ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ವೈಟ್ನರ್ ಬಳಸಿ ಮಾಹಿತಿ ಮುಚ್ಚಿಹಾಕಲಾಗಿದೆ ಎಂಬ ಆರೋಪದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಆ.26): ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 'ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ' ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಯ ಹೆಸರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದ್ದು, ಇದನ್ನು ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಆದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಅರ್ಜಿಯಲ್ಲಿ ಅಧಿಕಾರಿಗಳು ವೈಟ್ನಾರ್ ಹಾಕಿ ಅಡಗಿಸಿದ್ದ ಅಕ್ಷರಗಳನ್ನು ಟಾರ್ಚ್ ಹಾಕಿ ನೋಡುವ ಮೂಲಕ ಸತ್ಯವನ್ನು ಬಹಿರಂಗಪಡಿಸುವ ಮೂಲಕ ಬಿಜೆಪಿ-ಜೆಡಿಎಸ್ ಟೀಕೆಗೆ ತಿರುಗೇಟು ನೀಡಿದ್ದಾರೆ. ಪುನಃ ಇದಕ್ಕೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪುನಃ ಟೀಕೆ ಮುಂದುವರೆಸಿದ್ದಾರೆ.
ಮುಡಾ ಹಗರಣ: ವೈಟ್ನರ್ ಹಿಂದಿನ ಸತ್ಯ ಬಯಲು ಮಾಡಿದ ಸಿಎಂ ಸಿದ್ದರಾಮಯ್ಯ
ಮಾನ್ಯ ಸಿದ್ದರಾಮಯ್ಯನವರೇ 'ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಇದರ ಮೂಲ ದಾಖಲೆ, ಮೂಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು? ನಿಮಗೆ ಈ ಮೂಲ ದಾಖಲೆ ತಂದು ಕೊಟ್ಟ ಮಹಾಶಯರು ಯಾರು? ಇಷ್ಟಕ್ಕೂ ಈ ಮೂಲ ದಾಖಲೆ ಮೂಡಾದಲ್ಲಿದೆಯಾ? ಅಥವಾ ನಿಮ್ಮ ಮನೆಯಲ್ಲಿದೆಯಾ? ಈ ಮೂಲ ದಾಖಲೆಗೆ ಟಾರ್ಚ್ ಹಾಕಿದವರು ಯಾರು? ನೀವಾ..? ಅಥವಾ ಇನ್ನಾರಾದರೂ ಇದ್ದಾರಾ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ನಿಮಗೆ ನಾನು ಇನ್ನೊಂದು ಪ್ರಶ್ನೆ ಕೇಳುತ್ತೇನೆ, ಈ ದಾಖಲೆಯನ್ನೇಕೆ ನೀವು ಕೋರ್ಟ್‌ಗೆ ಕೊಟ್ಟಿಲ್ಲ!? ಈ ಮೂಲಕ ನೀವು ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ದಿಕ್ಕು ತಪ್ಪಿಸಿದ ಹಾಗೆಯೇ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ಕೊಟ್ಟು ಅಲ್ಲಿಯೂ ಟಾರ್ಚ್ ಬಿಟ್ಟು ತೋರಿಸುತ್ತೀರಾ.., ಹೇಗೆ? ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀರಿ.. ಶಿಶುಪಾಲನ ಹಾಗೆ.. ಮಾಡಿದ ತಪ್ಪು ಮುಚ್ಚಿಕೊಳ್ಳಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೀರಿ ಎಂದು ಟೀಕೆ ಮಾಡಿದ್ದಾರೆ.
ಕೋಟಿ ಕೋಟಿ ಒಡೆಯನಾದರೂ ಮೀಸಲಾತಿಯಡಿ ಸಿಎ ನಿವೇಶನ ಪಡೆದ ಖರ್ಗೆ ಪುತ್ರ!
ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮುಡಾ ಹಗರಣದ ದೂರು ಕೊಟ್ಟಿರುವ ಸ್ನೇಹಮಯಿ ಕೃಷ್ಣ ಅವರು ಕೂಡ ಸಿದ್ದರಾಮಯ್ಯ ಅವರ ಎಕ್ಸ್ ಪೋಸ್ಟ್ ವಿರುದ್ಧ ಹರಿಹಾಯ್ದು, ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ಆರೋಪಿ ತನ್ನ ವಿರುದ್ದ ಮಾಡಿರುವ ಅರೋಪಕ್ಕೆ ತಾನೇ ಸಾಕ್ಷ್ಯಾಧಾರ ಕೊಡುತ್ತಾನೆ ಎಂಬುದನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಸ್ವತಃ ಸಾಬೀತು ಪಡಿಸಿದ್ದಾರೆ ಗಮನಿಸಿ. ತಮ್ಮ ಹೆಂಡತಿ ಬರೆದಿದ್ದ ಪತ್ರದ ಪ್ರಕಾರ ದೇವನೂರು 3ನೇ ಹಂತದಲ್ಲಿ ನಿವೇಶನ ಕೊಟ್ಟು ಬಿಡುತ್ತಾರೆ ಎಂಬ ಕಾರಣಕ್ಕೆ ಅವರೇ ಹೇಳಿರುವ ಹಾಗೆ, 'ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ' ಎಂಬುದನ್ನು ವೈಟ್ನರ್ ಹಾಕಿ, ಸತ್ಯಾಂಶ ಮುಚ್ಚಿಡಲಾಗಿದೆ. ದೇವನೂರು 3ನೇ ಹಂತದಲ್ಲಿ ನಿವೇಶನ ಪಡೆಯುವ ಬದಲು, ವಿಜಯನಗರದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ಸತ್ಯಾಂಶ ಮುಚ್ಚಿಟ್ಟಿರುವುದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಸತ್ಯಮೇವ ಜಯತೆ ! ಕರ್ನಾಟಕದ ಜನತೆಗೆ ಸ್ವತಃ ಸತ್ಯವನ್ನು ತಿಳಿಸಿಕೊಟ್ಟ ಸಿದ್ದರಾಮಯ್ಯನವರಿಗೆ ನಮೋ ನಮಃ! ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.