
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.18): ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು(ಮಂಗಳವಾರ) ಭರದಿಂದ ನಡೆದಿದೆ. ನಾಮಪತ್ರ ಸಲ್ಲಿಕೆಗೆ 4ನೇ ದಿನವಾದ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ 18 ನಾಮಪತ್ರ ಸಲ್ಲಿಕೆಯಾಗಿದೆ.
ಶೃಂಗೇರಿ ಚಿಕ್ಕಮಗಳೂರಿನಲ್ಲಿ ಅತೀ ಹೆಚ್ಚು ನಾಮಪತ್ರ ಸಲ್ಲಿಕೆ :
ಶೃಂಗೇರಿ, ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಟಿ.ಡಿ. ರಾಜೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಇಲಿಯಾಜ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ನಯನಾ ಜ್ಯೋತಿ ಜಾವರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ರಮೇಶ ಎ. ಇಂದು ಇಬ್ಬರು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ. ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಚಂದ್ರಶೇಖರ ಎ.ಎಸ್. ನಾಮಪತ್ರ ಸಲಿಸಿದ್ದಾರೆ.ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಇಂದು 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ಚಂದ್ರಶೇಖರ ಬಿ.ಟಿ., ಮುಳ್ಳಪ್ಪ ಶೆಟ್ಟಿ, ಮುನಿಯ ಭೋವಿ, ಎ.ಎ.ಪಿ. ಪಕ್ಷದಿಂದ ಎಂ.ಪಿ. ಈರೇಗೌಡ ಮತ್ತು ಡಾ. ಕೆ. ಸುಂದರಗೌಡ ಹಾಗೂ ಜನತಾದಳ (ಜಾತ್ಯಾತೀತ)ದಿಂದ ಜಿ.ಎಸ್. ಚಂದ್ರಪ್ಪ 2 ನಾಮಪತ್ರ ಸಲ್ಲಿಸಿದ್ದಾರೆ.ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹೆಚ್.ಎಂ. ಗೋಪಿ, ಕಾಂಗ್ರೆಸ್ನಿಂದ ಜಿ.ಹೆಚ್. ಶ್ರೀನಿವಾಸ್ ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ.ಕಡೂರು ವಿಧಾನ ಸಭಾ ಕ್ಷೇತ್ರದಿಂದ ಜನತಾ ದಳ (ಜಾತ್ಯಾತೀತ)ದಿಂದ ವೈ.ಎಸ್.ವಿ. ದತ್ತ 2 ನಾಮಪತ್ರ, ಕಾಂಗ್ರೆಸ್ನಿಂದ ಕೆ.ಎಸ್. ಆನಂದ್, ಕರ್ನಾಟಕ ಸರ್ವೋದಯ ಪಕ್ಷದಿಂದ ಆನಂದ ಕೆ.ಟಿ. ನಾಮಪತ್ರ ಸಲ್ಲಿಸಿದ್ದಾರೆ.
ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ: ಸಿದ್ದರಾಮಯ್ಯ ವಿರುದ್ದ ಕಿಡಿ
ದೇವೇಗೌಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ :
ದೇವೇಗೌಡರ ಮಾನಸ ಪುತ್ರ ವೈಎಸ್ ವಿ ದತ್ತಾ ದೇವೇಗೌಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಮಗಳೂರು ಕಡೂರು ತಾಲೂಕು ಕಚೇರಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಹೆಚ್.ಡಿ.ದೇವೇಗೌಡರು, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ ಭಾಗಿಯಾದರು.ಇನ್ನು ನಾಮಪತ್ರ ಸಲ್ಲಿಕೆಗೂ ಮುನ್ನ ವೈ.ಎಸ್.ವಿ.ದತ್ತ ಅವರು ನಾಮಪತ್ರ ಸಲ್ಲಿಸಲು ಕಡೂರು ತಾಲೂಕು ಕಚೇರಿಗೆ ಎತ್ತಿನ ಗಾಡಿಯಲ್ಲಿ ಹೊರಟು ಗಮನ ಸೆಳೆದಿದ್ದಾರೆ.ದತ್ತಾಗೆ ಜೊತೆಗೆ ಎತ್ತಿನ ಗಾಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸಾಥ್ ನೀಡಿದರು. ಈ ವೇಳೆ ಅವರಿಗೆ 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಈ ಎತ್ತಿನ ಗಾಡಿ ಮೆರವಣಿಗೆ ವೇಳೆ ಹೆದ್ದಾರಿ 206ರಲ್ಲಿ 1 ಕಿ.ಮೀಟರ್ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಟ ನಡೆಸಿದರು. ಕಡೂರು ಪಟ್ಟಣದಲ್ಲಿ 39 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲಿನಲ್ಲೂ ನೆರೆದ ಜನ ದತ್ತಾ ಅವರ ಪರ ಜೈಕಾರವನ್ನು ಹಾಕಿದರು. ಅಷ್ಟೇ ಅಲ್ಲದೆ ಅನ್ಯಾರೋಗ್ಯದ ನಡುವೆಯೂ ದೇವೇಗೌಡರ ಉಪಸ್ಥಿತಿಯಲ್ಲಿ ವೈ.ಎಸ್.ವಿ ದತ್ತಾ ನಾಮಪತ್ರ ಸಲ್ಲಿಸಿದು ವಿಶೇಷವಾಗಿತ್ತು.
ರಾಜೇಗೌಡರಿಗಿಂತ ಪತ್ನಿ ಕೋಟಿಯ ಒಡತಿ, ವೈಎಸ್‌ವಿ ದತ್ತಾ ಬಳಿ ವಾಹನವೇ ಇಲ್ಲ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಬಳಿ ಇರುವ ಆಸ್ತಿಗಿಂತ ಅವರ ಪತ್ನಿ ಬಳಿ ಇರುವ ಆಸ್ತಿಯ ಮೌಲ್ಯವೇ ಹೆಚ್ಚು. ಅಂದರೆ, ರಾಜೇಗೌಡರ ಬಳಿ 1,93,500 ರುಪಾಯಿ ನಗದು ಇದ್ದರೆ, ಸ್ಥಿರ ಮತ್ತು ಚರಾಸ್ತಿ ಸೇರಿದಂತೆ 9.48 ಕೋಟಿ ರುಪಾಯಿ ಮೌಲ್ಯದ ಆಸ್ತಿ ಇದೆ. ಆದರೆ, ಅವರ ಪತ್ನಿಯ ಬಳಿ ಇರುವ ಸ್ಥಿರ ಮತ್ತು ಚರಾಸ್ಥಿಯ ಮೌಲ್ಯ 17.95 ಕೋಟಿ ರುಪಾಯಿ.
ರಾಜೇಗೌಡರ ಬಳಿ 3 ಕೋಟಿ ಚರಾಸ್ತಿ ಇದ್ದರೆ, ಅವರ ಪತ್ನಿ ಬಳಿ 13 ಕೋಟಿ ರುಪಾಯಿ ಚರಾಸ್ತಿ ಇದೆ. ರಾಜೇಗೌಡರು 2.46 ಕೋಟಿ ರುಪಾಯಿ ಸಾಲ ಮಾಡಿದ್ದರೆ, ಅವರ ಪತ್ನಿ 2.16 ಕೋಟಿ ರುಪಾಯಿ ಸಾಲ ಮಾಡಿದ್ದಾರೆ.
ರಾಜೇಗೌಡರ ಹೆಸರಿನಲ್ಲಿ ಇನೋವಾ, ಅಡಿಕಾರ್, ಮಹೇಂದ್ರ ಜೀಪ್, ಫೋಕ್ಸ್ ವ್ಯಾಗನ್ ಕಾರುಗಳು ಇದ್ದರೆ, ಪತ್ನಿ ಹೆಸರಿನಲ್ಲಿ ಟೋಯೋಟೋ ಫಾರ್ಚೂನರ್ ಕಾರಿದೆ.
ವೈಎಸ್‌ವಿ ದತ್ತರವರ ಬಳಿ ಯಾವುದೇ ವಾಹನ ಇಲ್ಲ
ಕಡೂರಿನ ಮಾಜಿ ಶಾಸಕ ವೈಎಸ್‌ವಿ ದತ್ತ ಬಳಿ ಯಾವುದೇ ವಾಹನ ಇಲ್ಲ. ಅವರು ಮಂಗಳವಾರ ನಾಮಪತ್ರ ಸಲ್ಲಿಕೆಯ ಜತೆಗೆ ನೀಡಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರವನ್ನು ನೀಡಿದ್ದಾರೆ. ಅವರ ಕೈಯಲ್ಲಿ 2 ಲಕ್ಷ ರುಪಾಯಿ ನಗದು ಇದ್ದು, 17.89 ಲಕ್ಷ ಮೌಲ್ಯದ ಚರಾಸ್ತಿ, 2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಅವರು 3.11 ಕೋಟಿ ರುಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಮಾಜಿ ಸಚಿವ ಡಿ.ಎನ್. ಜೀವರಾಜ್ ಬಳಿ 8 ಲಕ್ಷ ಸೇರಿದಂತೆ ವಿವಿಧ ಬ್ಯಾಂಕ್, ಸಹಕಾರ ಬ್ಯಾಂಕ್‌ಗಳಲ್ಲಿ 93,19,678 ರುಪಾಯಿ ಸಾಲ ಮಾಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.