ದೊಡ್ಡ ಡೀಲಿಂಗ್‌ಮಾಸ್ಟರ್ ಎಂದ ಟ್ರೋಲರ್ಸ್‌ಗೆ ಚಳಿ ಬಿಡಿಸಿದ ಸಂಸದೆ ಸುಮಲತಾ ಅಂಬರೀಶ್‌

By Sathish Kumar KH  |  First Published May 22, 2023, 3:06 PM IST

ತಮ್ಮ ವಿರುದ್ಧ ಮಾಧ್ಯಮಗಳು ಹಾಗೂ ಟ್ರೋಲರ್ಸ್‌ಗಳು ಸುಳ್ಳು ಸುದ್ದಿ ಬಿಂಬಿಸುವುದು, ನಿಂದನೆ ಮಾಡಬಾರದು ಎಂದು ಸಂಸದೆ ಸುಮತಲಾ ಎಚ್ಚರಿಕೆ ನೀಡಿದ್ದಾರೆ.


ಬೆಂಗಳೂರು (ಮೇ 22): ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂಬಲ ಕೊಟ್ಟು ಪ್ರಚಾರ ಮಾಡಿದರೂ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರಿಂದ ಮಾಧ್ಯಮಗಳು ಮತ್ತು ಟ್ರೋಲರ್ಸ್‌ಗಳು ತಮ್ಮ ವಿರುದ್ಧ ಕಪೋಲಕಲ್ಪಿತ ವರದಿ ಮಾಡುತ್ತಿವೆ ಎಂದು ಹರಿಹಾಯ್ದಿದ್ದಾರೆ. ಜೊತೆಗೆ ಟ್ರೋಲರ್ಸ್‌ಗಳಿಗೆ ಭಾರಿ ತಿರುಗೇಟು ನೀಡಿದ್ದಾರೆ.

ಇನ್ನು ಮಂಡ್ಯದಲ್ಲಿ ಸ್ವಾಭಿಮಾನಿ ಅಲೆಯಲ್ಲಿ ಗೆದ್ದು ಸಂಸದೆಯಾದ ಸುಮಲತಾ ಅವರು ಪ್ರಧಾನಮಂತ್ರಿ ಮೋದಿ ನಾಯಕತ್ವ ನೋಡಿ ಬಿಜೆಪಿಗೆ ಬೆಂಬಲ ನೀಡಿದ್ದರು. ಮಂಡ್ಯದ 4 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳು ಹಾಗೂ ಮಾಧ್ಯಮಗಳಲ್ಲಿ ಅವರಿಗೆ ಹಿನ್ನಡೆಯಾಗಿದೆ ಎಂದು ಸುದ್ದಿ ಪ್ರಸಾರ ಮಾಡುತ್ತಿವೆ. ಇದಕ್ಕೆ  ಸಂಸದೆ ಸುಮಲತಾ ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್‌ ಮತ್ತು ಫೇಸ್‌ಬುಕ್‌ ಮೂಲಕ ತಿರುಗೇಟು ನೀಡಿದ್ದಾರೆ. ಕಪೋಕಲ್ಪಿತ ವರದಿ ಮಾಡುತ್ತಿರುವ ಕೆಲ ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ವರದಿಗೆ ಇದು ನನ್ನ ಪ್ರತ್ಯುತ್ತರ ಎಂದು ತಲೆಬರಹ ನೀಡಿದ್ದಾರೆ.

Tap to resize

Latest Videos

ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ: ಹಿಂದು ಹುಲಿ ಯತ್ನಾಳ್‌ ಘರ್ಜನೆ

ತಮ್ಮೆಲ್ಲರಿಗೂ ಗೊತ್ತಿರುವಂತೆ ನಾನು 10 ಮಾರ್ಚ್ 2023 ರಂದು ಪತ್ರಿಕಾಗೋಷ್ಠಿ ಕರೆದು ಬಿಜೆಪಿಗೆ ನನ್ನ ಬೆಂಬಲವನ್ನು ಘೋಚಿಸಿದ್ದೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಪಕ್ಷವು ಏಪ್ರಿಲ್ 18 ರಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಿತು.  ಪಕ್ಷವು ಘೋಷಣೆ ಮಾಡಿದ ನನ್ನ ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ಫಸ್ಟ್ ಟೈಮ್ ಚುನಾವಣೆ ಎದುರಿಸಿದವರು. ಆದರೂ ಎದುರಾಳಿಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ್ದಾರೆ. ಅಲ್ಲದೇ ಪ್ರಚಾರಕ್ಕೆ ನಮಗಿದ್ದದ್ದು ಎರಡ್ಮೂರು ವಾರಗಳಷ್ಟೇ ಸಮಯ. ಆದರೂ ಹೊಸ ಪಡೆಯನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದೇವೆ. ಪರಿಣಾಮ ಮೊದಲ ಬಾರಿಗೆ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಮಳವಳ್ಳಿಯಲ್ಲಿ ಬಿಜೆಪಿಗೆ ಮತಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಸುಳ್ಳು ಸಂದೇಶಗಳನ್ನು ಹರಡಬೇಡಿ: ಆದರೆ, ಮಂಡ್ಯದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೇ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಅಲೆ ಹೆಚ್ಚಾಗಿದ್ದರಿಂದ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಹಾಗಾಗಿ ಪಕ್ಷಕ್ಕೆ ಆಗಿರುವ ಸೋಲನ್ನು ಒಪ್ಪಿಕೊಂಡು, ಆತ್ಮಾವಲೋಕನದ ಜೊತೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. ಮಾರ್ಚ್ 10 ರಂದು ನಾನು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ‘ನಾನು ರಿಸ್ಕ್ ತಗೆದುಕೊಳ್ಳುತ್ತಿದ್ದೇನೆ. ಇದು ರಿಸ್ಕ್ ಎಂದು ನನಗೆ ಗೊತ್ತಿದೆ’ ಎಂದು ಮಾಧ್ಯಮಗಳ ಮುಂದೆಯೇ  ಅವತ್ತೆ ಸ್ಪಷ್ಟ ಪಡಿಸಿದ್ದೆ. ಪಕ್ಷದ ಸೋಲಿಗೆ ಇಷ್ಟೆಲ್ಲ ಕಾರಣಗಳು ಇದ್ದರೂ, ನೀವು ನಿಮ್ಮದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತೀದ್ದೀರಿ. ಸುಳ್ಳು ಸಂದೇಶಗಳನ್ನು ಹರಡುತ್ತಿದ್ದೀರಿ. ನೀವೇ ಸುದ್ದಿಯನ್ನು ಸೃಷ್ಟಿಸಿ ಜನರಿಗೆ ತಪ್ಪು ಮಾಹಿತಿಯನ್ನು ನೀಡುವುದು ಎಷ್ಟು ಸರಿ?

ಸ್ವಾರ್ಥದ ಬಗ್ಗೆ ಆಲೋಚನೆ ಮಾಡುವವಳಲ್ಲ: ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಭವಿಷ್ಯ ಅಥವಾ 24X7 ರಾಜಕಾರಣದ ಲೆಕ್ಕಾಚಾರ ಹಾಕುತ್ತಾ ಕೂರುವವಳು ನಾನಲ್ಲ.  ನನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸಿದ್ದರೆ ಬಹುಶಃ ನನ್ನ ನಿಲುವೇ ಬೇರೆಯದ್ದಾಗಿಯೇ ಇರುತ್ತಿತ್ತು. ಆ ರೀತಿ ಮಾಡುವುದಕ್ಕೆ ನಾನು ಇಷ್ಟ ಪಡುವುದಿಲ್ಲ.  ನನ್ನ ಆತ್ಮಸಾಕ್ಷಿ ಆಧಾರದ ಮೇಲೆ ನಾನು ನನ್ನ ನಿರ್ಧಾರಗಳನ್ನು ತಗೆದುಕೊಳ್ಳುತ್ತೇನೆ ಮತ್ತು ನನ್ನ ಕ್ಷೇತ್ರಕ್ಕೆ ಒಳ್ಳೆದಾಗುವಂತಹ ಯೋಚನೆಯನ್ನು ಮಾತ್ರ ಮಾಡುತ್ತೇನೆ.  ನಾನು ಎಂದಿಗೂ ನನ್ನ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ.

ಭ್ರಷ್ಟ ದುರಹಂಕಾರಿ ಶಾಸಕರಿಗೆ ಸೋಲಾಗಿದೆ: ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಯಾವತ್ತಿಗೂ ನಂಬಿಕೆ ಇರಲಿದೆ ಎಂದು ಮತ್ತೆ ಪುನರುಚ್ಚಿಸುತ್ತೇನೆ.  ನಿಮ್ಮ ಗ್ರಹಿಕೆಗಳನ್ನು ದಯವಿಟ್ಟು ಸರಿಪಡಿಸಿಕೊಳ್ಳಿ. ಇಲ್ಲಿ ಪ್ರಮುಖವಾಗಿ ಒಂದು ಅಂಶವನ್ನು ಮರೆಯಬಾರದು. ನನ್ನ ಸ್ವಾಭಿಮಾನಿ ಕ್ಷೇತ್ರದಲ್ಲಿ ನಾನು ಈವರೆಗೂ ಏಕಾಂಗಿಯಾಗಿ ಹೋರಾಟ ಮಾಡುತ್ತಿರುವುದು ಕ್ಷೇತ್ರದ ಭ್ರಷ್ಟ ಹಾಗೂ ದುರಹಂಕಾರಿ ವರ್ತನೆಯ ಶಾಸಕರು ವಿರುದ್ಧ. ನನ್ನ ಈ ಸತತ ಹೋರಾಟವನ್ನು ಗಮನಿಸಿರುವ ನನ್ನ ಸ್ವಾಭಿಮಾನಿ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಆ ಪಾರ್ಟಿಯಲ್ಲಿ ಗೆದ್ದಿರುವುದು ಒಬ್ಬರೇ ಒಬ್ಬರು. ಅವರೂ ಹೊಸಬರು. 

ಜೆಡಿಎಸ್‌ ಪಕ್ಷ ನಮಗೆ ತಾಯಿ, ದೇವೇಗೌಡರು ತಂದೆ ಇದ್ದಂತೆ: ಸಿ.ಎಸ್‌.ಪುಟ್ಟರಾಜು

ನನ್ನ ಹೋರಾಟದ ಲಾಭವನ್ನು ಕಾಂಗ್ರೆಸ್‌ ಪಡೆದುಕೊಂಡಿದೆ: ನನ್ನ ನ್ಯಾಯಯುತ ಹೋರಾಟದ ಲಾಭವನ್ನು ನನ್ನ ಜಿಲ್ಲೆಯ ಕಾಂಗ್ರೆಸ್ ಪಡೆದುಕೊಂಡಿದೆ. ಅದು ನನ್ನ ಸ್ವಾಭಿಮಾನಿ ಮಂಡ್ಯದ ಜನರೇ ನೀಡಿದ ಜನಾದೇಶವಾಗಿದ್ದರಿಂದ ಅದನ್ನು ಗೌರವಿಸುತ್ತೇನೆ. ರಾಜಕೀಯ, ರಾಜಕಾರಣ ಮತ್ತು ತಂತ್ರಗಳು ಒಂದು ನಿರ್ದಿಷ್ಟ ಮಟ್ಟಿಗೆ ಕೆಲಸ ಮಾಡುತ್ತೇವೆ ಎಂದು ನಾನು ದೃಢವಾಗಿ ನಂಬುತ್ತೇನೆ. ಆದರೆ, ಅಂತಿಮವಾಗಿ ಯಾವುದೇ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವ್ಯಕ್ತಿ ಗೆಲ್ಲಬೇಕು ವಿನಃ ಪಕ್ಷಗಳು ಅಥವಾ ನಾಯಕರಲ್ಲ. ಸದ್ಯ ನನ್ನ ಮುಂದೆ ಎರಡು ಗುರಿಗಳಿವೆ. ಮುಂದೆ ಮತ್ತೊಂದು ಮಹಾ ಚುನಾವಣೆಯಿದೆ. ನನ್ನ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ, ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸುತ್ತೇವೆ. ಬಿಜೆಪಿ ಪಕ್ಷವು ಹಿಂದೆಂದಿಗಿಂತಲೂ ಬಲವಾಗಿ ಮತ್ತು ಅಚ್ಚರಿಯ ರೀತಿಯಲ್ಲಿ ಪುಟಿದೇಳಲಿದೆ ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎನ್ನುವುದು ನನ್ನ ಅಚಲ ನಂಬಿಕೆಯಾಗಿದೆ. 

ಟ್ರೋಲ್‌ ಮಾಡುವುದು ನಿಮ್ಮ ವ್ಯಕ್ತಿತ್ವ ತೋರಿಸುತ್ತದೆ: ಮತ್ತೊಂದು ಸಲ ಹೇಳುತ್ತೇನೆ, ನನ್ನ ನಿರ್ಧಾರ ಮತ್ತು ಪರಿಣಾಮಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಹಾಗಾಗಿ ಈ ವಿಷಯದಲ್ಲಿ ನನಗೆ ವಿಷಾದವಿಲ್ಲ. ಕೆಟ್ಟ ಹಾಗೂ ನೆಗೆಟಿವ್ ಸುದ್ದಿ ಪ್ರಸಾರ ಮಾಡುವವರ ಜೊತೆಗೆ ಟ್ರೋಲ್ ಮಾಡುವವರು ದಯವಿಟ್ಟು ಆರೋಗ್ಯವಂಥ ಮನಸ್ಸು ಬೆಳೆಸಿಕೊಳ್ಳಿ. ವಿಶ್ರಾಂತಿ ತಗೆದುಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ. ನಿಮ್ಮ ಟ್ರೋಲ್ ಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆಯೇ ಹೊರತು, ಅದರಿಂದ ನನ್ನ ಕೆಲಸಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 

ನಿಮ್ಮ ಅಗ್ಗದ ಮಾತುಗಳು, ನಿಂದನೆಯ ನುಡಿಗಳು, ನೀವು ಬಳಸುವ ಪದಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿವೆ. ದಯವಿಟ್ಟು ನಿಮ್ಮ ಈ ನಡವಳಿಕೆಯ ಮೂಲಕ ನಿಮ್ಮ ತಂದೆ ತಾಯಿಯನ್ನು ಅವಮಾನಿಸಬೇಡಿ. ಆರೋಗ್ಯವಂತ ಮತ್ತು ಸಕಾರಾತ್ಮಕ ಟೀಕೆ, ಟಿಪ್ಪಣಿ, ಚರ್ಚೆಗಳಿಗೆ ಯಾವತ್ತಿಗೂ ಈ ನೆಲದಲ್ಲಿ ಸ್ವಾಗತವಿದೆ. ನೀವು ಅಂದುಕೊಂಡಿರುವ ವಿಜಯವನ್ನು ಆನಂದಿಸಿ ಮತ್ತು ಆಚರಿಸಿ. ಮುಂದಿನ ಬಾರಿ ಪ್ರಬಲ ಹೋರಾಟಕ್ಕೆ ಸಿದ್ಧರಾಗಿರಿ.

ಜೈ ಹಿಂದ್, ಜೈ ಕರ್ನಾಟಕ, ಜೈ ಮಂಡ್ಯ

ಕಪೋಕಲ್ಪಿತ ವರದಿ ಮಾಡುತ್ತಿರುವ ಕೆಲ ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ವರದಿಗೆ ಇದು ನನ್ನ ಪ್ರತ್ಯುತ್ತರ

ತಮ್ಮೆಲ್ಲರಿಗೂ ಗೊತ್ತಿರುವಂತೆ ನಾನು 10 ಮಾರ್ಚ್ 2023 ರಂದು ಪತ್ರಿಕಾಗೋಷ್ಠಿ ಕರೆದು ಬಿಜೆಪಿಗೆ ನನ್ನ ಬೆಂಬಲವನ್ನು ಘೋಚಿಸಿದ್ದೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಪಕ್ಷವು ಏಪ್ರಿಲ್ 18 ರಂದು ಅಭ್ಯರ್ಥಿಗಳನ್ನು ಘೋಷಣೆ…

— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA)
click me!