ಯುವ ಕಾಂಗ್ರೆಸ್‌ ವಕ್ತಾರರ ಶೋಧಕ್ಕೆ ದೇಶಾದ್ಯಂತ ‘ಟ್ಯಾಲೆಂಟ್‌ ಹಂಟ್‌’

By Kannadaprabha NewsFirst Published Sep 19, 2021, 7:15 AM IST
Highlights
  • ಶಿಫಾರಸು, ರಾಜಕೀಯ ಹಿನ್ನೆಲೆ ಇಲ್ಲದ ಪ್ರತಿಭಾವಂತ ಯುವಕರಿಗೆ ಪಕ್ಷದಲ್ಲಿ ವೇದಿಕೆ 
  •  ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಕಾಂಗ್ರೆಸ್‌ ಮುಂದಾಗಿದೆ

  ಬೆಂಗಳೂರು (ಸೆ.19):  ಶಿಫಾರಸು, ರಾಜಕೀಯ ಹಿನ್ನೆಲೆ ಇಲ್ಲದ ಪ್ರತಿಭಾವಂತ ಯುವಕರಿಗೆ ಪಕ್ಷದಲ್ಲಿ ವೇದಿಕೆ ಕಲ್ಪಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಕಾಂಗ್ರೆಸ್‌ ಮುಂದಾಗಿದೆ. ಇದಕ್ಕಾಗಿ ದೇಶಾದ್ಯಂತ ‘ಟ್ಯಾಲೆಂಟ್‌ ಹಂಟ್‌’ ಅಭಿಯಾನ ನಡೆಸಿ ಪ್ರತಿಭಾ ಶೋಧ ನಡೆಸಲಿದೆ. ವಿಜೇತರಿಗೆ ಯುವ ಕಾಂಗ್ರೆಸ್‌ನಲ್ಲಿ ಪ್ರಮುಖ ಜವಾಬ್ದಾರಿ ನೀಡಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್‌. ಶಂಕರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಯುವ ಕಾಂಗ್ರೆಸ್‌ಗೆ ಪಕ್ಷದಿಂದಲೇ ವಕ್ತಾರರನ್ನು ನೇಮಿಸಲಾಗುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ಈ ಸಂಪ್ರದಾಯ ಕೈಬಿಡಲಾಗಿದೆ. ನೈಜ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತದೆ. ಪಕ್ಷ ಸಂಘಟನೆಗೂ ಇದು ಪೂರಕವಾಗಲಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಸಿದ್ಧವಾಯ್ತು ಸಿದ್ದು-ಡಿಕೆಶಿ ಜೋಡೆತ್ತು ರಣವ್ಯೂಹ

ಆನ್‌ಲೈನ್‌ನಲ್ಲಿ ಆಶುಭಾಷಣ ಸ್ಪರ್ಧೆ ಏರ್ಪಡಿಸಲು ‘ಭಾರತದ ಯುವಧ್ವನಿ’ ಎಂಬ ಕಾರ್ಯಕ್ರಮ ಆರಂಭಿಸಲಾಗಿದ್ದು, ನೋಂದಣಿ ಆರಂಭವಾಗಿದೆ. ಯುವ ಕಾಂಗ್ರೆಸ್‌ ವಕ್ತಾರರನ್ನು ನೇಮಿಸಲು ದೇಶದ 600ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸ್ಪರ್ಧೆ ನಡೆಯಲಿದೆ. ನಂತರ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

ಎಲ್ಲ ರಾಜ್ಯಗಳ ವಕ್ತಾರರ ಸ್ಪರ್ಧೆ ನಡೆಸಿದ ನಂತರ ಮಾಜಿ ಪ್ರಧಾನಿ ದಿ.ಜವಾಹರ್‌ ಲಾಲ್‌ ನೆಹರು ಅವರ ಹುಟ್ಟುಹಬ್ಬವಾದ ನ.14ರಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರರ ಹುದ್ದೆಗೆ ಸ್ಪರ್ಧೆ ನಡೆಯಲಿದೆ. ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ಅವರ ಸಮ್ಮುಖದಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

ಶಿಫಾರಸು, ರಾಜಕೀಯ ಹಿನ್ನೆಲೆಗೆ ಕೊಕ್‌:

ದೇಶದಲ್ಲಿ ಯುವ ನಾಯಕತ್ವವನ್ನು ಮುನ್ನೆಲೆಗೆ ತರಬೇಕಿದೆ. ಶಿಫಾರಸು ಮಾಡಿಸುವವರನ್ನು ಬದಿಗಿಟ್ಟು, ರಾಜಕೀಯ ಹಿನ್ನೆಲೆ ಇಲ್ಲದ ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡುವ ಮೂಲಕ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದೇವೆ. ಇದೊಂದು ಹೊಸ ಪ್ರಯೋಗವೂ ಹೌದು ಎಂದು ತಿಳಿಸಿದರು.

ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಸುರಭಿ ದ್ವಿವೇದಿ ಮಾತನಾಡಿ, ಪಕ್ಷದಲ್ಲಿ ಕೆಲವು ಬದಲಾವಣೆ ತರಲಾಗುತ್ತಿದೆ. ಯುವ ನಾಯಕರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ರಾಜಕೀಯ ಹಿನ್ನೆಲೆ ಇಲ್ಲದವರಿಗಾಗಿ ಹುಡುಕಾಟ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರು, ಯುವ ಜನತೆಯ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಪ್ರಿತೇಶ್‌ ಶಾ ಮತ್ತಿತರರು ಉಪಸ್ಥಿತರಿದ್ದರು.

ಆಯ್ಕೆ ಪ್ರಕ್ರಿಯೆ ಹೇಗೆ ?

ನಿರುದ್ಯೋಗ, ಭಾರತದ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸವಾಲುಗಳು, ಕೋವಿಡ್‌ ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ಆನ್‌ಲೈನ್‌ನಲ್ಲಿ ಎರಡರಿಂದ ಮೂರು ನಿಮಿಷ ಮಾತನಾಡಬೇಕು. ಇದರಲ್ಲಿ ಆಯ್ಕೆಯಾದ ಐವರನ್ನು ಜಿಲ್ಲಾ ಮಟ್ಟದ ವಕ್ತಾರರನ್ನಾಗಿ ನೇಮಿಸಲಾಗುತ್ತದೆ. ಎಲ್ಲಾ ಜಿಲ್ಲೆಗಳ ವಕ್ತಾರರ ನಡುವೆ ಸ್ಪರ್ಧೆ ನಡೆಸಿ 10 ಮಂದಿಯನ್ನು ರಾಜ್ಯ ಮಟ್ಟದ ವಕ್ತಾರರನ್ನಾಗಿ ನೇಮಿಸಲಾಗುವುದು. ಎಲ್ಲ ರಾಜ್ಯಗಳ ವಕ್ತಾರರ ಸ್ಪರ್ಧೆ ಏರ್ಪಡಿಸಿ ಅವರಲ್ಲಿ ಐವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗುವುದು.

click me!