ಸಿಎಂ ಆದ ಬಳಿಕ ಮೊದಲ ಬಾರಿಗೆ ಇಂದು ಸೋನಿಯಾ ಭೇಟಿಯಾಗಲಿರುವ ಸಿದ್ದರಾಮಯ್ಯ

By Kannadaprabha NewsFirst Published May 26, 2023, 6:36 AM IST
Highlights

ಸಚಿವ ಸಂಪುಟ ವಿಸ್ತರಣೆ ತಿಕ್ಕಾಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. 

ಬೆಂಗಳೂರು (ಮೇ.26): ಸಚಿವ ಸಂಪುಟ ವಿಸ್ತರಣೆ ತಿಕ್ಕಾಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರು ಸೋನಿಯಾರನ್ನು ಭೇಟಿ ಮಾಡುತ್ತಿರುವುದು ಇದು ಮೊದಲ ಬಾರಿ. ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲು ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರೊಂದಿಗೆ ಸರಣಿ ಸಭೆ ನಡೆಸಿದರು.

ಆದರೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ದೆಹಲಿಯಲ್ಲೇ ಉಳಿದಿದ್ದು, ಶುಕ್ರವಾರ ಬೆಳಗ್ಗೆ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದು ಶುಕ್ರವಾರ ಮತ್ತೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ತ್ರೀಯರಿಗೆ ಫ್ರೀ ಟಿಕೆಟ್‌ ಕೊಟ್ಟು ನಮ್ಮ ಕಾಪಾಡಿ: ಸಾರಿಗೆ ನೌಕರರ ಅಳಲು!

ಸಂಪುಟ ಸರ್ಕಸ್‌ ಈಗ ದೆಹಲಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವಿನ ತೀವ್ರ ಹಗ್ಗ-ಜಗ್ಗಾಟದ ಸಾಧ್ಯತೆ ಇರುವ ಕಾಂಗ್ರೆಸ್‌ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಸರ್ಕಸ್‌ ಬುಧವಾರ ದೆಹಲಿಯಲ್ಲಿ ಆರಂಭವಾಗಿದೆ. ಈ ಸರ್ಕಸ್‌ ಗುರುವಾರ ದಿನವಿಡೀ ನಡೆಯುವ ನಿರೀಕ್ಷೆಯಿದ್ದು, ಹೈಕಮಾಂಡ್‌ ಉಭಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರೆ ಮೇ 27 ಅಥವಾ 28 ಸಂಪುಟ ವಿಸ್ತರಣೆ ಘಟಿಸಬಹುದು. 

ಮಾಸಾಂತ್ಯದೊಳಗೆ ಸಂಪುಟ ವಿಸ್ತರಣೆ ನಡೆಸಬೇಕು ಮತ್ತು ಖಾತೆ ಹಂಚಿಕೆಯನ್ನೂ ಮಾಡಬೇಕು ಎಂಬ ಗುರಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬುಧವಾರ ದೆಹಲಿಗೆ ತೆರಳಿದರು. ಇದರ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳು ಸಹ ದೆಹಲಿ ಮುಟ್ಟಿದ್ದು, ಭರ್ಜರಿ ಲಾಬಿ ಆರಂಭಿಸಿದ್ದಾರೆ. ಇದು ಸಂಪುಟ ಸರ್ಕಸ್‌ ಅನ್ನು ಮತ್ತಷ್ಟುಕ್ಲಿಷ್ಟಗೊಳಿಸಿದೆ. ಒಟ್ಟಾರೆ ಸಚಿವ ಸಂಪುಟದಲ್ಲಿ (34 ಸ್ಥಾನ) ಜಾತಿ ಲೆಕ್ಕಾಚಾರದ ಪ್ರಕಾರ ಲಿಂಗಾಯತರಿಗೆ ಆರು, ಒಕ್ಕಲಿಗರಿಗೆ ಐದು, ಪರಿಶಿಷ್ಟರಿಗೆ 5, ಪರಿಶಿಷ್ಟಪಂಗಡಕ್ಕೆ 2, ಹಿಂದುಳಿದವರಿಗೆ 4, ಮುಸ್ಲಿಂ - 3, ಕುರುಬ -3, ಕ್ರೈಸ್ತರು, ಜೈನ, ಬ್ರಾಹ್ಮಣದಂತಹ ಸಮುದಾಯಗಳಿಗೆ ತಲಾ ಒಂದು ಸ್ಥಾನ ನೀಡುವ ಸಾಧ್ಯತೆಯಿದ್ದು, ಮೂರು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳುವ ಸಾಧ್ಯತೆಯಿದೆ.

ಮಂತ್ರಿಮಂಡಲ ಪೂರ್ಣ ಭರ್ತಿಗೆ ನಿರ್ಧಾರ, 24 ಮಂದಿಗೆ ಸಚಿವ ಸ್ಥಾನ: ಪ್ರಭಾವಿ ಖಾತೆಗೆ ಸಿದ್ದು-ಡಿಕೆಶಿ ಪೈಪೋಟಿ

ಸದ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸಂಪುಟದಲ್ಲಿ 10 ಮಂದಿ ಇದ್ದು, ಬಾಕಿ ಉಳಿದ 24ರ ಪೈಕಿ 20 ಸ್ಥಾನಗಳನ್ನು ತುಂಬಿಕೊಳ್ಳುವ ಉದ್ದೇಶವಿದೆ. ಆದರೆ, ಒತ್ತಡ ತೀವ್ರವಾದರೆ ಇದು 21 ಅಥವಾ 22ಕ್ಕೂ ಹೆಚ್ಚಬಹುದು ಎಂದು ಮೂಲಗಳು ಹೇಳುತ್ತವೆ. ಬೆಂಗಳೂರು ನಗರಕ್ಕೆ ಈಗಾಗಲೇ ಮೂರು ಸಚಿವ ಸ್ಥಾನ ನೀಡಲಾಗಿದೆ (ರಾಮಲಿಂಗಾರೆಡ್ಡಿ, ಕೆ.ಜೆ. ಜಾಜ್‌ರ್‍, ಜಮೀರ್‌ ಅಹ್ಮದ್‌). ಹೀಗಾಗಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿರುವ 12 ಸೀಟುಗಳಿಗೆ ಎಷ್ಟುಸಚಿವ ಸ್ಥಾನ ನೀಡಬೇಕು ಎಂಬ ಜಿಜ್ಞಾಸೆಯಿದೆ. ಹೆಚ್ಚು ಎಂದರೆ ಇನ್ನೂ ಮೂರು ಸ್ಥಾನಗಳನ್ನು ಮಾತ್ರ ನೀಡಬಹುದು ಎನ್ನುತ್ತವೆ ಮೂಲಗಳು. ಇದು ನಿಜವೇ ಆಗಿದ್ದರೆ ಇನ್ನು ಮೂರು ಮಂದಿಗಷ್ಟೇ ಅವಕಾಶ ಸಿಗುವ ಸಾಧ್ಯತೆಯಿದೆ.

click me!