* ಕದ್ದೋ ಪದ್ದೋ ಮಾಡಿದ್ರೆ ಪೊಲೀಸಿದೆ, ಸರ್ಕಾರವಿದೆ, ಕೇಸ್ ಇದೆ. ತನಿಖೆ ಇದೆ
* ನಾನು ಬಂಡೇ ಒಡ್ಕೋತೀನೋ, ಮಾರಿಕೋತೀನೋ ಅದು ನನಗೆ ಬಿಟ್ಟ ವಿಚಾರ
* ನಾನು ತಪ್ಪುಮಾಡಿದ್ದೇನೆ ಎನ್ನುವುದಾದರೆ ವಿಧಾನಸೌಧದಲ್ಲಿ ಪ್ರಸ್ತಾವನೆ ಮಾಡಲಿ
ಚನ್ನಪಟ್ಟಣ(ಫೆ.15): ನನ್ನ ಜಮೀನಿನಲ್ಲಿ ಕಲ್ಲಿದೆ, ಮಣ್ಣಿದೆ, ನಾನು ಬಂಡೇ ಒಡ್ಕೋತೀನೋ, ಮಾರಿಕೋತೀನೋ ಅದು ನನಗೆ ಬಿಟ್ಟ ವಿಚಾರ. ಕದ್ದೋ ಪದ್ದೋ ಮಾಡಿದ್ರೆ ಪೊಲೀಸಿದೆ, ಸರ್ಕಾರವಿದೆ, ಕೇಸ್ ಇದೆ. ತನಿಖೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ(HD Kumaraswamy) ಪರೋಕ್ಷವಾಗಿ ಟಾಂಗ್ ನೀಡಿದರು.
ನಾನು ತಪ್ಪುಮಾಡಿದ್ದೇನೆ ಎನ್ನುವುದಾದರೆ ವಿಧಾನಸೌಧದಲ್ಲಿ ಪ್ರಸ್ತಾವನೆ ಮಾಡಲಿ. ಹಿಂದೆಯೆಲ್ಲಾ ಮಾಡಿಯಾಗಿದೆ ಈಗಲೂ ಪ್ರಸ್ತಾಪ ಮಾಡಲಿ, ತನಿಖೆ ನಡೆಸಲಿ ಯಾರು ಬೇಡ ಅಂತಾರೆ ಎಂದು ಪ್ರಶ್ನಿಸಿದರು. ಯಾರ ಮೇಲೆ ಪ್ರೀತಿ ಜಾಸ್ತಿ ಇರುತ್ತದೋ ಅವರ ಮೇಲೆ, ಯಾರು ಕಣ್ಣಿಗೆ ಕಾಣುತ್ತಾರೋ ಅವರ ಮೇಲೆ ಟಾರ್ಗೆಟ್ ಇರುತ್ತದೆ. ನಾವು ಪಕ್ಕದಲ್ಲೇ ಇದ್ದೇವೆ ಅದಕ್ಕೆ ನಮ್ಮ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ ಎಂದ ಅವರು, ರಾಮನಗರದಲ್ಲಿ ಕಾಂಗ್ರೆಸ್ ಬೆಳೆಯಲು ಬಿಡೋಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕಾಲ ಬರುತ್ತದೆ. ಜನ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ: ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡುವಂತೆ ಡಿಕೆಶಿ ಆಗ್ರಹ
ಇದು ಕೋವಿಡ್‌ನಿಂದ, ಕೋವಿಡ್‌ಗಾಗಿ ಕೋವಿಡ್‌ಗೋಸ್ಕರ ಭಾಷಣ: ಎಚ್‌ಡಿಕೆ
ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು(Governor) ಮಾಡಿದ ಭಾಷಣವು ಕೋವಿಡ್‌ನಿಂದ, ಕೋವಿಡ್‌ಗಾಗಿ, ಕೋವಿಡ್‌ಗೋಸ್ಕರವೇ(Covid-19) ಮಾಡಿರುವ ಭಾಷಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮುನ್ನೋಟದಂತೆ ಇರಬೇಕಾಗಿದ್ದ ರಾಜ್ಯಪಾಲರ ಭಾಷಣವು ನೀರಸ ಮತ್ತು ನಿರಾಶಾದಾಯಕವಾಗಿತ್ತು. ಸರ್ಕಾರದ ಹಿಂದಿನ ಮತ್ತು ಮುಂದೆ ಮಾಡಬಹುದಾದ ಅಭಿವೃದ್ಧಿಯ ಬಗ್ಗೆ ಭಾಷಣದಲ್ಲಿ ಏನೇನು ಹೇಳಿಲ್ಲ. ಸ್ಪಷ್ಟತೆ, ನಿರ್ದಿಷ್ಟದಿಕ್ಸೂಚಿ ಇಲ್ಲದ ಭಾಷಣ ಇದು. ರಾಜ್ಯಪಾಲರ ಭಾಷಣದ ಮೂಲಕವೇ ಮುಂದಿನ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಸರ್ಕಾರವೇ ನೇರವಾಗಿ ಜನರಿಗೆ ಹೇಳಿದಂತೆ ಇದೆ. ಅತ್ಯಂತ ಅಮೂಲ್ಯವಾದ ರಾಜ್ಯಪಾಲರ ಭಾಷಣದಲ್ಲಿ ಹಳೆಯ ಕೋವಿಡ್ ಅಂಶಗಳನ್ನಷ್ಟೇ ಓದಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸಿದ್ದು, ಡಿಕೆಶಿ ಇಬ್ಬರಿಗೂ ಸಿಎಂ ಆಗುವ ಹುಚ್ಚು: ಕುಮಾರಸ್ವಾಮಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಬ್ಬರಿಗೂ ಮುಖ್ಯಮಂತ್ರಿಯಾಗುವ ಹುಚ್ಚು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಫೆ.05 ರಂದು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ್ದ ಅವರು, ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್(Congress) ಪಕ್ಷ ರಾಜಕೀಯ(Politics) ಮಾಡುವುದನ್ನು ಬಿಡಬೇಕು. ಇಬ್ಬರಿಗೂ ಓಟು ಪಡೆಯುವ ಹಾಗೂ ಸಿಎಂ ಆಗುವ ಹುಚ್ಚುತನ ಹತ್ತಿಕೊಂಡಿದೆ. ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವುದು ಅವರಿಗಿಲ್ಲ. ಬಿಜೆಪಿಯವರಿಗೆ ಕೂಡ ಮತ ಪಡೆಯುವ ಹುಚ್ಚು ಬಂದಿದೆ ಎಂದು ಟೀಕಾ ಪ್ರಹಾರ ನಡೆಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಾರೆ. ಸಿದ್ದರಾಮಯ್ಯ ಒಂದು ಮಾತು ಹೇಳಿದೆ, ಡಿ.ಕೆ.ಶಿವಕುಮಾರ್ ಒಂದು ಮಾತು ಹೇಳುತ್ತಾರೆ. ಇವರಲ್ಲಿ ಒಬ್ಬರಿಗೆ ಮುಸ್ಲಿಮರ(Muslim) ಮತಗಳನ್ನು ಪಡೆಯುವ ಉಮೇದು. ಮತ್ತೊಬ್ಬರಿಗೆ ಮುಸ್ಲಿಮರ ಪರ ಮಾತಾಡಿದರೆ ಏನು ಹೆಚ್ಚು ಕಡಿಮೆಯಗುತ್ತದೋ ಎಂಬ ಭಯ ಎಂದು ವಾಗ್ದಾಳಿ ನಡೆಸಿದ್ದರು.
Congress Politics: ಹೆಚ್ಚು ಸದಸ್ಯರ ನೋಂದಣಿ ಮಾಡದಿದ್ರೆ ಕ್ರಮ: ಕಾರ್ಯಕರ್ತರಿಗೆ ಡಿಕೆಶಿ ಖಡಕ್ ವಾರ್ನಿಂಗ್
ಮಹದಾಯಿ ಬಗ್ಗೆ ಎರಡು ನಾಲಿಗೆ:
ಮಹದಾಯಿ(Mahadayi) ನದಿ ನೀರಿನ ವಿವಾದ ಬಗ್ಗೆ ಕಾಂಗ್ರೆಸ್ ಎರಡು ನಾಲಿಗೆ ನೀತಿ ಅನುಸರಿಸುತ್ತಿದೆ. ಮಹದಾಯಿ ಬಗ್ಗೆ ಆ ಪಕ್ಷದ ನಾಯಕ ಸತೀಶ್ ಜಾರಕಿಹೊಳಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಯಾವುದೇ ಕಾರಣಕ್ಕೂ ಮಹದಾಯಿ ನೀರನ್ನು ಗೋವಾದಿಂದ ಬಿಟ್ಟುಕೊಡಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಅವರ ದ್ವಿಮುಖ ನೀತಿ ತೋರಿಸುತ್ತದೆ ಎಂದು ಹೇಳಿದ್ದರು.
ಕಾಂಗ್ರೆಸ್ ತೊರೆಯಲು ಮುಂದಾಗಿರುವ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ(CM Ibrahim) ಅವರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್ ಜತೆ ಗುರುತಿಸಿಕೊಂಡವರು. ನಡುವೆ ಕೆಲ ವ್ಯತ್ಯಾಸಗಳಾಗಿದ್ದವು. ಈಗ ಮತ್ತೆ ಜೆಡಿಎಸ್ ಜತೆ ಸೇರಿ ಮತ್ತೊಂದು ರಂಗ ರಚನೆ ಬಗ್ಗೆ ಅವರು ಮುಂದಾದರೆ ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದ್ದರು.