* ದೇಶ ಸಂಕಷ್ಟದಲ್ಲಿದ್ದು, ಸಂವಿಧಾನ ಅಪಾಯದಲ್ಲಿದೆ
* ಪ್ರತಿಯೊಬ್ಬರೂ ಬಿಜೆಪಿ ತೆಗೆಯಬೇಕು ಎಂಬ ಶಪಥ ಮಾಡಬೇಕು
* ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ
ಹುಬ್ಬಳ್ಳಿ(ಅ.08): ವ್ಯವಸ್ಥೆಯನ್ನು ಬುಡಮೇಲು ಮಾಡುವಂಥ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಹಾನಗಲ್(Hanagal), ಸಿಂದಗಿ(Sindagi) ಉಪಚುನಾವಣೆ ಗೆಲ್ಲುವ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕಿದೆ ಎಂದು ಮಾಜಿ ಸಿಎಂ, ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.
ಹಾನಗಲ್(Hanagal) ಉಪಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕೆಪಿಸಿಸಿ ಮುಖಂಡರ ಸಭೆಯಲ್ಲಿ ಮಾತನಾಡಿದರು. ದೇಶ ಸಂಕಷ್ಟದಲ್ಲಿದ್ದು, ಸಂವಿಧಾನ ಅಪಾಯದಲ್ಲಿದೆ. ಕಾಂಗ್ರೆಸ್(Congress) ಅಧಿಕಾರದಲ್ಲಿ ಇರುವಾಗ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಎಂದಿಗೂ ಮಾಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ನಾಶ ಮಾಡಲು ಹೊರಡಲಿಲ್ಲ. ಆದರೆ, ಬಿಜೆಪಿ ಇದೆಲ್ಲವನ್ನೂ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾಯ್ದೆ ಖಂಡಿಸಿ ರೈತರು ಹತ್ತು ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ(Narendra Modi) ಈ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಜೀಪು ಹಾಯಿಸಿದ ಪ್ರಕರಣದಲ್ಲಿ ಈ ವರೆಗೆ ಕೇಂದ್ರ ಸಚಿವರ ಪುತ್ರನ ಮೇಲೆ ಕ್ರಮವಾಗಿಲ್ಲ. ಇಂತಹ ಘಟನೆ ನಡೆದರೆ ವಿಪಕ್ಷದವರು ಹೋಗದಂತೆ ತಡೆಯಲಾಗುತ್ತಿದೆ. ಇಂಥ ಘಟನೆಗಳ ಪರಿಣಾಮ ಮಮತಾ ಬ್ಯಾನರ್ಜಿ ಸೇರಿದಂತೆ ಸಾಕಷ್ಟು ನಾಯಕರು ದನಿ ಎತ್ತುವುದನ್ನೇ ಮರೆತಿದ್ದಾರೆ. ಪ್ರಿಯಾಂಕಾ ಗಾಂಧಿ(Priyanka Gandhi) ಕಾನೂನು ಬಾಹಿರ ಬಂಧನ ಪ್ರಶ್ನಿಸಿ ಸ್ವಮೊಟೊ ಕೇಸ್ ದಾಖಲು ಮಾಡಬಹುದಿತ್ತು. ಆದರೆ, ಅಂಥ ಬೆಳವಣಿಗೆಗಳೂ ಆಗುತ್ತಿಲ್ಲ ಎಂದರು.
'ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಆರ್‌ಎಸ್ಸೆಸ್ ಆಡಳಿತ ಹೆಚ್ಚು'
ನೂತನ ಶಿಕ್ಷಣ ನೀತಿಯ ಜಾರಿ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ನ(RSS) ಹಿಡನ್ ಅಜೆಂಡಾ ಅಡಗಿದೆ. ಹಿಂದಿನ ಗುರುಕುಲ ಪದ್ಧತಿ ಜಾರಿಗೆ ತರಲು ಹೊರಟಿದ್ದಾರೆ. ಶಿಕ್ಷಣ ತಜ್ಞರಲ್ಲದ ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆಯಲಾಗಿದೆ ಎಂದರು.
ನಮ್ಮ ತೆರಿಗೆ ಪಾಲನ್ನು ಕೇಂದ್ರ ನೀಡದೆ ಇದ್ದರೂ ಬೊಮ್ಮಾಯಿ ನೇತೃತ್ವದ ಸರ್ಕಾರ ಪ್ರಶ್ನಿಸದೆ ಹೇಡಿಯಾಗಿದೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಬಿಜೆಪಿ ತೆಗೆಯಬೇಕು ಎಂಬ ಶಪಥ ಮಾಡಬೇಕು. ಅಂದಾಗ ಮಾತ್ರ ಗೆಲವು ಸಾಧಿಸಬಹುದು ಎಂದರು.
ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಬಿಜೆಪಿ(BJP) ಒಡೆದ ಮನೆ. ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲೆ ಗೊಂದಲ ಉಂಟಾಗಿದೆ. ಅಲ್ಲಿ ಅಭ್ಯರ್ಥಿಗಳ ವಿರುದ್ಧವೇ ಹೋರಾಟ ನಡೆಯುತ್ತಿದೆ. ಆದರೆ, ನಮ್ಮಲ್ಲಿ ಸೌಹಾರ್ದ ವಾತಾವರಣ ಇದೆ. ಈ ಚುನಾವಣೆಯಲ್ಲಿ ನಾವು 20 ಸಾವಿರ ಲೀಡ್‌ನಿಂದ ಆಯ್ಕೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದರು.
ಹಾನಗಲ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಕಾಂಗ್ರೆಸ್(Congress) ಯಾವಾಗ ಹೆಚ್ಚಿನ ಸ್ಥಾನವನ್ನು ಗೆದ್ದಿದೆಯೊ ಆಗೆಲ್ಲ ಪಕ್ಷ ಅಧಿಕಾರ ಪಡದಿದೆ. ಹಾನಗಲ್ ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ಸದೃಢವಾಗಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೋದರೆ ಚುನಾವಣೆಯಲ್ಲಿ ಗೆಲ್ಲುವುದು ಸುಲಭ ಎಂದರು.
ಸಭೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ, ವಿಪ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಶಾಸಕ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಭಾಪತಿ ಕೆ.ಬಿ. ಕೋಳಿವಾಡಾ ವಿಪ ಸದಸ್ಯ ಬಿ.ಕೆ.ಹರಿಪ್ರಸಾದ, ಕೆಪಿಸಿಸಿ ಕಾರ್ಯದರ್ಶಿ ದ್ರುವನಾರಾಯಣ, ಸಲೀಂ ಅಹ್ಮದ್, ಪ್ರಕಾಶಗೌಡ ಪಾಟೀಲ ಸೇರಿ ಇತರರಿದ್ದರು.