ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅಧಿಕಾರ ಗದ್ದುಗೆ ಏರಿರುವ ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಅದೇ ಮಾದರಿ ತಂತ್ರಗಾರಿಕೆ ಅನುಸರಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಪ್ರಚಾರವನ್ನು ಶುರು ಮಾಡಿರುವ ಆಪ್, ಕೇಜ್ರಿವಾಲ್ ಅವರೇ ಅಖಾಡಕ್ಕೆ ದುಮ್ಮಕಲಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಮಾ.19) : ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅಧಿಕಾರ ಗದ್ದುಗೆ ಏರಿರುವ ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಅದೇ ಮಾದರಿ ತಂತ್ರಗಾರಿಕೆ ಅನುಸರಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಪ್ರಚಾರವನ್ನು ಶುರು ಮಾಡಿರುವ ಆಪ್(AAP), ಕೇಜ್ರಿವಾಲ್(Arvind Kejriwal) ಅವರೇ ಅಖಾಡಕ್ಕೆ ದುಮ್ಮಕಲಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿರುವ ಆಪ್, ಮುಂದಿನ ವಾರ ಮೊದಲ ಪಟ್ಟಿಬಿಡುಗಡೆ ಮಾಡಲಿದೆಯಂತೆ. ಅದರಲ್ಲಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ 3-4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಲಿದೆ.
ಆಪ್‌ನಿಂದ ಪ್ರಣಾಳಿಕೆಗಾಗಿ ಜನಾಭಿಪ್ರಾಯ ಸಂಗ್ರಹ
ಕಳೆದ 12 ವರ್ಷಗಳ ಹಿಂದೆಯಷ್ಟೇ ಅಸ್ಥಿತ್ವಕ್ಕೆ ಬಂದಿರುವ ಆಪ್, ಈಗಾಗಲೇ ಎರಡು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಸಗುಡಿಸಲು ಕಸಬರಗಿ ಯತ್ನಿಸಿತ್ತು. ಆದರೆ, ಯಶಸ್ವಿಯಾಗಿರಲಿಲ್ಲ. ಆದರೆ, ಈ ಸಲ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಅವರೇ ಅಖಾಡಕ್ಕಿಳಿದು ಅಲ್ಲಿ ಅನುಸರಿಸಿರುವ ತಂತ್ರಗಳನ್ನು ಇಲ್ಲಿ ಅನುಸರಿಸಲು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಈಗಾಗಲೇ ಒಂದು ಬಾರಿ ಹುಬ್ಬಳ್ಳಿಗೆ ಬಂದು ಆಕ್ಷಾಂಕಿಗಳೊಂದಿಗೆ ಗೌಪ್ಯ ಸಭೆ ನಡೆಸಿ, ಸೂಕ್ತ ಸಲಹೆ ಸೂಚನೆ ನೀಡಿ ತೆರಳಿರುವ ಕೇಜ್ರಿವಾಲ್, ಮಾಚ್‌ರ್ ಕೊನೆ ಅಥವಾ ಏಪ್ರಿಲ್ ಎರಡನೆಯ ವಾರದಲ್ಲಿ ಮತ್ತೊಮ್ಮೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈ ಸಲ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ದೆಹಲಿಯ ಮುಖಂಡ ದಿಲೀಪ್ ಪಾಂಡೆ ಈಗಾಗಲೇ ರಾಜ್ಯಕ್ಕೆ ವಾರಕ್ಕೊಮ್ಮೆ ಬರುತ್ತಿದ್ದು, ಆಕಾಂಕ್ಷಿಗಳಿಗೆ ಯಾವ ರೀತಿ ಪ್ರಚಾರ ಮಾಡಬೇಕು ಎಂಬುದರ ಸಲಹೆ ನೀಡುತ್ತಿದ್ದಾರೆ.
ಬ್ಲಾಕ್, ಸರ್ಕಲ್ ಕಮಿಟಿ:
ಈ ನಡುವೆ ವಿಧಾನಸಭೆ ಚುನಾವಣೆ(Karnataka assembly election)ಯಲ್ಲಿ ಹೇಗಾದರೂ ಮಾಡಿ ಖಾತೆಯನ್ನಾದರೂ ತೆರೆಯಬೇಕೆಂದು ಕಸರತ್ತು ನಡೆಸಿದೆ. ಇದಕ್ಕಾಗಿ ಬ್ಲಾಕ್ ಹಾಗೂ ಸರ್ಕಲ್ ಕಮಿಟಿಗಳನ್ನು ಸಿದ್ಧಪಡಿಸಿದೆ. ಇದೀಗ ಬೂತ್ ಕಮಿಟಿಗಳನ್ನು ರಚಿಸುತ್ತಿದೆ. 50 ಸಾವಿರ ಮತದಾರರಿಗೆ ಒಂದು ಬ್ಲಾಕ್ ಕಮಿಟಿ ಇರುತ್ತದೆ. ಇದಕ್ಕೆ 10 ಜನ ಲೀಡರ್‌ಗಳಿರುತ್ತಾರೆ. ಇನ್ನು 10 ಸಾವಿರ ಮತದಾರರಿಗೆ 50 ಜನ ಲೀಡರ್‌ಗಳಿರುತ್ತಾರೆ. ಇನ್ನು ಮಹಿಳಾ, ಯುವ ಸೇರಿದಂತೆ 16 ವಿಭಾಗಗಳಿಗೂ ಸದಸ್ಯರ ನೇಮಕ ನಡೆಯುತ್ತಿದೆ.
ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗದಿದ್ದರೂ ತನ್ನ ಶಕ್ತಿ ಪ್ರದರ್ಶಿಸುವ ಹವಣಿಕೆ ಆಪ್ ಪಕ್ಷದ್ದು. ಕಳೆದ ಬಾರಿ ಗಡಿಬಿಡಿಯಾಯಿತು. ಯಾವುದೇ ಬಗೆಯ ತಯಾರಿ ಕೂಡ ಇರಲಿಲ್ಲ. ಜತೆಗೆ ಕೇಜ್ರಿವಾಲ್ ಕೂಡ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ, ಈ ಸಲ ಆ ಪರಿಸ್ಥಿತಿ ಇಲ್ಲ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ಸಿಗೆ ಠಕ್ಕರ್ ಕೊಡುವುದು ಗ್ಯಾರಂಟಿ ಎಂಬ ವಿಶ್ವಾಸ ಪಕ್ಷದ ಮುಖಂಡರದ್ದು.
ಒಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಈ ಸಲದ ಚುನಾವಣೆಯಲ್ಲಿ ಪೊರಕೆಯ ಕಮಾಲ್ ತೋರಿಸಲು ಕಸರತ್ತು ನಡೆಸುತ್ತಿರುವುದಂತೂ ಸತ್ಯ. ಆದರೆ ಜನತೆಯಿಂದ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
ದೆಹಲಿ ಶಾಸಕರಿಗೆ ಸ್ಯಾಲರಿ ಹೈಕ್ ಭಾಗ್ಯ..! ಆಮ್ ಆದ್ಮಿ ಸಿಎಂ ಕೇಜ್ರಿವಾಲ್ ಸಂಬಳ ಎಷ್ಟು ನೋಡಿ..
ಬ್ಲಾಕ್, ಸರ್ಕಲ್(Block Circle) ಹಾಗೂ ಬೂತ್ ಕಮಿಟಿಗಳನ್ನು ರಚಿಸಲಾಗುತ್ತಿದೆ. ಜತೆಗೆ ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ ಮಾನ್ ಇನ್ಮೇಲೆ ಪದೇ ಪದೇ ರಾಜ್ಯಕ್ಕೆ ಬಂದು ಪ್ರಚಾರ ಕೈಗೊಳ್ಳಲಿದ್ದಾರೆ. ಈ ಸಲ ನಮ್ಮ ಪಕ್ಷ ಕೆಲ ಸ್ಥಾನಗಳಲ್ಲಾದರೂ ಗೆಲ್ಲುವುದು ಖಚಿತ. ಆಪ್ ಕೂಡ ಈಗಾಗಲೇ ಪ್ರಚಾರವನ್ನೂ ಶುರು ಮಾಡಿದೆ.
ಅನಂತಕುಮಾರ, ಜಿಲ್ಲಾಧ್ಯಕ್ಷ, ಆಮ್ ಆದ್ಮಿ ಪಕ್ಷ