
ಬೆಂಗಳೂರು(ಮಾ.19): ‘ನೀವು ಕೇವಲ ನಾಮಪತ್ರ ಸಲ್ಲಿಸಿ. ನಿಮ್ಮನ್ನು ಗೆಲ್ಲಿಸುವ ಹೊಣೆ ನಮ್ಮದು’ ಎಂದು ಬೆನ್ನು ಬಿದ್ದು ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ಮುಂದಾಗುವಂತೆ ಮನವೊಲಿಸಿದ್ದ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕತ್ವ, ಅನಂತರದ ದಿನದಲ್ಲಿ ಬದಲಾದ ಬಗ್ಗೆ ಸಿದ್ದು ಆಪ್ತ ವಲಯ ಕ್ರುದ್ಧಗೊಂಡಿದೆ.
ಸಿದ್ದರಾಮಯ್ಯ ಅವರನ್ನು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪರಿಗಣಿಸುವಂತೆ ಮಾಡುವಲ್ಲಿ ಕೋಲಾರ ಜಿಲ್ಲೆಯ ನಾಯಕರ ಪಾತ್ರ ದೊಡ್ಡದು. ಅಹಿಂದ ವರ್ಗ ಅತಿ ದೊಡ್ಡ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಗೆಲುವು ಸುಲಲಿತ ಎಂದು ಬಿಂಬಿಸಿ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ಪರಿಗಣಿಸುವಂತೆ ಮಾಡಿದ್ದರು.
ಆರಂಭದಲ್ಲಿ ‘ನೀವು ಚುನಾವಣೆಗೆ ನಾಮ ಪತ್ರಸಲ್ಲಿಸಿದರೆ ಸಾಕು. ಅನಂತರ ರಾಜ್ಯಾದ್ಯಂತ ಪ್ರಚಾರ ನಡೆಸಿ. ನಾವು ಕೋಲಾರದಲ್ಲಿ ಸಂಘಟನೆ ಮಾಡಿ ಗೆಲ್ಲಿಸುತ್ತೇವೆ’ ಎಂದು ಈ ನಾಯಕರು ಭರವಸೆ ನೀಡಿದ್ದರು. ಆದರೆ, ಕಾಲ ಕಳೆದಂತೆ, ‘ಜೆಡಿಎಸ್ ಹಾಗೂ ಬಿಜೆಪಿ ಪ್ರಬಲವಾಗಿ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ನೀವು ಕ್ಷೇತ್ರದ ಕಡೆ ಹೆಚ್ಚು ಗಮನಕೊಡಬೇಕು’ ಎಂದು ಈ ನಾಯಕರು ರಾಗ ಬದಲಿಸಿದ್ದರು. ‘ಚುನಾವಣೆ ಸಮೀಪಿಸುತ್ತಿರುವಂತೆಯೇ, ಕ್ಷೇತ್ರದಲ್ಲಿ ಕನಿಷ್ಠ 20 ದಿನ ನೀವು ನೆಲೆನಿಂತು ಗ್ರಾಮೀಣ ಭಾಗದಲ್ಲಿ ಸಾದ್ಯಂತ ಪ್ರಚಾರ ನಡೆಸಬೇಕು ಎಂದು ಈ ನಾಯಕರು ಒತ್ತಡ ಹಾಕತೊಡಗಿದರು’ ಎನ್ನಲಾಗಿದೆ.
ಇತ್ತೀಚೆಗಂತೂ, ‘ಕೇವಲ ಪ್ರಚಾರ ನಡೆಸಿದರೆ ಸಾಲದು. ಜನಕ್ಕೆ ಮೆಚ್ಚುಗೆಯಾಗುವ ಪ್ರಚಾರ ತಂತ್ರ ಅಳವಡಿಸಿಕೊಳ್ಳಬೇಕು. ಯುಗಾದಿ, ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ಕೊಡಬೇಕು. ಪ್ರಚಾರ ಸಾಮಗ್ರಿ ಬೇಕಾಗುತ್ತದೆ ಎಂದು ಸಂಪನ್ಮೂಲ ಒದಗಿಸಿ’ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸತೊಡಗಿದರು ಎಂದು ಮೂಲಗಳು ಹೇಳಿವೆ. ಇದು ಖುದ್ದು ಸಿದ್ದರಾಮಯ್ಯ ಅವರಿಗೂ ಕೋಲಾರ ನಾಯಕರ ಬಗ್ಗೆ ಬೇಸರ ಮೂಡಲು ಕಾರಣವಾಗಿತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.