ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ವಿ.ಶ್ರೀನಿವಾಸ ಪ್ರಸಾದ್ ಇಂದು ವಿದಾಯ

ಅವಿಭಜಿತ ಮೈಸೂರು ಜಿಲ್ಲೆಯ ಹಿರಿಯ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್ ಅವರು ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದಾರೆ. ಈ ಹಿಂದೆ ಮೂರು ಬಾರಿ ನಿವೃತ್ತಿ ಘೋಷಿಸಿದ್ದರೂ ಮತ್ತೆ ಮತ್ತೆ ಚುನಾವಣಾ ರಾಜಕಾರಣ ಅವರನ್ನು ಎಳೆದು ತಂದಿತ್ತು.

V Srinivas Prasad bid farewell to five decades of electoral politics tod

ಅಂಶಿ ಪ್ರಸನ್ನಕುಮಾರ್

ಮೈಸೂರು (ಮಾ.17): ಅವಿಭಜಿತ ಮೈಸೂರು ಜಿಲ್ಲೆಯ ಹಿರಿಯ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್ ಅವರು ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದಾರೆ. ಈ ಹಿಂದೆ ಮೂರು ಬಾರಿ ನಿವೃತ್ತಿ ಘೋಷಿಸಿದ್ದರೂ ಮತ್ತೆ ಮತ್ತೆ ಚುನಾವಣಾ ರಾಜಕಾರಣ ಅವರನ್ನು ಎಳೆದು ತಂದಿತ್ತು. 1974 ರಿಂದಲೂ ಚುನಾವಣಾ ರಾಜಕಾರಣದಲ್ಲಿರುವ ಅವರು 2024ರ ಮಾ.17 ರಂದು ವಿದಾಯ ಹೇಳುತ್ತಿದ್ದಾರೆ. ಅವರಿಗೆ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಾರಿ ಗೆದ್ದ ಗೌರವ. ಒಟ್ಟು ಎಂಟು ಲೋಕಸಭಾ, ಆರು ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದಾರೆ. 

ಆರು ಬಾರಿ ಲೋಕಸಭೆಗೆ, ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ತಲಾ ಮೂರು ಬಾರಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪರಾಭವಗೊಂಡಿದ್ದಾರೆ. ಈ ಅವಳಿ ಜಿಲ್ಲೆಗಳಿಂದ ಎಸ್.ಎಂ. ಸಿದ್ದಯ್ಯ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್- ನಾಲ್ಕು ಬಾರಿ, ಎಚ್.ಡಿ. ತುಳಸಿದಾಸ್- ಸತತ ಮೂರು ಬಾರಿ, ಎಂ. ಶಂಕರಯ್ಯ, ಎ. ಸಿದ್ದರಾಜು, ಸಿ.ಎಚ್. ವಿಜಯಶಂಕರ್, ಆರ್. ಧ್ರುವನಾರಾಯಣ, ಪ್ರತಾಪ್ ಸಿಂಹ- ಎರಡು ಬಾರಿ, ಎಂ.ಎಸ್. ಗುರುಪಾದಸ್ವಾಮಿ, ಎನ್. ರಾಚಯ್ಯ, ಬಿ. ರಾಚಯ್ಯ, ಎಂ. ರಾಜಶೇಖರಮೂರ್ತಿ, ಚಂದ್ರಪ್ರಭ ಅರಸು, ಕಾಗಲವಾಡಿ ಶಿವಣ್ಣ, ಎಚ್. ವಿಶ್ವನಾಥ್- ತಲಾ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ಭ್ರಷ್ಟಾಚಾರ: ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ

ವಿ. ಶ್ರೀನಿವಾಸಪ್ರಸಾದ್ ಅವರು 1974 ರಲ್ಲಿಯೇ ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಒಂಟೆ ಚಿಹ್ನೆಯಡಿ ಸ್ಪರ್ಧಿಸಿ, ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಟಿ.ವಿ. ಶ್ರೀನಿವಾಸರಾವ್ ಸೋಲುವಂತೆ ಮಾಡಿದ್ದರು. ಆಗ ಸಂಸ್ಥಾ ಕಾಂಗ್ರೆಸ್ಸಿನ ಎಂ. ವೆಂಕಟಲಿಂಗಯ್ಯ ಗೆದ್ದಿದ್ದರು. ನಂತರ ಶ್ರೀನಿವಾಸಪ್ರಸಾದ್ 1977 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದು, ಕಾಂಗ್ರೆಸ್ಸಿನ ಬಿ. ರಾಚಯ್ಯ ಅವರೆದುರು ಸೋತರು. 1978 ರಲ್ಲಿ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಇಂದಿರಾ ಕಾಂಗ್ರೆಸ್ಸಿನ ಪಿ. ವೆಂಕಟರಮಣ ಅವರೆದರು ಸೋತರು.

1980 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀನಿವಾಸಪ್ರಸಾದ್ ಅವರು ರಾಚಯ್ಯ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರು. 1984, 1989, 1991 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ನಾಲ್ಕು ಗೆಲವು ದಾಖಲಿಸಿದರು. ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪ್ರತಿನಿಧಿಸುತ್ತಿದ್ದ ಬಿ. ಶಂಕರಾನಂದ ಅವರು ಹಗರಣವೊಂದರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆಗ ಶ್ರೀನಿವಾಸಪ್ರಸಾದ್ ಮಂತ್ರಿಯಾಗಲು ಬಯಸಿದ್ದರು. ಆದರೆ ನರಸಿಂಹರಾವ್ ಅವರು ಕೋಲಾರದ ಜಿ.ವೈ. ಕೃಷ್ಣನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು. 

ಇದರ ಪರಿಣಾಮ ಶ್ರೀನಿವಾಸಪ್ರಸಾದ್ ಬಂಡಾಯವೆದ್ದರು. 1996ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಅದು ಅಂದಿನ ಕೇಂದ್ರ ಸಚಿವ ಎಂ. ರಾಜಶೇಖರಮೂರ್ತಿ ಅವರ ಬೆಂಬಲಿಗ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಲ್.ಎಚ್. ಬಾಲಕೃಷ್ಣ ಅವರ ಪಾಲಾಯಿತು. ಶ್ರೀನಿವಾಸಪ್ರಸಾದ್ ಬಂಡಾಯವಾಗಿ ಗಡಿಯಾರ ಚಿಹ್ನೆಯಡಿ ಸ್ಪರ್ಧಿಸಿದರು. ಇಬ್ಬರೂ ಸೋತು ಜನತಾದಳದ ಎ.ಸಿದ್ದರಾಜು ಗೆದ್ದರು. 1998ರ ಚುನಾವಣೆ ವೇಳೆಗೆ ಶ್ರೀನಿವಾಸಪ್ರಸಾದ್ ಕಾಂಗ್ರೆಸ್ಸಿಗೆ ಮರಳಿದರು. ಆದರೆ ಅವರು ಮತ್ತು ರಾಜಶೇಖರಮೂರ್ತಿ ಅವರ ಬೆಂಬಲಿಗರ ನಡುವೆ ಮನಸ್ಸುಗಳು ಒಂದಾಗಿರಲಿಲ್ಲ. ಪರಿಣಾಮ ಮತ್ತೊಮ್ಮೆ ಸೋತರು. ಜನತಾದಳದ ಸಿದ್ದರಾಜು ಎರಡನೇ ಬಾರಿ ಗೆದ್ದರು.

1999ರ ಲೋಕಸಭಾ ಚುನಾವಣೆ ವೇಳೆಗೆ ಲೋಕಶಕ್ತಿ ಸೇರಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಯುನ ಬಾಣ ಚಿಹ್ನೆಯಡಿ ಸ್ಪರ್ಧಿಸಿ ಐದನೇ ಬಾರಿ ಲೋಕಸಭೆಗೆ ಆಯ್ಕೆಯಾದರು. ನಂತರ ಸಮತಾ ಪಾರ್ಟಿಯಲ್ಲಿ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಗುರುತಿಸಿಕೊಂಡು ಎ.ಬಿ. ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವರಾದರು. ಚುನಾವಣೆಗೆ ಮುನ್ನವೇ ಜೆಡಿಎಸ್ ಸೇರಿದರು. 2004 ರಲ್ಲಿ ಅವರು ಸ್ಪರ್ಧಿಸಲಿಲ್ಲ. ಚುನಾವಣಾ ರಾಜಕಾರಣದಿಂದ ದೂರು ಇರುವುದಾಗಿ ಹೇಳಿ, ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ಕೊಡಿಸಿ, ಚಾಮರಾಜನಗರದಿಂದ ಲೋಕಸಭೆಗೆ ಗೆಲ್ಲಿಸಿದರು.

2006ರ ಚಾಮುಂಡೇಶ್ವರಿ ಉಪ ಚುನಾವಣೆ ವೇಳೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರು. 2008 ರಲ್ಲಿ ತಮ್ಮ ನಿವೃತ್ತಿಯ ಮನಸ್ಸು ಬದಲಿಸಿ ನಂಜನಗೂಡು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2013 ರಲ್ಲಿ ಪುನಾರಾಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮೂರುಕಾಲು ವರ್ಷದ ನಂತರ ಸಂಪುಟದಿಂದ ಕೈಬಿಟ್ಟಾಗ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. 2017ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕಳಲೆ ಕೇಶವಮೂರ್ತಿ ಎದುರು ಸೋತರು. ಮತ್ತೆ ಚುನಾವಣಾ ರಾಜಕಾರಣದಿಂದ ದೂರು ಇರುವುದಾಗಿ ಘೋಷಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ.ಬದಲಿಗೆ ಅವರ ಅಳಿಯ ಬಿ. ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿಯಾಗಿ ನಂಜನಗೂಡಿನಿಂದ ಗೆದ್ದರು.

ಈಶ್ವರಪ್ಪ ಮಗನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣವಲ್ಲ: ಬಿ.ಎಸ್.ಯಡಿಯೂರಪ್ಪ

2019ರ ಲೋಕಸಭಾ ಚುನಾವಣೆಯಲ್ಲಿ ಕೂಡ ಅವರು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟಿಗೆ ಒಟ್ಟು 16 ಮಂದಿ ಆಕಾಂಕ್ಷಿಗಳಿದ್ದರು. ಆದರೆ ಅವರಲ್ಲಿ ಯಾರು ಕೂಡ ಆರ್. ಧ್ರುವನಾರಾಯಣ ಅವರಿಗೆ ಪ್ರಬಲ ಪೈಪೋಟಿ ನೀಡಲಾರರು ಎಂದು ವರಿಷ್ಠರು ಶ್ರೀನಿವಾಸಪ್ರಸಾದ್ ಅವರಿಗೆ ಸ್ಪರ್ಧಿಸುವಂತೆ ದುಂಬಾಲು ಬಿದ್ದರು. ಅಂತಿಮವಾಗಿ ಅವರು ಕಣಕ್ಕಿಳಿದರು. ಧ್ರುವನಾರಾಯಣ ಗೆದ್ದು, ಶ್ರೀನಿವಾಸಪ್ರಸಾದ್ ಸೋತರು ಎಂಬ ವಾತಾವರಣ ಇತ್ತು. ಆದರೆ ಕೊನೆಯ 20 ಸಾವಿರ ಮತಗಳ ಎಣಿಕೆಯಲ್ಲಿ ಶ್ರೀನಿವಾಸಪ್ರಸಾದ್ 1817 ಮತಗಳಿಂದ ಗೆದ್ದರು. ಅಂತಿಮವಾಗಿ ನಾಲ್ಕನೇ ಬಾರಿಯ ನಿವೃತ್ತಿಯ ಘೋಷಣೆ ನಿಜವಾಗುತ್ತಿದೆ. ಹೀಗಾಗಿ ಈ ಬಾರಿ ಅವರ ಬದಲಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಾಜಿ ಶಾಸಕ ಎಸ್. ಬಾಲರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.

Latest Videos
Follow Us:
Download App:
  • android
  • ios