ಸೊರಬ ಕ್ಷೇತ್ರದ ಇತಿಹಾಸದಲ್ಲೇ ಹೆಚ್ಚು ಮತ ಗಳಿಸುವ ಮೂಲಕ ಸಹೋದರನ ಸವಾಲಿನಲ್ಲಿ ಗೆದ್ದು ಬೀಗಿದ ಮಧು ಬಂಗಾರಪ್ಪ ಅವರಿಗೆ ಈಗ ಸಚಿವ ಸ್ಥಾನವೂ ಸಿಕ್ಕಿದೆ. ಆದರೆ, ಸಚಿವರಾಗಿರುವ ಮಧು ಬಂಗಾರಪ್ಪ ಅವರಿಗೆ ತಾಲೂಕಿನಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳ ಸಾಲು ಎದುರಾಗಿವೆ.
ಎಚ್.ಕೆ.ಬಿ.ಸ್ವಾಮಿ
ಸೊರಬ (ಮೇ.28): ಸೊರಬ ಕ್ಷೇತ್ರದ ಇತಿಹಾಸದಲ್ಲೇ ಹೆಚ್ಚು ಮತ ಗಳಿಸುವ ಮೂಲಕ ಸಹೋದರನ ಸವಾಲಿನಲ್ಲಿ ಗೆದ್ದು ಬೀಗಿದ ಮಧು ಬಂಗಾರಪ್ಪ ಅವರಿಗೆ ಈಗ ಸಚಿವ ಸ್ಥಾನವೂ ಸಿಕ್ಕಿದೆ. ಆದರೆ, ಸಚಿವರಾಗಿರುವ ಮಧು ಬಂಗಾರಪ್ಪ ಅವರಿಗೆ ತಾಲೂಕಿನಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳ ಸಾಲು ಎದುರಾಗಿವೆ. ಬಗರ್‌ಹುಕುಂ ಸಮಸ್ಯೆ, ಗ್ರಾಮೀಣ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ರಸ್ತೆಗಳು, ಆರೋಗ್ಯ, ಉದ್ಯೋಗ, ಶಿಕ್ಷಣ, ನೀರಾವರಿ ಯೋಜನೆಗಳು, ಪಟ್ಟಣದ ಸರ್ವೆ ನಂ. 113ರ ನಿವಾಸಿಗಳಿಗೆ ಹಕ್ಕುಪತ್ರ ಸೇರಿದಂತೆ ಹಲವು ಸವಾಲುಗಳು ತಕ್ಷಣದಲ್ಲಿಯೇ ಎದುರಾಗುವ ಸಮಸ್ಯೆಗಳಾಗಿದ್ದು, ಇವುಗಳಿಗೆ ಪರಿಹಾರವನ್ನು ಸಹ ಕಂಡುಕೊಳ್ಳಬೇಕಿದೆ.
ಕ್ಷೇತ್ರದ 239 ಬೂತ್‌ಗಳ ಪೈಕಿ ಸುಮಾರು 230 ಬೂತ್‌ಗಳಲ್ಲಿ ಮಧು ಬಂಗಾರಪ್ಪ ಅವರಿಗೆ ಮತದಾರರು ಲೀಡ್ ನೀಡಿದ್ದಾರೆ. ಕ್ಷೇತ್ರದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಮಧು ಬಂಗಾರಪ್ಪ ಅವರನ್ನು ಬೆಂಬಲಿಸಿದ್ದಾರೆ. ಕ್ಷೇತ್ರದಲ್ಲಿ ಈವರೆಗೂ ಉದ್ಯೋಗ ಸೃಷ್ಟಿಯಲ್ಲಿ ಜಿಲ್ಲೆಯೇ ತಾಲೂಕು ಹಿಂದುಳಿದೆ. ನಿರುದ್ಯೋಗಿ ಯುವಕ-ಯುವತಿಯರು ಉದ್ಯೋಗವನ್ನು ಅರಸಿ ನೆರೆಯ ತಾಲೂಕು ಸೇರಿದಂತೆ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಉದ್ದಿಮೆಗಳ ಸ್ಥಾಪಿಸುವುದರಿಂದ ವಿದ್ಯಾವಂತರಿಗೆ ಸ್ಥಳೀಯವಾಗಿಯೇ ಉದ್ಯೋಗ ಲಭಿಸಲಿದೆ ಎನ್ನುವ ಆಶಾಭಾವನೆ ಯುವಜನತೆಯದ್ದಾಗಿದೆ.
ದೇವೇಗೌಡ ಕುಟುಂಬದ ದಾಖಲೆ ಸರಿಗಟ್ಟಿದ ಬಂಗಾರಪ್ಪ ಕುಟುಂಬ
ತಾಲೂಕು ಕೇಂದ್ರದಲ್ಲಿ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಳವನ್ನು ಕಾಯ್ದಿರಿಸಿದ ಪರಿಣಾಮ ಸುಸಜ್ಜಿತವಾದ ಸಾರ್ವಜನಿಕ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ, ತಜ್ಞ ವೈದ್ಯರ ಕೊರತೆ ಮಾತ್ರ ನೀಗಿಲ್ಲ. ಹೆಚ್ಚಿನ ಚಿಕಿತ್ಸೆಗೆ ಶಿಕಾರಿಪುರ, ಸಾಗರ ಅಥವಾ ಶಿವಮೊಗ್ಗಕ್ಕೆ ರೋಗಿಗಳು ತೆರಳುವ ಪರಿಸ್ಥಿತಿ ಇದೆ. ಮುಖ್ಯವಾಗಿ ಮಹಿಳೆಯರು, ಗರ್ಭಿಣಿಯರು ನೆರೆಯ ಸಿದ್ದಾಪುರ, ಶಿರಸಿ ಮತ್ತು ಸಾಗರ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯೊಂದನ್ನು ನಿರ್ಮಿಸಿದರೆ ಕ್ಷೇತ್ರದ ಜನತೆಗೆ ಅನುಕೂಲವಾಗಲಿದೆ.
ಹಲವು ಹೋರಾಟದ ಹಿನ್ನೆಲೆ ಇರುವ ತಾಲೂಕಿನಲ್ಲಿ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಇದೆ. ಈ ಹಿಂದೆ ಎಸ್. ಬಂಗಾರಪ್ಪ ಅವರು ರಕ್ಷಣೆ ನೀಡುವ ಕೆಲಸ ಮಾಡಿದ್ದರು. ಮಧು ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಹಲವು ಜನರಿಗೆ ಹಕ್ಕು ಪತ್ರ ಸಹ ದೊರೆತಿತ್ತು. ಆದರೆ, ಕಳೆದ ಅವಧಿಯಲ್ಲಿ ಅನೇಕರ ಹಕ್ಕು ಪತ್ರಗಳು ವಜಾಗೊಂಡಿವೆ. ಇದೀಗ ಜನತೆ ಮಧು ಬಂಗಾರಪ್ಪ ಅವರ ಮೇಲೆ ಬಗರ್‌ಹುಕುಂ ಸಾಗುವಳಿದಾರರಿಗೆ ರಕ್ಷಣೆ ಮತ್ತು ಅರ್ಹರಿಗೆ ಹಕ್ಕುಪತ್ರ ನೀಡುವ ಮಹತ್ವದ ಜವಾಬ್ದಾರಿಯೂ ಇದೆ. ಇದೇ ಮಾದರಿ ಪಟ್ಟಣದ ಸರ್ವೆ ನಂ. 113ರಲ್ಲಿ ಸುಮಾರು ಎರಡು ಸಾವಿರ ನಿವಾಸಿಗಳು ಅನಧಿಕೃತವಾಗಿ ವಾಸ ಮಾಡುತ್ತಿದ್ದು, ಇವರಿಗೂ ಸಹ ಹಕ್ಕುಪತ್ರದ ನಿರೀಕ್ಷೆಯಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ನಾಯಕತ್ವದ ಗುಣವನ್ನು ಜನತೆ ಮಧು ಬಂಗಾರಪ್ಪ ಅವರಲ್ಲಿ ಕಾಣುತ್ತಿದ್ದಾರೆ. ರಾಜ್ಯದ ಎಲ್ಲಾ ಪ್ರದೇಶಗಳಲ್ಲೂ ಬಂಗಾರಪ್ಪ ಅವರ ಅಭಿಮಾನಿಗಳ ಬಳಗ ದೊಡ್ಡ ಸಂಖ್ಯೆಯಲ್ಲಿದೆ. ಚುನಾವಣೆಯಲ್ಲಿ ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮತ ಸೆಳೆಯುವಲ್ಲಿ ಮಧು ಬಂಗಾರಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಥ ವ್ಯಕ್ತಿತ್ವವನ್ನು ಹೊಂದಿರುವ ಅವರು ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛ, ಭ್ರಷ್ಟಾಚಾರರಹಿತ ಆಡಳಿತ ಮತ್ತು ಮಧ್ಯವರ್ತಿಗಳ ಹಾವಳಿಯ ಅಧಿಕಾರವನ್ನು ತಪ್ಪಿಸುವ ನಿಟ್ಟಿನಲ್ಲಿ ನಿಗಾ ವಹಿಸಿ ಎಚ್ಚೆತ್ತುಕೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
ರೈತರ ಆದಾಯ ಹೆಚ್ಚುವಂತೆ ನೋಡಿಕೊಳ್ಳಬೇಕು: ಶಾಸಕ ದರ್ಶನ್ ಪುಟ್ಟಣ್ಣಯ್ಯ
ನೂತನ ಶಾಸಕರ ಮೇಲೆ ಹಲವು ನಿರೀಕ್ಷೆ: ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಮಸ್ಯೆಗಳಿದ್ದು, ಹಲವು ಗ್ರಾಮಗಳಿಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲ. ಮಳೆಗಾಲದಲ್ಲಿ ವರದಾ ಮತ್ತು ದಂಡಾವತಿ ನದಿಗಳ ಪ್ರವಾಹದಿಂದ ಮುಳುಗಡೆಯಾಗುವ ಗ್ರಾಮಗಳ ಸ್ಥಳಾಂತರಿಸುವ ಜೊತೆಗೆ ಶಾಶ್ವತ ನೆಲೆ ಕಲ್ಪಿಸಬೇಕಿದೆ. ಕಚವಿ ಏತನೀರಾವರಿ ಯೋಜನೆ ಪೂರ್ಣವಾಗಬೇಕಿದೆ. ತಾಲೂಕಿನ ಜಡೆ ಮತ್ತು ಆನವಟ್ಟಿಹೋಬಳಿಗಳ ರೈತರ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನನೆಗುದಿಯಲ್ಲಿರುವ ದಂಡಾವತಿ ನದಿ ಬ್ಯಾರೇಜ್ ಯೋಜನೆ ಕಾಮಗಾರಿ ಪ್ರಾರಂಭವಾಗಬೇಕಿದೆ. ಹಂತ ಹಂತವಾಗಿ ಅವುಗಳನ್ನು ಪೂರೈಸುವ ಹೊಣೆಯು ನೂತನ ಶಾಸಕರದ್ದಾಗಿದೆ. ಹಲವು ನಿರೀಕ್ಷೆಗಳನ್ನು ಸಹ ಜನತೆ ಹೊಂದಿದ್ದಾರೆ.