ಗೂಟದ ಕಾರಿಗಾಗಿ 23 ಸಚಿವರು ಬೀದಿಪಾಲು: ಸಿದ್ದು ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ!

By Kannadaprabha NewsFirst Published Oct 13, 2021, 8:12 AM IST
Highlights

* ಮೈಸೂರಿನಲ್ಲಿ ಮಾಜಿ ಸಿಎಂ ಗಂಭೀರ ಆರೋಪ

* ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದು ಸರ್ಕಾರ ಬೀಳಿಸಿದ್ರು: ಎಚ್‌ಡಿಕೆ

* ಗೂಟದ ಕಾರಿಗಾಗಿ 23 ಸಚಿವರು ಬೀದಿಪಾಲು

ಮೈಸೂರು(ಅ.13): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ಮುಂದುವರೆಸಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸರ್ಕಾರ ತೆಗೆದ ಮಹಾನ್‌ ನಾಯಕ ನೀನು (ಸಿದ್ದರಾಮಯ್ಯ) ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ(Chamundi Hills) ಮಂಗಳವಾರ ಭೇಟಿ ನೀಡಿದ್ದ ಕುಮಾರಸ್ವಾಮಿ ಸುದ್ದಿಗಾರರ ಜೊತೆ ಮಾತನಾಡಿ, ಗೂಟದ ಕಾರಿಗಾಗಿ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದವರು ನೀವು. ಯಡಿಯೂರಪ್ಪ(BS Yediyurappa) ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟುಅನ್ನೋದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟು ಕುತಂತ್ರ ಮಾಡುತ್ತೀರಾ ಅನ್ನುವುದು ನನಗೆ ಗೊತ್ತಿದೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯಗೆ ನನ್ನ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರುವುದಿಲ್ಲ. ಮಂಡ್ಯ ಚುನಾವಣೆಯಲ್ಲಿ ಸಿದ್ದರಾಮಯ್ಯ(Siddaramaiah) ಸೋಲಿಸಿದರು ಅಂತ ನಾನು ಹೇಳಿಲ್ಲ. ಸಿದ್ದರಾಮಯ್ಯ ಸ್ವತಃ ಬೆನ್ನು ತಟ್ಟಿಕೊಳ್ಳುವುದು ಬೇಡ. ಕಾಂಗ್ರೆಸ್‌, ಬಿಜೆಪಿ, ರೈತ ಸಂಘ ಸೇರಿ ನಿಖಿಲ್‌(Nikhil) ಸೋಲಿಸಿದ್ದಾರೆ. ಕೌರವರ ರೀತಿ ಚಕ್ರವ್ಯೂಹ ರಚಿಸಿ ಕುತಂತ್ರ ಮಾಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನೂ ಇಲ್ಲ. ಆ ರೀತಿ ಇದ್ದರೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಸೋಲುತ್ತಿದ್ದರು ಎಂದು ಅವರು ಪ್ರಶ್ನಿಸಿದರು.

ಸಿದ್ದು ಯಾವ ದೊಣ್ಣೆನಾಯಕ:

ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌(Congress) ಪಕ್ಷ ಲೆಕ್ಕಕ್ಕೆ ಇಲ್ಲ. ಅಲ್ಲಿ ಕಾಂಗ್ರೆಸ್‌ ಯಾವಾಗಲೂ ಮೂರನೇ ಸ್ಥಾನದಲ್ಲಿದೆ. ಅಲ್ಲೇನಿದ್ದರೂ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಪೈಪೋಟಿ. ನಾವು ಯೋಚನೆ ಮಾಡಿ ಅಭ್ಯರ್ಥಿ ಹಾಕಿದ್ದೇವೆ. ಸಿದ್ದರಾಮಯ್ಯಗೆ ಪಾಠ ಕಲಿಸಲು ಈ ಅಭ್ಯರ್ಥಿ ಹಾಕಿದ್ದೇವೆ. ಸಿದ್ದರಾಮಯ್ಯ ಯಾವ ದೊಣ್ಣೆನಾಯಕ ಅಂತ ಅವರು ಹೇಳಿದ ಅಭ್ಯರ್ಥಿ ಹಾಕಬೇಕು? ಎರಡು ಕ್ಷೇತ್ರದಲ್ಲಿ ಜೆಡಿಎಸ್‌ ಗಂಭೀರವಾಗಿ ಸ್ಪರ್ಧೆ ಮಾಡಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್‌ನ ಮಹಾನ್‌ ನಾಯಕರು ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಅಭ್ಯರ್ಥಿ ಇಲ್ಲದೇ ಇರುವುದು ನನಗಲ್ಲ. ಕಾಂಗ್ರೆಸ್‌ ನಮ್ಮ ಅಭ್ಯರ್ಥಿಯನ್ನ ಹೈಜಾಕ್‌ ಮಾಡಿ ಟಿಕೆಟ್‌ ಕೊಟ್ಟಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂಬುದು ನಮ್ಮ ನಿರ್ಧಾರ ಆಗಿತ್ತು. ಈ ಹಿಂದೆಯೂ ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟಿದ್ದೇವೆ ಎಂದರು.

click me!