ಬೆಂಗಳೂರು (ಜೂ.07): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯಿಂದ ಆಘಾತ ಉಂಟಾಗಿದೆ. ಯಾವ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯ ಸಂಕಷ್ಟದಲ್ಲಿರುವ ಇಂತಹ ಸಂಧರ್ಭದಲ್ಲಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಉತ್ತಮ ವಿಚಾರವಲ್ಲ. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಎರಡಕ್ಕೂ ಅಂತಹ ಬೆಳವಣಿಗೆ ಒಳ್ಳೆಯದಲ್ಲ. ಕೊರೋನಾ ನಿಯಂತ್ರಣಕ್ಕೆ ತರಲು ಸಾಕಷ್ಟು ಶ್ರಮಿಸಿ ಅವರು ಯಶಸ್ವಿಯಾಗಿದ್ದಾರೆ. ಇಂತಹ ಸಮಯದಲ್ಲಿ ಈ ರೀತಿಯ ಚರ್ಚೆಗಳು ಏಕೆ ಬರುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
undefined
'ರಾಜೀನಾಮೆ ನೀಡಲು ಯಡಿಯೂರಪ್ಪಗೆ RSS ಮನವೊಲಿಸಿದೆ' .
ಯಡಿಯೂರಪ್ಪ ಅವರು ಯಾವ ಸಂದರ್ಭದಲ್ಲಿ, ಯಾವ ನೋವಿನಿಂದ ಈ ಮಾತು ಹೇಳಿದ್ದಾರೆ ಎಂಬುದನ್ನು ನೋಡಬೇಕು. ಈ ಸುದ್ದಿ ನೋಡಿ ನಮಗೆ ಆಘಾತ ಉಂಟಾಗಿದೆ. ಯಡಿಯೂರಪ್ಪ ಅವರನ್ನು ಬದಲಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರೆಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸಚಿವರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾಗ ಈ ವಿಚಾರ ಏಕೆ ಬಂತು ಎಂಬ ಬಗ್ಗೆ ದಿಗ್ಭ್ರಮೆ ಉಂಟಾಗಿದೆ ಎಂದು ಹೇಳಿದರು.