ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ ನಿವೃತ್ತ ಸೈನಿಕ, ಮುಂದಿನ ಚುನಾವಣೆಯ ಅಭ್ಯರ್ಥಿ?

By Suvarna NewsFirst Published Feb 15, 2022, 3:56 PM IST
Highlights

* ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ ನಿವೃತ್ತ ಸೈನಿಕ, 
* ಸಿಂದಗಿ ಕ್ಷೇತ್ರದ ಪ್ರಭಾವಿ ಮುಖಂಡ ಶಿವಾನಂದ ಪಾಟೀಲ್
* ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆಗೆ ಸರ್ವ ಕ್ರಮ ಎಂದ ಕುಮಾರಸ್ವಾಮಿ

ಬೆಂಗಳೂರು, (ಫೆ.15)::ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ (Retired Soldier) ಶಿವಾನಂದ ಪಾಟೀಲ್(Shivananda Patil) ಅವರು ತಮ್ಮ ನೂರಾರು ಬೆಂಬಲಿಗರ ಜತೆಯಲ್ಲಿ ಇಂದು(ಮಂಗಳವಾರ) ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರ ಸಮ್ಮುಖದಲ್ಲಿ ಜೆಡಿಎಸ್ (JDS) ಪಕ್ಷಕ್ಕೆ  ಸೇರ್ಪಡೆಯಾದರು.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅವರ ಜತೆಯಲ್ಲಿ ಆ ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಪಕ್ಷಕ್ಕೆ ಸೇರ್ಪಡೆಯಾದರು.

Latest Videos

Karnataka Politics 5 ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡ ಗುರು-ಶಿಷ್ಯ, ಚರ್ಚೆಗೆ ಗ್ರಾಸ

ತದನಂತರ ಮಾತನಾಡಿದ ಕುಮಾರಸ್ವಾಮಿ ಅವರು; ಸಿಂದಗಿ ಕ್ಷೇತ್ರ ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೆಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ. ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು ಶಾಶ್ವತವಾಗಿ ನೀರಾವರಿ  ಪರಿಹಾರ ಒದಗಿಸಿದ್ದವರು ಗೌಡರು ಎಂದರು.

ಮಾಜಿ ಸಚಿವರಾದ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು. ಅವರ ನಿಧನದ ನಂತರ ನಡೆದ ಉಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದ್ದು ನಿಜ. ಈಗ ಅದೆನ್ನೆಲ್ಲ ಸರಿ ಮಾಡುವ ಕಾಲ ಬಂದಿದೆ. ಶಿವಾನಂದ ಪಾಟೀಲ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲಾಗುವುದು. ಆ ನಿಟ್ಟಿನಲ್ಲಿ ಇನ್ನೂ ಅನೇಕ ಮುಖಂಡರು ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಶೀಘ್ರವೇ ಜಲಧಾರೆ ಆರಂಭ:
ನಾಡಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಜಾರಿ ಮಾಡುವುದು, ನಮ್ಮ ನೀರಾವರಿ ಹಕ್ಕುಗಳನ್ನು ಸಾಧಿಸಿಕೊಳ್ಳುವುದು ಸೇರಿದಂತೆ ಇಡೀ ರಾಜ್ಯಕ್ಕೆ ಜಲ ಸಮಾನತೆ ಕಲ್ಪಿಸಿ ಸಮಗ್ರ ಪ್ರಗತಿ ಸಾಧಿಸುವ ಪರಿಕಲ್ಪನೆಯೊಂದಿಗೆ ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಕಾರ್ಯಕ್ರಮ ಶೀಘ್ರವೇ ಶುರುವಾಗಲಿದೆ. ಶುದ್ಧ ಕುಡಿಯುವ ನೀರು, ಬೇಸಾಯಕ್ಕೆ ಅಗತ್ಯ ನೀರು ಕೊಡುವ ಉದ್ದೇಶ ನಮ್ಮದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ್ ಚವಾಣ್ ಮಾತನಾಡಿ; ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ಶಿವಾನಂದ ಪಾಟೀಲ್ ಅವರಿಗೆ ಸ್ವಾಗತ. ಅವರಿಂದ ಪಕ್ಷಕ್ಕೆ ಒಳ್ಳೆಯದಾಗಲಿ ಎಂದರು.

ಪಕ್ಷದ ಭಾವುಟ ನೀಡುವ ಮೂಲಕ ಕುಮಾರಸ್ವಾಮಿ ಅವರು ಶಿವಾನಂದ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಮುಖಂಡರಾದ ಸುನೀತಾ ಚವಾಣ್ ಸೇರಿದಂತೆ ಸಿಂದಗಿ ಕ್ಷೇತ್ರದ ಅನೇಕ ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿಂದಗಿ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಎಂ. ಸಿ ಮನಗೂಳಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರು ಸಹ ಆಗಿದ್ದರು.

ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಎಂ. ಸಿ. ಮನಗೂಳಿ ನಿಧನದ ಬಳಿಕ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿದರು. ಉಪ ಚುನಾವಣೆ ಎದುರಾದಾಗ ಜೆಡಿಎಸ್ ನಾಜಿಯಾ ಅಂಗಡಿಗೆ ಟಿಕೆಟ್ ನೀಡಿತ್ತು. 

ಉಪ ಚುನಾವಣೆಯಲ್ಲಿ ಅಶೋಕ ಮನಗೂಳಿ ಕಾಂಗ್ರೆಸ್‌ನಿಂದ, ನಾಜಿಯಾ ಅಂಗಡಿ ಜೆಡಿಎಸ್‌ನಿಂದ ಮತ್ತು ಬಿಜೆಪಿಯಿಂದ ರಮೇಶ ಭೂಸನೂರ ಅಭ್ಯರ್ಥಿಯಾಗಿದ್ದರು.  ಅಂತಿಮವಾಗಿ ರಮೇಶ ಭೂಸನೂರ 31,088 ಮತಗಳಿಂದ ಜಯಗಳಿಸಿದರು.

ಇದೀಗ ಶಿವಾನಂದ ಪಾಟೀಲ್ ಅವರು ಜೆಡಿಎಸ್ ಸೇರಿದ್ದು, ಮುಂಬರು ವಿಧಾನಸಭೆ ಚುನಾವಣೆಗೆ ಸಿಂಧಗಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ.
 

click me!