ಸೂರತ್‌ನಲ್ಲಿ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿ ಗೆಲುವಿಗೆ ಕಾರಣನಾದ ಕಾಂಗ್ರೆಸ್ ಅಭ್ಯರ್ಥಿ ನಾಪತ್ತೆ

By Anusha KbFirst Published Apr 23, 2024, 2:31 PM IST
Highlights

ಗುಜರಾತ್‌ನ ಸೂರತ್‌ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕೃತಗೊಂಡ ಪರಿಣಾಮ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪರೋಕ್ಷ ಕಾರಣನಾದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ನಾಪತ್ತೆಯಾಗಿದ್ದಾರೆ. 

ಸೂರತ್: ಗುಜರಾತ್‌ನ ಸೂರತ್‌ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕೃತಗೊಂಡ ಪರಿಣಾಮ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪರೋಕ್ಷ ಕಾರಣನಾದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ನಾಪತ್ತೆಯಾಗಿದ್ದಾರೆ. ನಿಲೇಶ್‌ ಕುಂಭಾನಿ ಬಿಜೆಪಿ ಜೊತೆ ಕೈ ಜೋಡಿಸಿ ಈ ಕೆಲಸ ಮಾಡಿದ್ದಾರೆ. ಬಿಜೆಪಿ ಗೆಲುವಿಗೆ ಕಾರಣವಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ  ಕಾಂಗ್ರೆಸ್ ಕಾರ್ಯಕರ್ತರು ನಿಲೇಶ್ ಕುಂಭಾನಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ನಿಲೇಶ್ ಕುಂಭಾನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

ನಾಮಪತ್ರ ಸೂಚಕರ ಸಹಿ ನಕಲು ಮಾಡಲಾಗಿದೆ ಎಂದು ಕೆಲವು ಸೂಚಕರು ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ಮೊದಲೇ ಸೂರತ್ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾಗಿತ್ತು.  ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಆದರೆ ನಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಅವರೇ ಸ್ವತ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿಲೇಶ್ ಕುಂಭಾನಿ ಪೋನ್‌ ಕೂಡ ಸ್ವಿಚ್ ಆಫ್ ಆಗಿದ್ದು, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ನಿನ್ನೆ ನಿಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತಗೊಂಡ ನಂತರ ಬಿಜೆಪಿ ಹೊರತುಪಡಿಸಿ ಇತರ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ನಿಲೇಶ್ ಕುಂಭಾನಿ ಅವರು ಚುನಾವಣೆ ನಡೆಯುವುದಕ್ಕೂ ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದರು.

ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಭರ್ಜರಿ ಗೆಲುವು, ಸೂರತ್ ಅಭ್ಯರ್ಥಿ ಅವಿರೋಧ ಆಯ್ಕೆ!

ಇತ್ತ ನಿಲೇಶ್ ಕುಂಭಾನಿ ನಿವಾಸಕ್ಕೆ ಬೀಗ ಹಾಕಲಾಗಿದ್ದು, ಮನೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಜನರ ವಿಶ್ವಾಸಘಾತಕ ಎಂಬ ಪೋಸ್ಟರ್‌ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತ ಸೂರತ್‌ನಲ್ಲಿ ಚುನಾವಣೆಯಾಗುವುದಕ್ಕೂ ಮೊದಲೇ ಬಿಜೆಪಿ ಈ ರೀತಿಯಾಗಿ ಗೆಲುವಿನ ಪತಾಕೆ ಹಾರಿಸಿದ್ದು, ಮೊದಲ ಗೆಲುವು ದಾಖಲಿಸಿದೆ. 

ನಿನ್ನೆ ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ.ಆರ್ ಪಾಟೀಲ್ ಅವರು, ತಮ್ಮ ಸೂರತ್ ಅಭ್ಯರ್ಥಿ ಮುಕೇಶ್ ದಲಾಲ್ ಗೆಲುವಿನ ಬಗ್ಗೆ ಮಾತನಾಡಿ, ಸೂರತ್ ಕ್ಷೇತ್ರವೂ ಮೊದಲ ಕಮಲದ ಹೂವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುತ್ತಿದೆ.  ಅವಿರೋಧವಾಗಿ ಆಯ್ಕೆಯಾದ ಸೂರತ್ ಅಭ್ಯರ್ಥಿ,  ಮುಕೇಶ್ ದಲಾಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. 

ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಿಲೇಶ್ ಕುಂಭಾನಿ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಾಗಳು ಹಬ್ಬಿದ್ದು ಜನ  ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನ ಈ ವಿಶ್ವಾಸಘಾತಕ ನಡೆಯಿಂದ ತೀವ್ರ ಆಘಾತಗೊಂಡಿದ್ದಾರೆ.  ಜನರ ಪಾಲಿನ ವಿಶ್ವಾಸದ್ರೋಹಿ ಎಂದು ಪೋಸ್ಟರ್ ಹಿಡಿದು ನಿಲೇಶ್ ಮನೆ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ. 

ನಕಲಿ ಸಹಿ, ಸೂರತ್‌ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ: ಹೈಕೋರ್ಟ್‌ ಮೊರೆ ಹೋಗಲು ಕಾಂಗ್ರೆಸ್ ನಿರ್ಧಾರ

ಚುನಾವಣೆಯ ಮೇಲೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪ್ರಭಾವ ಬೀರುತ್ತಿದ್ದು, ಇಲ್ಲಿ ಚುನಾವಣಾ ಪ್ರಕ್ರಿಯೆ ಮರು ಸ್ಥಾಪಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ. ಈ ರೀತಿ ಪ್ರಭಾವದ ಲಾಭವನ್ನು ಯಾವುದೇ ರಾಜಕೀಯ ಪಕ್ಷ ಪಡೆಯಬಾರದು ಎಂಬ ಸ್ಪಷ್ಟ ಸಂದೇಶವನ್ನು ನೀಡುವುದಕ್ಕಾಗಿ ಸೂರತ್‌ನಲ್ಲಿ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ನಿನ್ನೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.

ನಿಲೇಶ್ ಅವರು ನಾಲ್ವರು ಸೂಚಕರ ಮೂಲಕ ನಾಮಪತ್ರ ಸಲ್ಲಿಸಿದ್ದರು. ಆದರೆ ಈ ನಾಲ್ವರು ಸೂಚಕರು ಒಮ್ಮಿಂದೊಮ್ಮೆಲೇ ತಾವು ಸಹಿ ಹಾಕಿಲ್ಲ ಎಂದು ತಿರುಗಿ ನಿಂತರು. ಇದು ಕಾಕಾತಾಳೀಯವಾಗಿ ನಡೆಯಲು ಸಾಧ್ಯವಿಲ್ಲ, ಅಲ್ಲದೇ ಅಭ್ಯರ್ಥಿ ಹಲವು ಗಂಟೆಗಳಿಂದ ನಾಪತ್ತೆಯಾಗಿದ್ದಾರೆ. ಅಲ್ಲದೇ ಸ್ವಲ್ಪ ಹೊತ್ತಿನಲ್ಲೇ ಇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. 

click me!