ಮೈಸೂರು ಜಿಲ್ಲೆಯೊಳಗೆ ಇದ್ದ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳನ್ನು ಪ್ರತ್ಯೇಕಗೊಳಿಸಿ, ಚಾಮರಾಜನಗರ ಎಂಬ ನೂತನ ಜಿಲ್ಲೆ 1997ರ ಆಗಸ್ಟ್ 15ರಂದು ಉದಯವಾಯಿತು.
ದೇವರಾಜು ಕಪ್ಪಸೋಗೆ
ಚಾಮರಾಜನಗರ (ಮೇ.20): ಮೈಸೂರು ಜಿಲ್ಲೆಯೊಳಗೆ ಇದ್ದ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳನ್ನು ಪ್ರತ್ಯೇಕಗೊಳಿಸಿ, ಚಾಮರಾಜನಗರ ಎಂಬ ನೂತನ ಜಿಲ್ಲೆ 1997ರ ಆಗಸ್ಟ್ 15ರಂದು ಉದಯವಾಯಿತು. ಚಾಮರಾಜನಗರವು ಮೈಸೂರಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದ ದಿನ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆಯನ್ನು ಉದ್ಘಾಟಿಸಿದರು. ಅದೇ ದಿನ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲೂ ಉದ್ಘಾಟನಾ ಸಮಾರಂಭ ನಡೆದಿತ್ತು. ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಉದ್ಘಾಟಿಸಿದ್ದರು.
undefined
ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂದು ಸಮಾಜವಾದಿ ನಾಯಕ ಜೆ.ಎಚ್.ಪಟೇಲ್ ಅವರು ಜಿಲ್ಲಾ ಕೇಂದ್ರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಹದೇಶ್ವರ ಬೆಟ್ಟದಲ್ಲಿ ಆಯೋಜಿಸುವ ಮೂಲಕ ಮೌಢ್ಯಚರಣೆಗೆ ಕಾರಣರಾಗಿದ್ದರು. ಆದರೆ, ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಉದ್ಘಾಟಿಸುವ ಮೂಲಕ ಮೌಢ್ಯಕ್ಕೆ ತಿಲಾಂಜಲಿ ಹಾಡಿದ್ದರು. ಆ ಸಂದರ್ಭದಲ್ಲಿ ಶಾಸಕರಾಗಿದ್ದ ಎ.ಆರ್.ಕೃಷ್ಣಮೂರ್ತಿ, ಮಾಜಿ ರಾಜ್ಯಪಾಲ ಬಿ. ರಾಚಯ್ಯ ಸಾಥ್ ನೀಡಿದ್ದರು.
ಚಾಮರಾಜನಗರ ಮೌಢ್ಯ ಅಳಿಸಿದ್ದ ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ!
2013ರಲ್ಲಿ ಮುಖ್ಯಮಂತ್ರಿಯಾದ ಬಳಿಕ 17ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಸಾವಿರಾರು ಕೋಟಿ ರು. ಅನುದಾನ ನೀಡಿದ್ದರು. ಪರಿಣಾಮ ಜಿಲ್ಲೆಯ ಸ್ವರೂಪ ಬದಲಾಗಿದೆ. ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳು ಹಂತಹಂತವಾಗಿ ಸಿಗುತ್ತಿವೆ. ಸಾಂಸ್ಕ್ರತಿಕ ಹಾಗೂ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ ಆರ್ಥಿಕ, ಸಾಮಾಜಿಕ ಮತ್ತಷ್ಟು ಪ್ರಗತಿಯಾಗಬೇಕಾದರೆ ಮುಂದಿನ ದಿನಗಳಲ್ಲೂ ಜಿಲ್ಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ಧಾರ್ಮಿಕ ಪ್ರವಾಸೋದ್ಯಮ ಆದ್ಯತೆ ನೀಡಲಿ: ದಟ್ಟಅರಣ್ಯದೊಳಗಿರುವ ರಾಜ್ಯದ ಮೂರು ಪ್ರಸಿದ್ಧ ದೇವಾಲಯಗಳು ಧಾರ್ಮಿಕ ತಾಣದ ಜೊತೆಗೆ ಪ್ರವಾಸಿ ತಾಣವೂ ಆಗಿವೆ. ಮಲೆ ಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಮೇಲೆ ಹೆಚ್ಚಿನ ಆದಾಯ ಗಳಿಸುವ ಮೂಲಕ ರಾಜ್ಯ ಮತ್ತು ಹೊರ ರಾಜ್ಯದ ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ, ಬಿಳಿಗಿರಿರಂಗನಬೆಟ್ಟಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಕೃತಿ ಸೌಂದರ್ಯದ ಮೂಲಕ ಗಮನ ಸೆಳೆದಿವೆ. ಶೇ.48 ಅರಣ್ಯ ಹೊಂದಿದ ಜಿಲ್ಲೆಯಲ್ಲಿ ನಾಲ್ಕು ಸಂರಕ್ಷಿತ ಪ್ರದೇಶಗಳಿವೆ.
ಈ ಪೈಕಿ ಎರಡು ಹುಲಿ ಸಂರಕ್ಷಿತ ಪ್ರದೇಶ (ಬಂಡೀಪುರ ಮತ್ತು ಬಿಆರ್‌ಟಿ) ಇನ್ನೆರಡು ವನ್ಯಧಾಮಗಳು (ಮಹದೇಶ್ವರ ಮತ್ತು ಕಾವೇರಿ) ಪ್ರವಾಸಿ ತಾಣ, ಧಾರ್ಮಿಕ ಕೇಂದ್ರಗಳು ಜಿಲ್ಲೆಯಲ್ಲಿವೆ. ಜಿಲ್ಲೆ ಹಾಗೂ ಸರ್ಕಾರಕ್ಕೆ ಆದಾಯ ತಂದುಕೊಡುತ್ತವೆ. ಬಂಡೀಪುರ, ಕೆ.ಗುಡಿ ಸಫಾರಿ ಕೇಂದ್ರಗಳು, ಭರಚುಕ್ಕಿ, ಹೊಗೇನಕಲ್ ಜಲಪಾತ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿವೆ. ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬಹುದಾದ ಹಲವು ತಾಣಗಳಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಆ ಬಗ್ಗೆ ಪ್ರದೇಶವನ್ನು ಗಮನಹರಿಸಬೇಕಾಗಿದೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಮತ್ತಷ್ಟು ಮತ ನನಗೆ ಬೀಳಲು ಪ್ರಮುಖ ಕಾರಣ: ಶಾಸಕ ಗಣೇಶ್ ಪ್ರಸಾದ್
ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಿ: ಜಿಲ್ಲೆಯಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಉದ್ದಿಮೆ ಸ್ದಾಪನೆಯಾಗದೆ ಜಿಲ್ಲೆ ಹಿಂದುಳಿಯಲು ಪ್ರಮುಖ ಕಾರಣ. ಆರು ವರ್ಷಗಳ ಹಿಂದೆ ಕೆಲ್ಲಂಬಳ್ಳಿ ಬದನಗುಪ್ಪೆ ಪ್ರದೇಶದಲ್ಲಿ 1, 400 ಎಕರೆಯಷ್ಟು ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಈಗ ಕೈಗಾರಿಕೆಗಳು ಬರುವುದಕ್ಕೆ ಆರಂಭವಾಗಿದೆ. ಸ್ಧಳೀಯರಿಗೆ ಉದ್ಯೋಗ ಸಿಗುವುದಕ್ಕೆ ಶುರುವಾಗಿದೆ. ಇನ್ನಷ್ಟುಕೈಗಾರಿಕೆಗಳು ಬರಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಬೇಕಾಗಿದೆ.