ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ

Published : Dec 11, 2022, 02:41 PM IST
ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ

ಸಾರಾಂಶ

ಶಿಮ್ಲಾದ ಐತಿಹಾಸಿಕ ರಿಡ್ಜ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ 58 ವರ್ಷದ ಸುಖ್ವಿಂದರ್‌ ಸಿಂಗ್ ಸುಖು ಪ್ರಮಾಣ ವಚನ ಸ್ವೀಕರಿಸಿದರು. 

ಅಭೂತಪೂರ್ವ ಗೆಲುವಿನೊಂದಿಗೆ ಹಿಮಾಚಲ ಪ್ರದೇಶದಲ್ಲಿ (Himachal Pradesh) ಅಧಿಕಾರಕ್ಕೆ ಮರಳಿದ ಕಾಂಗ್ರೆಸ್‌ನ (Congress) ನೂತನ ಮುಖ್ಯಮಂತ್ರಿಯಾಗಿ (Chief Minister) ಪಕ್ಷದ ಹಿರಿಯ ನಾಯಕ ಸುಖ್ವಿಂದರ್‌ ಸಿಂಗ್‌ ಸುಖು (Sukhwinder Singh Sukhu) ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ (Swearing In) ಮಾಡಿದ್ರು. ಜೊತೆಗೆ ಸಿಎಂ ಹುದ್ದೆ ರೇಸ್‌ನಲ್ಲಿದ್ದ ಮತ್ತೋರ್ವ ಹಿರಿಯ ನಾಯಕ ಮುಕೇಶ್‌ ಅಗ್ನಿಹೋತ್ರಿ (Mukesh Agnihotri) ಅವರು ಉಪ ಮುಖ್ಯಮಂತ್ರಿಯಾಗಿ (Deputy Chief Minister) ಪ್ರಮಾಣ ವಚನ ಸ್ವೀಕರಿಸಿದ್ರು. ಶಿಮ್ಲಾದ (Shimla) ಐತಿಹಾಸಿಕ ರಿಡ್ಜ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ 58 ವರ್ಷದ ಸುಖ್ವಿಂದರ್‌ ಸಿಂಗ್ ಸುಖು ಪ್ರಮಾಣ ವಚನ ಸ್ವೀಕರಿಸಿದರು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ರು. ಸಾವಿರಾರು ಕಾಂಗ್ರೆಸ್‌ ಬೆಂಬಲಿಗರು, ಕಾರ್ಯಕರ್ತರು ಸಹ ಸಮಾರಂಭದಲ್ಲಿ ಹಾಜರಿದ್ದರು.

ಇದನ್ನು ಓದಿ: ಹಿಮಾಚಲ ಪ್ರದೇಶದಲ್ಲಿ ಸಿಎಂ ಸ್ಥಾನಕ್ಕೆ ಜಿದ್ದಾಜಿದ್ದಿ, ಪ್ರತಿಭಾ ಸಿಂಗ್‌-ಸುಖ್ವಿಂದರ್‌ ಫೈಟ್‌!

ಅನೇಕ ರಾಜ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಅಂತಿಮವಾಗಿ ಹಿಮಾಚಲ ಪ್ರದೇಶದಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ. ಇನ್ನು, ಸುಖ್ವಿಂದರ್‌ ಸಿಂಗ್‌ ದಕ್ಷಿಣ ಭಾಗದ ಹಿಮಾಚಲ ಪ್ರದೇಶದ ಕಾಂಗ್ರೆಸ್‌ನ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳು ಉತ್ತರ ಭಾಗದ ಹಿಮಾಚಲ ಪ್ರದೇಶಕ್ಕೆ ಸೇರಿದ್ದರು. 

ಇನ್ನು, ನೂತನ ಸಿಎಂ ಸುಖ್ವಿಂದರ್‌ ಸಿಂಗ್ ತಮ್ಮ ಪ್ರಮಾಣ ವಚನ ಸ್ವಿಕಾರ ಸಮಾರಂಭಕ್ಕೂ ಮುನ್ನ ಹಿಮಾಚಲ ಪ್ರದೇಶ ಸಿಎಂ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಪ್ರತಿಭಾ ಸಿಂಗ್ ಅವರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದರು. 

ಇದನ್ನೂ ಓದಿ: ಹಿಮಾಚಲದಲ್ಲಿ ಬಿಜೆಪಿ ಸೋಲು: ಕಾರ್ಯಕರ್ತರಿಂದ ಕೇಂದ್ರ ಸಚಿವರ ಟ್ರೋಲ್

ಪ್ರತಿಭಾಗೆ ತಪ್ಪಿದ ಸಿಎಂ ಹುದ್ದೆ:
ಪಕ್ಷದ ಪ್ರಚಾರ ಸಾಥ್ಯ ಹೊತ್ತಿದ್ದ 58 ವರ್ಷದ ಸುಖ್ವಿಂದರ್‌ ಸಿಂಗ್ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ, ಹೈಕಮಾಂಡ್‌ ಸೂಚನೆ ಅನುಸಾರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳಿಕ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಹೀಗಾಗಿ ಸಿಎಂ ಹುದ್ದೆಗಾಗಿ ಭಾರೀ ಕಸರತ್ತು ನಡೆಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್‌ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರಿಗೆ ಭಾರಿ ನಿರಾಸೆಯಾಗಿದೆ. 

ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಪತ್ನಿ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರು ಸಹ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಆಗಿದ್ದರು. ಆದರೆ 40 ಶಾಸಕರ ಪೈಕಿ ಅವರಿಗೆ ಕೇವಲ 15 ಶಾಸಕರ ಬೆಂಬಲ ಇತ್ತು. ಇನ್ನೊಂದೆಡೆ, ಸುಖ್ವಿಂದರ್‌ ಸಿಂಗ್‌ಗೆ 20ಕ್ಕೂ ಹೆಚ್ಚು ಶಾಸಕರ ಬೆಂಬಲ ಇತ್ತು. ಮೇಲಾಗಿ ಪ್ರತಿಭಾ ಶಾಸಕಿ ಅಲ್ಲ, ಸಂಸದೆ. ಅವರು ಸಿಎಂ ಆದರೆ ಒಬ್ಬ ಶಾಸಕರ ರಾಜೀನಾಮೆ ಕೊಡಿಸಿ ಉಪಚುನಾವಣೆಗೆ ನಿಲ್ಲಬೇಕಿತ್ತು. ಮತ್ತೊಂದು ಚುನಾವಣೆ ವರಿಷ್ಠರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಸುಖ್ವಿಂದರ್‌ ಪರ ವರಿಷ್ಠರು ಒಲವು ತೋರಿದರು ಎನ್ನಲಾಗಿದೆ. ಆದರೂ ಪ್ರತಿಭಾ ಸಿಂಗ್, ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿ ಓಟಕ್ಕೆ ದಾಖಲೆ ಉಡೀಸ್, ಹಿಮಾಚಲದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್, ಇಲ್ಲಿದೆ ಗೆಲುವಿನ ಕಾರಣ!

68 ಸ್ಥಾನಬಲದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಮರಳಿತ್ತು.

ವೀರಭದ್ರ ಸಿಂಗ್‌ ವಿರೋಧಿ ಸುಖ್ವಿಂದರ್‌ ಸಿಂಗ್ 
ಹಮೀರ್‌ಪುರ ಜಿಲ್ಲೆಯ ನದೌನ್‌ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಖ್ವಿಂದರ್‌, 4 ಬಾರಿ ಶಾಸಕರಾಗಿ ಆಯ್ಕೆಯಾದ ಅನುಭವ ಹೊಂದಿದ್ದಾರೆ. ಸಾಮಾಜಿಕ ಹೋರಾಟಗಳ ಮೂಲಕ ಇವರು ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ, ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ, ಕಳೆದ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಉಸ್ತುವಾರಿಯನ್ನೂ ಹೊತ್ತಿದ್ದರು. ಸುಖು ರಾಹುಲ್‌ ಗಾಂಧಿ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಹೈಕಮಾಂಡ್‌ಗೆ ಸವಾಲು ಹಾಕುತ್ತಲೇ ಇದ್ದ ದಿವಂಗತ ವೀರಭದ್ರ ಸಿಂಗ್‌ ಅವರ ಕಡು ವಿರೋಧಿಯೂ ಹೌದು. ಹೀಗಾಗಿ ಸುಖ್ವಿಂದರ್‌ ಸಿಂಗ್ ಸುಖು ಆಯ್ಕೆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಯತ್ನವನ್ನು ಕಾಂಗ್ರೆಸ್‌ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: Himachal Election Result ಸೋಲಿನ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೈರಾಮ್ ಠಾಕೂರ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ