ನನ್ನ ಸ್ಪರ್ಧೆಯ ಬಗ್ಗೆ ರಾಜ್ಯದ ನಾಯಕರು ನಿರ್ಧರಿಸ್ತಾರೆ: ಮಲ್ಲಿಕಾರ್ಜುನ ಖರ್ಗೆ

Published : Mar 17, 2024, 11:47 AM IST
ನನ್ನ ಸ್ಪರ್ಧೆಯ ಬಗ್ಗೆ ರಾಜ್ಯದ ನಾಯಕರು ನಿರ್ಧರಿಸ್ತಾರೆ: ಮಲ್ಲಿಕಾರ್ಜುನ ಖರ್ಗೆ

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಯಾರು ಸಮರ್ಥರು, ಯಾರು ಸಮರ್ಥರಲ್ಲ ಎಂಬುದನ್ನು ರಾಜ್ಯ ನಾಯಕರೇ ನಿರ್ಧರಿಸುತ್ತಾರೆ. ಹಾಗೆಯೇ, ನಾನು ಕಲಬುರಗಿಯಿಂದ ಸ್ಪರ್ಧಿಸಬೇಕೆ, ಬೇಡವೇ ಎಂಬುದನ್ನೂ ರಾಜ್ಯ ನಾಯಕರು ಚರ್ಚಿಸಿ ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬೆಂಗಳೂರು (ಮಾ.17): ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಯಾರು ಸಮರ್ಥರು, ಯಾರು ಸಮರ್ಥರಲ್ಲ ಎಂಬುದನ್ನು ರಾಜ್ಯ ನಾಯಕರೇ ನಿರ್ಧರಿಸುತ್ತಾರೆ. ಹಾಗೆಯೇ, ನಾನು ಕಲಬುರಗಿಯಿಂದ ಸ್ಪರ್ಧಿಸಬೇಕೆ, ಬೇಡವೇ ಎಂಬುದನ್ನೂ ರಾಜ್ಯ ನಾಯಕರು ಚರ್ಚಿಸಿ ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರೇ ಅಭ್ಯರ್ಥಿಯಾದರೂ ಎಲ್ಲ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜ್ಯ ನಾಯಕರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನೀಡಬೇಕು ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿಗೆ ಸುಳ್ಳು ಹೇಳಲು ಭಯವೇ ಇಲ್ಲ: ಕಾಂಗ್ರೆಸ್ ನಾಯಕರು ಸುಳ್ಳು ಹೇಳಲು ಈಗಲೂ ಹೆದರುತ್ತಾರೆ. ಆದರೆ, ಪ್ರಧಾನಿ ಮೋದಿ ಯಾವುದೇ ಭಯವಿಲ್ಲದೆ ಸುಳ್ಳು ಹೇಳುತ್ತಾರೆ. ಕಳೆದ 10 ವರ್ಷಗಳಲ್ಲಿ ಅವರು ನೀಡಿದ ಭರವಸೆಗಳಲ್ಲಿ ಶೇ.75ರಷ್ಟು ಬರೀ ಸುಳ್ಳಾಗಿದೆ. ಆದರೂ, ಜನರು ಮತ್ತು ಮಾಧ್ಯಮಗಳು ಅದನ್ನೇ ನಂಬುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಅಧಿಕಾರಕ್ಕೆ ಬರುವಾಗ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ, ಈವರೆಗೆ ಮಾಡಿಲ್ಲ. ಬುಲೆಟ್ ರೈಲು, ರೈತರ ಆದಾಯ ದುಪ್ಪಟ್ಟು ಮಾಡುವುದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುವುದು ಸೇರಿದಂತೆ ಹಲವು ಸುಳ್ಳು ಭರವಸೆ ನೀಡಿ ಜನರನ್ನು ಮರಳು ಮಾಡಿದ್ದಾರೆ ಎಂದರು.

ಐತಿಹಾಸಿಕ ಸಿದ್ಧಾಂತ ಇರುವ ಏಕೈಕ ಪಕ್ಷ ಕಾಂಗ್ರೆಸ್: ಶಾಸಕ ಕೆ.ವೈ.ನಂಜೇಗೌಡ

ಕಲಬುರಗಿಗೆ ಮೋದಿ ಕೊಡುಗೆ ಏನಿದೆ?: ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನಿದೆ? ಈಗ ಮತ್ತೆ ಬರುತ್ತಿದ್ದಾರೆ‌ ಏನಾದರೂ ಘೋಷಣೆ ಮಾಡುತ್ತಾರೆಯೇ? ಏನು ಘೋಷಣೆ ಮಾಡದೆ ಬಂದರೆ ಏನು ಪ್ರಯೋಜನ ಎಂದರು. ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಿಗೆ ಏನು ಮಾಡಿದ್ದಾರೆ? ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೈಯುವುದು ಮಾತ್ರ ಬಿಟ್ಟಿಲ್ಲ. ನೀವು ಎಷ್ಟೇ ಬೈದರೂ ಪರವಾಗಿಲ್ಲ ಕೆಲಸ ಮಾಡಿ ತೋರಿಸಿಪ್ಪಾ ಮಾರಾಯ ಎಂದ ಖರ್ಗೆ ಏನು ಕೆಲಸ ಮಾಡದ ನಿಮಗೆ ಯಾಕೆ ಜನರು ಮತ ಹಾಕಬೇಕು ಎಂದು‌ ಪ್ರಶ್ನಿಸಿದರು.

ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ, ಕಮೀಜ್ ಫಾತಿಮಾ, ಅರವಿಂದ ಅರಳಿ, ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ, ಚಂದ್ರಶೇಖರ ಪಾಟೀಲ್, ಮಜರ್ ಆಲಂ ಖಾನ್, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ರೇವುನಾಯಕ ಬೆಳಮಗಿ, ಸಿಇಓ ಭಂವರ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಆರ್ ಚೇತನ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಕೆಕೆಆರ್ ಟಿಸಿ ಎಂ.ಡಿ. ರಾಚಪ್ಪ ಸೇರಿದಂತೆ ಹಲವರಿದ್ದರು.

ಸಂವಿಧಾನ ರಕ್ಷಣೆ ಮಾಡಲು ಕೈಜೋಡಿಸಬೇಕು: ರೈತರ ಬೆಳೆಗಳಿಗೆ ಎಂಎಸ್‌ಪಿ ದರ ನಿಗದಿ ಮಾಡಿ ಅವರ ಲಾಭ ದುಪ್ಪಟ್ಟು ಮಾಡುವ ಎಂದು ಬರೀ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಕಾನೂನುಬದ್ಧ ಮಾಡುತ್ತೇವೆ ಎಂದರು. ಆದರೆ, ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆಗೆ ಕುಳಿತಿದ್ದಾರೆ. ಅವರ ಸಮಸ್ಯೆ‌ ಬಗೆಹರಿಸುವುದು ಬಿಟ್ಟು ಅವರು ದಿಲ್ಲಿಗೆ ಬರದಂತೆ ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆಂದು ದೂರಿದರು. ಸಂವಿಧಾನ ರಚನೆ ಸುಮ್ಮನೆ ಆಗಿದ್ದಲ್ಲ ಅದರ ಹಿಂದೆ ಅಸಂಖ್ಯಾತ ಜನರ ತ್ಯಾಗವಿದೆ. 

ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ವಿ.ಶ್ರೀನಿವಾಸ ಪ್ರಸಾದ್ ಇಂದು ವಿದಾಯ

ಅಂತಹ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದನೊಬ್ಬ ಹೊರಟಿದ್ದಾನೆ. ಆದರೆ ಬಿಜೆಪಿಯವರು ಅವನ ಹೇಳಿಕೆ ಪಕ್ಷಕ್ಕೆ ಸಂಬಂಧಿಸಿಲ್ಲ ಎನ್ನುತ್ತಿದ್ದಾರೆ. ಅದ್ಹೇಗೆ ಸಂಬಂಧವಿಲ್ಲ? ಅವನು‌ ಚುನಾವಣೆಯಲ್ಲಿ ನಿಲ್ಲಲು ಟಿಕೇಟು ನೀಡಿದ್ದು ಬಿಜೆಪಿಯವರಲ್ಲವೇ? ಸಂವಿಧಾನದ ಆಶಯಕ್ಕೆ ಧಕ್ಕೆ ಆಗಿ ಮತ್ತೆ ಗುಲಾಮಿಗಿರಿ ಬಂದರೆ ದೇಶದ ಭವಿಷ್ಯಕ್ಕೆ ಕುತ್ತು ಬರಲಿದೆ. ಅದಕ್ಕಾಗಿ ಯುವಕರು ಸಂವಿಧಾನ ರಕ್ಷಣೆ ಮಾಡಲು ಕೈಜೋಡಿಸಬೇಕು ಎಂದರು. ಮೋದಿ ಸಿಎಂ ಆಗಿದ್ದಾಗ 25,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಈಗಲೂ ಮುಂದುವರೆದಿವೆ. ರೈತರ ಸಮಸ್ಯೆಗಳ ಕಡೆ ಗಮನ ಹರಿಸದೇ ಅಂಬಾನಿ, ಅದಾನಿ ಅಂತ ಹೊರಟಿದ್ದಾರೆ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ