* ಲಗ್ಗೆರೆಯಲ್ಲಿ ಒಂದು ಲಕ್ಷ ಫುಡ್ ಕಿಟ್ ವಿತರಣೆಗೆ ಡಿಸಿಎಂ ಚಾಲನೆ
* ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ ಎಂದ ಡಿಸಿಎಂ
* ಅತ್ತ ಸಿಎಂ ರಾಜೀನಾಮೆ ಮಾತು ಬೆನ್ನಲ್ಲೇ ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ ಎಂದ ಡಿಸಿಎಂ
ಬೆಂಗಳೂರು, (ಜೂನ್.06): ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪನನವರ ನಾಯಕತ್ವ ಬದಲಾವಣೆ ಮತ್ತೆ ಮುನ್ನೆಲೆಗೆ ಬಂದಿದ್ದು, ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ನೀಡುವೆ ಎಂದು ಸ್ವತಃ ಸಿಎಂ ಸ್ಪಷ್ಟಪಡಿದ್ದಾರೆ. ಇದರ ಮಧ್ಯೆ ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಶಾಸಕ ಮುನಿರತ್ನ ಆಯೋಜಿಸಿದ್ದ ಒಂದು ಲಕ್ಷ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾನುವಾರ ಲಗ್ಗೆರೆಯಲ್ಲಿ ಚಾಲನೆ ನೀಡಿದರು.
'ರಾಜೀನಾಮೆ ನೀಡಲು ಯಡಿಯೂರಪ್ಪಗೆ RSS ಮನವೊಲಿಸಿದೆ'
ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಿದ್ದ ಕಿಟ್‌ಗಳನ್ನು ಹಂಚುವುದಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಉತ್ತಮ ಗೆಲುವು ಸಾಧಿಸಿದ ಶಾಸಕ ಮುನಿರತ್ನ ಅವರಿಗೆ ಸಂಪುಟ ಸೇರುವ ಅವಕಾಶ ಸಿಗುತ್ತದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ಅವರು ತಪ್ಪದೆ ಮಾತು ಉಳಿಸಿಕೊಳ್ಳುತ್ತಾರೆ. ಈ ಬಗ್ಗೆ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.
ಮುನಿರತ್ನ ಕೆಲಸ ಶ್ಲಾಘನೀಯ. ಒಂದು ಲಕ್ಷ ರೇಷನ್ ಕಿಟ್ ವಿತರಣೆ ಅಂದರೆ ಸಣ್ಣ ಸಂಗತಿ ಅಲ್ಲ. ಯಾರೇ ಬಂದರೂ ರೇಷನ್ ಕೊಡಲಾಗುತ್ತಿದೆ. ಇದು ಖಂಡಿತಾ ಒಳ್ಳೆಯ ಕೆಲಸ ಎಂದರು.
ನಗರದಲ್ಲಿ ಯಾರೂ ಹಸಿವಿಂದ ಇರಬಾರದು. ಎಲ್ಲರಿಗೂ ಆಹಾರ ಸಿಗಬೇಕು. ಈ ನಿಟ್ಟಿನಲ್ಲಿ ಮುನಿರತ್ನ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಎಲ್ಲರೂ ದೈಹಿಕ ಅಂತರ ಪಾಲಿಸುತ್ತಾ ಬಂದು ಕಿಟ್‌ಗಳನ್ನು ಸ್ವೀಕರಿಸುತ್ತಿದ್ದಾರೆಂದು ಡಿಸಿಎಂ ಹೇಳಿದರು.