ಯಡಿಯೂರಪ್ಪ ಜತೆ ಇನ್ನೂ 3 ತಂಡಗಳಿಂದ ರಾಜ್ಯ ಪ್ರವಾಸ

By Kannadaprabha NewsFirst Published Sep 18, 2021, 9:18 AM IST
Highlights

*  ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ರಾಜ್ಯ ಪ್ರವಾಸ ಘೋಷಿಸಿದ್ದ ಬಿಎಸ್‌ವೈ
*  ಕಟೀಲ್‌ ಕೂಡ ಪ್ರವಾಸದಲ್ಲಿ ಭಾಗಿಯಾಗಲಿ ಎಂದು ಸೂಚಿಸಿದ್ದ ವರಿಷ್ಠರು
*  ಮೂರೂ ಮಾಜಿ ಸಿಎಂಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಬಿಜೆಪಿ ನಿರ್ಧಾರ
 

ಬೆಂಗಳೂರು(ಸೆ.18): ಪ್ರಸಕ್ತ ವಿಧಾನಮಂಡಲದ ಅಧಿವೇಶನದ ಬಳಿಕ ಪಕ್ಷ ಸಂಘಟನೆ ಹೆಸರಲ್ಲಿ ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಮೂವರು ಮಾಜಿ ಮುಖ್ಯಮಂತ್ರಿಗಳು ನಾಲ್ಕು ತಂಡಗಳಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರವಾಸದ ಬಗ್ಗೆ ಇಂದು(ಶನಿವಾರ) ದಾವಣಗೆರೆಯಲ್ಲಿ ನಡೆಯಲಿರುವ ಪಕ್ಷದ ಕೋರ್‌ ಕಮಿಟಿ ಸಭೆ ಹಾಗೂ ಭಾನುವಾರ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರೂಪುರೇಷೆ ಸಿದ್ಧವಾಗಲಿದೆ. ಒಟ್ಟಿನಲ್ಲಿ ಅಧಿಕಾರದಿಂದ ದೂರ ಉಳಿದಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್‌ ಶೆಟ್ಟರ್‌ ಅವರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದರು. ಅದರಿಂದ ಪಕ್ಷದಲ್ಲಿ ತುಸು ಇರುಸುಮುರುಸು ಉಂಟಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರೊಬ್ಬರೇ ಪ್ರವಾಸ ಮಾಡುವುದು ಬೇಡ ಎಂಬ ನಿಲವಿಗೆ ಬಂದ ವರಿಷ್ಠರು, ಅವರೊಂದಿಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೂ ಪ್ರವಾಸ ಕೈಗೊಳ್ಳಬೇಕು ಎಂಬ ಸೂಚನೆ ನೀಡಿದರು. ಅದಕ್ಕೆ ಇದೀಗ ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್‌ ಶೆಟ್ಟರ್‌ ಸೇರ್ಪಡೆಯಾಗಿದ್ದಾರೆ.

ಏಕಕಾಲಕ್ಕೆ ಅಭಿವೃದ್ಧಿ, ಸುರಕ್ಷೆ, ಭವಿಷ್ಯ ರೂಪಿಸಿದ ನಾಯಕ

ಹೆಚ್ಚೂ ಕಡಮೆ ಮೂವರೂ ಮಾಜಿ ಮುಖ್ಯಮಂತ್ರಿಗಳು ಒಂದೇ ಸಮಯದಲ್ಲಿ ಅಧಿಕಾರದಿಂದ ದೂರ ಸರಿಯಬೇಕಾಯಿತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದರು. ಸದಾನಂದಗೌಡ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕೈಬಿಡಲಾಯಿತು. ತಮಗಿಂತ ಚಿಕ್ಕವರು ಮುಖ್ಯಮಂತ್ರಿ ಹುದ್ದೇಗೇರಿದರು ಎಂಬ ಕಾರಣಕ್ಕಾಗಿ ಸಚಿವರಾಗಿದ್ದ ಶೆಟ್ಟರ್‌ ಸಂಪುಟದಿಂದ ದೂರ ಉಳಿಯುವ ನಿಲುವು ಪ್ರಕಟಿಸಿದರು.
ಇದೀಗ ಈ ಮೂವರೂ ಮಾಜಿ ಮುಖ್ಯಮಂತ್ರಿಗಳನ್ನು ಅವರ ಪಾಡಿಗೆ ಬಿಡುವ ಬದಲು ಅವರನ್ನು ಪಕ್ಷದ ಸಂಘಟನೆ ತೆಕ್ಕೆಗೆ ತೆಗೆದುಕೊಂಡು ಸಂಘಟನೆಗಾಗಿ ಪ್ರವಾಸ ಹಮ್ಮಿಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ನಾಲ್ಕು ತಂಡಗಳಾಗಿ ಪ್ರವಾಸ- ಸಿದ್ದೇಶ್ವರ್‌:

ಶುಕ್ರವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್‌, ವಿಧಾನಸಭೆ ಅಧಿವೇಶನದ ನಂತರ ಯಡಿಯೂರಪ್ಪ ನೇತೃತ್ವದಲ್ಲಿ ನಾಲ್ಕು ತಂಡಗಳಾಗಿ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡಿ ಬಿಜೆಪಿ ಸಂಘಟಿಸಲಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದು ಯಾರೂ ಸಹ ಏನನ್ನೂ ಮಾತನಾಡದಂತಹ ನಾಯಕತ್ವ ಹೊಂದಿದ್ದಾರೆ. ಅಧಿವೇಶನದ ನಂತರ ನಾಲ್ಕು ತಂಡಗಳನ್ನು ಮಾಡಿ, ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಪಕ್ಷ ಸಂಘಟಿಸಲಿದ್ದಾರೆ ಎಂದರು.
 

click me!