ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದರೇ ಆಯನೂರು ಮಂಜುನಾಥ್, ಯಾರೂ ಕ್ಯಾರೇ ಎನ್ನಲಿಲ್ಲ!

Published : Apr 18, 2023, 10:39 PM IST
ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದರೇ ಆಯನೂರು ಮಂಜುನಾಥ್, ಯಾರೂ ಕ್ಯಾರೇ ಎನ್ನಲಿಲ್ಲ!

ಸಾರಾಂಶ

ಶಿವಮೊಗ್ಗದಲ್ಲಿ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್  ಕೊನೆ ಗಳಿಗೆಯಲ್ಲಿ ಚುನಾವಣಾ ಯುದ್ಧದಲ್ಲಿ ಶಸ್ತ್ರಾಸ್ತ್ರ ತ್ಯಾಗ ಮಾಡಲಿದ್ದಾರೆ.

ಶಿವಮೊಗ್ಗ (ಏ.18): ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್  ಕೊನೆ ಗಳಿಗೆಯಲ್ಲಿ ಚುನಾವಣಾ ಯುದ್ಧದಲ್ಲಿ ಶಸ್ತ್ರಾಸ್ತ್ರ ತ್ಯಾಗ ಮಾಡಲಿದ್ದಾರೆಯೇ? ಮೂಲಗಳು ಕೂಡ ಇದನ್ನೇ ಹೇಳುತ್ತಿವೆ.

ಆರಂಭದಲ್ಲಿ ಭಾರೀ ಸದ್ದು ಮಾಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಆಯನೂರು ಮಂಜುನಾಥ್ ಮೂರು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಶಾಸಕ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರಲ್ಲದೆ, ತಮಗೆ ಬಿಜೆಪಿ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ರಾಜಿನಾಮೆ ನೀಡುತ್ತೇನೆ ಎಂದು ಘೋಷಿಸಿದ್ದರು. ಬಿಜೆಪಿ ಭದ್ರಕೋಟೆ  ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ಷರಶಃ ಯುದ್ದವೊಂದನ್ನು ಸಾರಿದ್ದರು.

ನನಗೆ ಬೆದರಿಕೆ ಕರೆ ಬಂದಿತ್ತು, ಅದಕ್ಕೆ ನಾನು ಜಗ್ಗಲ್ಲ: ಕೆ.ಎಸ್‌.ಈಶ್ವರಪ್ಪ

ನಿರೀಕ್ಷೆ ತಕ್ಕಂತಿರಲಿಲ್ಲ ಶಿವಮೊಗ್ಗ ರಾಜಕಾರಣ: ಆದರೆ ಅವರು ಅಂದುಕೊಂಡಂತೆ ಶಿವಮೊಗ್ಗ ರಾಜಕಾರಣ ನಡೆಯಲೇ ಇಲ್ಲ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಕೆ. ಎಸ್. ಈಶ್ವರಪ್ಪ ಚುನಾವಣಾ ಕಣದಿಂದ ಹಿಂದಕ್ಕೆ ಸರಿದರು. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಆಯನೂರು ಮಂಜುನಾಥ್‌ಗೆ ಟಿಕೆಟ್ ನೀಡುತ್ತದೆ ಎಂದು ಸುದ್ದಿ ಹರಡಿದರೂ ಪಕ್ಷ ನಿಷ್ಠಾವಂತರಿಗೆ ಟಿಕೆಟ್ ಎಂದು ಹೇಳಿದ್ದು ಮಾತ್ರವಲ್ಲದೆ ಘೋಷಿಸಿತು ಕೂಡ. ಜೆಡಿಎಸ್‌ಗೆ ಹೋಗಬೇಕೋ ಬೇಡವೋ ಎಂಬ ತೂಗುಯ್ಯಾಲೆಯ ಮನಃಸ್ಥಿತಿಯಲ್ಲಿ ಇರುವಾಗಲೇ ಜೆಡಿಎಸ್‌ಗೆ ಕಾಂಗ್ರೆಸ್ ಟಿಕೆಟ್ ವಂಚಿತ, ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಜೆಡಿಎಸ್‌ಗೆ ಸೇರ್ಪಡೆಗೊಂಡು ಟಿಕೆಟ್ ಗಿಟ್ಟಿಸಿಕೊಂಡರು. 

ಹಿರಿಯ ನಾಯಕರು ಮಾತನಾಡಿಸಲೇ ಇಲ್ಲ: ಇನ್ನು ಆರಂಭದಲ್ಲಿಯೇ ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಶೌರ್ಯದಿಂದಲೇ ಮಾತನಾಡಿದ್ದರಿಂದ ಬಿಜೆಪಿಯ ನಾಯಕರು ಇವರನ್ನು ಮಾತಾಡಿಸಲೇ ಇಲ್ಲ. ಯಡಿಯೂರಪ್ಪ ಅವರನ್ನು ನಂಬಿಕೊಂಡಿದ್ದ ಆಯನೂರು ಮಂಜುನಾಥ್ ಅವರಿಗೆ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ನಿರಾಶೆಯನ್ನು ಉಂಟು ಮಾಡಿದರು. ಆರಂಭದಲ್ಲಿ ಆಯನೂರು ಮಂಜುನಾಥ್ ಸುತ್ತಲೇ ಸುತುತ್ತಿದ್ದ ರಾಜಕಾರಣ ಬಳಿಕ ನಿಧಾನವಾಗಿ ಬೇರೆಡೆ ಹೊರಳಿಕೊಂಡಿತು. ಮಾಧ್ಯಮಗಳು ಕೂಡ ಆಯನೂರು ಮಂಜುನಾಥ್ ಅವರಿಂದ ದೂರ ಸರಿದು ಬೇರೆ ವಿಷಯಗಳ ಕಡೆ ಗಮನ ಹರಿಸಿದವು.

ಯಾವ ಪಕ್ಷವೂ ಗಂಭೀರವಾಗಿ ಪರಿಗಣಿಸಲಿಲ್ಲ: ಈ ನಡುವೆ ಆಯನೂರು ಮಂಜುನಾಥ್ ಅನಾರೋಗ್ಯಕ್ಕೆ ಒಳಗಾದರು. ರಾಜಕೀಯ ಬೆಳವಣಿಗೆ ಅವರು ಅಂದುಕೊಂಡಿದ್ದರ ವಿರುದ್ಧ ದಿಕ್ಕಿನಲ್ಲಿ ನಡೆಯತೊಡಗಿತು. ರಾಜಕೀಯದಾಟದಲ್ಲಿ ಆಯನೂರು ಮಂಜುನಾಥ ಅವರನ್ನು ಯಾವ ಪಕ್ಷವೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹೀಗಾಗಿ ಮಾ. 31 ರಂದು ವಿಧಾನಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಆರಂಭದಲ್ಲಿ ಹೇಳಿಕೊಂಡಿದ್ದ ಆಯನೂರು ಮಂಜುನಾಥ್ ಇದನ್ನು ಬೇರೆ ಬೇರೆ ಕಾರಣ ನೀಡಿ ಮುಂದೂಡಿದರು.

ಆಯನೂರು ಮಂಜುನಾಥ್‌ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ: ರಾಜ್ಯಾಧ್ಯಕ್ಷರಿಗೆ ಪತ್ರ

ಹತಾಶೆ ಭಾವನೆಯಲ್ಲಿ ಮಂಜುನಾಥ್:  ಈ ಕ್ಷಣದ ಬೆಳವಣಿಗೆ ಪ್ರಕಾರ ಆಯನೂರು ಮಂಜುನಾಥ್ ಹತಾಶರಾದಂತೆ ಕಾಣುತ್ತಿದ್ದಾರೆ. ಇದ್ದ ವಿಧಾನಪರಿಷತ್ ಸದಸ್ಯ ಸ್ಥಾನವನ್ನೂ ಕಳೆದುಕೊಂಡು ಬರಿಗೈಯಲ್ಲಿ ಕೂರುವುದು ಸರಿಯಲ್ಲ ಎಂಬ ಅವರ ಆತ್ಮೀಯರ ಮಾತಿಗೆ ತಲೆದೂಗಲಾರಂಭಿಸಿದ್ದಾರೆ. ರಾಜಿನಾಮೆ ನಿರ್ಧಾರ ಮತ್ತು ಸ್ಪರ್ಧೆಯ ವಿಚಾರದಿಂದ ಹೊರ ಬರುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕೈಕೊಟ್ಟ ಅವರ ಅನಾರೋಗ್ಯವೂ ಕೂಡ ಕಾರಣವಾಗಿದೆ. ಇನ್ನು ತಮ್ಮ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮಾಡುವ ಸಾಧ್ಯತೆಯಿದ್ದು, ಈಗ ತಣ್ಣಾಗಾಗಿ ಕೂರುವುದೊಂದೇ ಅಸ್ತ್ರವಾಗಿ ಉಳಿದಿದೆ.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ