳೆಗೆ ಬಂದ ಪಂಚರಾಜ್ಯ ಚುನಾವಣಾ ಫಲಿತಾಂಶ ಎಲ್ಲವೂ ಅಂದುಕೊಂಡಷ್ಟುಸುಲಭವಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ಸಿಗರಿಗೆ ನೀಡಿದೆ. ಏಕೆಂದರೆ, ಪಕ್ಷದತ್ತ ವಾಲುತ್ತಿದ್ದ ಅನ್ಯ ಪಕ್ಷಗಳ ನಾಯಕರಿಗೆ ಈ ಫಲಿತಾಂಶ ಮರು ಚಿಂತನೆ ಮಾಡುವಂತೆ ಪ್ರೇರೇಪಿಸುವ ಸಾಧ್ಯತೆಯಿದೆ.
ಜತೆಗೆ, ಪಕ್ಷ ಸಂಘಟನೆ ಹಾಗೂ ನಾಯಕತ್ವಕ್ಕೆ ಸಂಬಂಧಿಸಿದ ಗೊಂದಲಗಳನ್ನು ಬಗೆಹರಿಸುವ ದಿಸೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತ್ವರಿತ ನಿರ್ಧಾರ ಕೈಗೊಳ್ಳದಿರುವ ಬಗ್ಗೆ ರಾಜ್ಯ ನಾಯಕರಲ್ಲಿ ತೀವ್ರ ಆಕ್ಷೇಪಣೆಗಳಿವೆ. ರಾಜ್ಯ ಕಾಂಗ್ರೆಸ್ ಸಮಿತಿಯು ಕಳೆದ ಮೂರು ವರ್ಷದಿಂದ ಪದಾಧಿಕಾರಿಗಳಲ್ಲದೆ ಕೆಲಸ ಮಾಡುತ್ತಿದೆ. ಅಧ್ಯಕ್ಷ, ಐವರು ಕಾರ್ಯಾಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರು ಮಾತ್ರ ಪಕ್ಷ ಸಂಘಟನೆಯಲ್ಲಿದ್ದಾರೆ. ಉಳಿದ ಎಲ್ಲ ಸ್ಥಾನಗಳು ಖಾಲಿ ಇವೆ. ರಾಜ್ಯ ನಾಯಕರು ಪಟ್ಟಿಯನ್ನು ಕಳುಹಿಸಿದ್ದರೂ ಪಟ್ಟಿಪರಿಷ್ಕರಿಸುವ ದಿಸೆಯಲ್ಲಿ ಹೈಕಮಾಂಡ್ ಕ್ರಮ ಕೈಗೊಳ್ಳುತ್ತಿಲ್ಲ.
Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು
ಬಣ ರಾಜಕಾರಣವನ್ನು(Politics) ಬದಿಗೊತ್ತುವ ಹಾಗೂ ನಾಯಕತ್ವದ(Leadership) ಪ್ರಶ್ನೆಯನ್ನು ಬಗೆಹರಿಸುವ ದಿಸೆಯಲ್ಲೂ ಹೈಕಮಾಂಡ್ ಗಟ್ಟಿತನ ತೋರುತ್ತಿಲ್ಲ. ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳಿಕೊಳ್ಳುವ ನಾಯಕರನ್ನು ಮುಖಾಮುಖಿ ಕೂರಿಸಿ ಮಾತನಾಡುವ ಕಾರ್ಯವನ್ನು ಹೈಕಮಾಂಡ್ ಇದುವರೆಗೂ ಮಾಡಿಲ್ಲ. ಇದನ್ನು ಮಾಡದೇ ರಾಜ್ಯ ಕಾಂಗ್ರೆಸ್ ಸಮಸ್ಯೆಗಳು ಬಗೆಹರಿಯಲು ಸಾಧ್ಯವೇ ಇಲ್ಲ. ಆದರೆ, ಹೈಕಮಾಂಡ್ ಈ ಗಟ್ಟಿತನ ತೋರುತ್ತಿಲ್ಲ ಎಂದು ದೂರುತ್ತಾರೆ ರಾಜ್ಯ ನಾಯಕರು.
ಇನ್ನು ಹೈಕಮಾಂಡ್‌ನಲ್ಲಿ ಬೇರು ಬಿಟ್ಟಿರುವ ಪ್ರಧಾನ ಕಾರ್ಯದರ್ಶಿ ಸ್ಥಾನದ ಕೆಲ ನಾಯಕರು ರಾಜ್ಯ ಮಟ್ಟದ ನಾಯಕರನ್ನು ತಮ್ಮ ಸಾಮಂತರು ಎಂಬಂತೆ ನಡೆಸಿಕೊಳ್ಳುತ್ತಾರೆ ಎಂದು ಖುದ್ದು ಕಾಂಗ್ರೆಸ್‌ನ ಉನ್ನತ ನಾಯಕರೊಬ್ಬರು ದೂರುತ್ತಾರೆ. ಈ ಧೋರಣೆ ಬಿಟ್ಟು ಪ್ರೊಫೆಷನಲ್ ಆಗಿ ನಡೆದುಕೊಳ್ಳದಿದ್ದರೆ ಬಿಜೆಪಿ ಹಾಕುತ್ತಿರುವ ಪಟ್ಟುಗಳ ಎದುರು ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಅವರು ಎಚ್ಚರಿಸುತ್ತಾರೆ.